ಮನೆ ರಾಜ್ಯ ನರೇಗಾ ಕಾಮಗಾರಿಗಳಲ್ಲಿ ಭ್ರಷ್ಟಾಚಾರ: ನಾಲ್ವರು ಪಿಡಿಓಗಳು ಅಮಾನತು

ನರೇಗಾ ಕಾಮಗಾರಿಗಳಲ್ಲಿ ಭ್ರಷ್ಟಾಚಾರ: ನಾಲ್ವರು ಪಿಡಿಓಗಳು ಅಮಾನತು

0

ರಾಯಚೂರು: ದೇವದುರ್ಗ ತಾಲೂಕಿನ 33 ಗ್ರಾಮ ಪಂಚಾಯಿತಿಗಳಲ್ಲಿ ನರೇಗಾ ಕಾಮಗಾರಿಗಳಲ್ಲಿ 100 ಕೋಟಿಗೂ ಅಧಿಕ ಹಣ ಭ್ರಷ್ಟಾಚಾರ ಪ್ರಕರಣ ಸಂಬಂಧ ದೇವದುರ್ಗ ತಾಲೂಕಿನ ನಾಲ್ವರು ಪಿಡಿಓಗಳನ್ನು ಅಮಾನತು ಮಾಡಲಾಗಿದೆ.

ಜಾಲಹಳ್ಳಿ ಪಂ, ಪಿಡಿಓ ಪತ್ಯಪ್ಪ ರಾಠೋಡ್, ಶಾವಂತಗೆರಾ ಪಂ.ಪಿಡಿಓ ಗುರುಸ್ವಾಮಿ, ಕ್ಯಾದಿಗೇರಾ ಪಂ.ಪಿಡಿಓ ಸಿಬಿ ಪಾಟೀಲ್, ಗಾಣದಾಳ ಪಿಡಿಓ ಮಲ್ಲಪ್ಪ ಅವರನ್ನು ಅಮಾನತು ಮಾಡಲಾಗಿದೆ.

ಇಲಾಖಾ ತನಿಖೆ, ವಿಚಾರಣೆ ಕಾಯ್ದಿರಿಸಿ ಅಮಾನತು ಮಾಡಿ ರಾಯಚೂರು ಜಿಲ್ಲಾ.ಪಂ ಸಿಇಓ ಪಾಂಡ್ವೆ ರಾಹುಲ್ ತುಕಾರಾಮ್ ಆದೇಶ ಹೊರಡಿಸಿದ್ದಾರೆ.

ಅಲ್ಲದೇ ಇಬ್ಬರು ಗೆಜೆಟೆಡ್ ಅಧಿಕಾರಿಗಳ ವಿರುದ್ಧ ಎಫ್ ​ಐಆರ್ ದಾಖಲಾಗಿದೆ.

ದೇವದುರ್ಗ ತಾಲ್ಲೂಕಿನ 33 ಗ್ರಾ.ಪಂ ವ್ಯಾಪ್ತಿ ನಡೆದಿದ್ದ ಅಕ್ರಮ ಪ್ರಕರಣದಲ್ಲಿ ಇನ್ನೂ ಕೆಲ ಪಿಡಿಓಗಳು, ಚುನಾಯಿತ ಪ್ರತಿನಿಧಿಗಳು ಭಾಗಿಯಾಗಿರುವ ಆರೋಪ ಕೇಳಿ ಬಂದಿದ್ದು, ಅವರ ವಿರುದ್ಧವೂ ಕ್ರಮಕ್ಕೆ ಸ್ಥಳೀಯರು ಆಗ್ರಹಿಸಿದ್ದಾರೆ.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಿರ್ದೇಶನದ ಮೇರೆಗೆ ನರೇಗಾ ಯೋಜನೆಯ ಸಹಾಯಕ ನಿರ್ದೇಶಕ ಅಣ್ಣರಾವ್ ಅವರು ಅಕ್ರಮದ ಬಗ್ಗೆ ದೂರು ನೀಡಿದ್ದರು. ದೂರಿನಂತೆ ತಾಲ್ಲೂಕು ಪಂಚಾಯಿತಿಯ ಹಿಂದಿನ ಇಒ ಪಂಪಾಪತಿ ಹಿರೇಮಠ, ನಿರ್ಗಮಿತ ನರೇಗಾ ಯೋಜನೆ ಸಹಾಯಕ ನಿರ್ದೇಶಕ ಬಸಣ್ಣ ನಾಯಕ ಹೇಮನೂರು ವಿರುದ್ಧ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 465, 409, 420, 34ರ ಅಡಿ ಪ್ರಕರಣ ದಾಖಲಾಗಿತ್ತು.

ನರೇಗಾ ಯೋಜನೆಯಡಿ 2020-21, 2021-22 ಹಾಗೂ 2022-23ರವರೆಗೆ ನಡೆದ ಕಾಮಗಾರಿ ಅನುಷ್ಠಾನಗೊಂಡ ಅಂದಾಜು ಮೊತ್ತಕ್ಕಿಂತ ಹೆಚ್ಚುವರಿಯಾಗಿ ₹11.64 ಕೋಟಿ ಮತ್ತು ಅನುಷ್ಠಾನಗೊಂಡ ಕಾಮಗಾರಿಗಳ ಕಡತಗಳನ್ನು ನಿರ್ವಹಿಸದೆ ₹32.51 ಕೋಟಿಯನ್ನು ಅಕ್ರಮವಾಗಿ ಪಾವತಿಸಲಾಗಿದೆ. ಈ ಎಲ್ಲ ಪ್ರಕರಣಗಳಲ್ಲಿ ₹102.32 ಕೋಟಿಯನ್ನು ಶ್ರೀ ಮಾರುತೇಶ್ವರ ಎಂಟರ್‌ ಪ್ರೈಸಸ್‌ ಗೆ ನಿಯಮ ಮೀರಿ ಪಾವತಿಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.