ಮೈಸೂರು(Mysuru): ಯುವಕರು ಬೆಳೆದಷ್ಟು ದೇಶ ಬೆಳೆಯುತ್ತದೆ. ಸಾಮಾಜಿಕ ಹಾಗೂ ಶೈಕ್ಷಣಿಕ ವಲಯದಲ್ಲಿ ಅಭಿವೃದ್ಧಿಯಾದರೆ ದೇಶ ಬೆಳವಣಿಗೆಗೆ ಅನುಕೂಲವಾಗಲಿದೆ ಎಂದು ಡಾ.ಬಿ.ಆರ್.ಅಂಬೇಡ್ಕರ್ ಛೇಂಬರ್ ಆಫ್ ಕಾಮರ್ಸ್ ನ ಮಹಾನಿರ್ದೇಶಕ ಇಂದರ್ ಇಕ್ಬಲ್ ಸಿಂಗ್ ಅತ್ವಲ್ ಅಭಿಪ್ರಾಯ ಪಟ್ಟರು.
ಡಾ.ಬಿ.ಆರ್ .ಅಂಬೇಡ್ಕರ್ ಛೇಂಬರ್ ಆಫ್ ಕಾಮರ್ಸ್ ಸಹಯೋಗದಲ್ಲಿ ಮೈಸೂರು ವಿಶ್ವವಿದ್ಯಾನಿಲಯ ಹಾಗೂ ಸಾಮಾಜಿಕ ನ್ಯಾಯ ವೇದಿಕೆ ವತಿಯಿಂದ ಮಾನಸ ಗಂಗೋತ್ರಿಯ ವಿಜ್ಞಾನ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಮುದಾಯ ಆರ್ಥಿಕತೆ ಹಾಗೂ ಸಾಮಾಜಿಕ ಅಭಿವೃದ್ಧಿಯಲ್ಲಿ ಎಸ್‌ಸಿ, ಎಸ್ ಟಿ ಎಂಬ ಕಾರ್ಯಕ್ರಮದಲ್ಲಿ ಮಾತನಾಡಿದರು.
ಯುವಕರು, ಉದ್ಯೋಗ ಹುಡುಕುವ ಬದಲು, ಉದ್ಯೋಗ ನೀಡುವಂತಹ ಮನೋಭಾವನೆ ಬೆಳೆಸಬೇಕು. ಕಾಲೇಜಿನ ದಿನಗಳಲ್ಲಿ ಜೀವನ ರೂಪಿಸಿಕೊಳ್ಳಲು ಆಲೋಚನೆಯನ್ನು ಮೈಗೂಡಿಸಿಕೊಳ್ಳಬೇಕು. ಓದುವ ಸಂದರ್ಭದಲ್ಲಿ ಜೀವನದ ತಿರುವು ಸಿಗುತ್ತವೆ. ದೇಶದ ಅಭಿವೃದ್ಧಿಗೆ ಹಾಗೂ ಯುವ ಜನಾಂಗ ಬೆಳೆಯಬೇಕಾದರೆ ಶಿಕ್ಷಣ ಹಾಗೂ ಉದ್ಯೋಗ ಅತಿ ಮುಖ್ಯ ಎಂದರು.
ಡಾ.ಬಿ.ಆರ್.ಅಂಬೇಡ್ಕರ್ ಅವರ ಹೋರಾಟ ಹಾಗೂ ಅವರ ಅನುಸರಿಸಿದ ಮಾರ್ಗಗಳನ್ನು ವಿದ್ಯಾರ್ಥಿಗಳು ಅನುಸರಿಸಬೇಕು. ಅವರ ಹೋರಾಟ ಹಾಗೂ ಸಾಧನೆ ನಮಗೆಲ್ಲ ಸ್ಪೂರ್ತಿದಾಯಕವಾಗಿದೆ. ನಾವು ಕೂಡ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು ಎನ್ನುವ ಭಾವನೆ ಬರಬೇಕು. ಡಾ.ಬಿ.ಆರ್.ಅಂಬೇಡ್ಕರ್ ಅವರು ಅರ್ಥಶಾಸಜ್ಞ ಕೂಡ ಹೌದು. ದೇಶದಲ್ಲಿ ಆರ್ಥಿಕತೆಯ ಸಮತೋಲನವನ್ನು ಹೇಗೆ ಕಾಪಾಡಬೇಕು ಎಂಬುವುದರ ಬಗ್ಗೆ ಹೇಳಿದ್ದಾರೆ. ಇವರ ಮಾಹಿತಿಯನ್ನು ಅರ್ಥಶಾಸ್ತ್ರಜ್ಞರಾದ ಅಮೃರ್ತ್ಯ ಸೇನ್ ಕೂಡ ಮೆಚ್ಚಿಕೊಂಡಿದ್ದಾರೆ ಎಂದು ತಿಳಿಸಿದರು.
ಅನುದಾನಗಳ ಬಳಕೆಯಿಂದ ಸಮುದಾಯಗಳು ಆರ್ಥಿಕತೆ ಹಾಗೂ ಸಾಮಾಜಿಕತೆಯಲ್ಲಿ ಸುಧಾರಣೆಯಾಗುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಮೀಸಲಿಡುವ ಅನುದಾನವನ್ನು ಪಡೆದುಕೊಂಡು, ಮುಂದೆ ಬರಬೇಕು. ಸರಕಾರಗಳು ಎಸ್ ಸಿ. ಎಸ್ ಟಿಗೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಅದರ ಮಾಹಿತಿ ಅರಿತು ಸದುಪಯೋಗ ಪಡೆದಕೊಳ್ಳಬೇಕು ಎಂದು ಸಲಹೆ ನೀಡಿದರು.
ಬಿಜೆಪಿ ಎಸ್.ಸಿ ಕಚೇರಿ ಉಸ್ತುವಾರಿ ಸಿರಿ ಪ್ರಕಾಶ್ ತನ್ವರ್, ಮೈಸೂರಿನ ಆರ್ ಎಸ್ ಎಸ್ ನ ಸಮಿತಿ ಕಾರ್ಯನಿರ್ವಾಹಕ ಮಾ.ವೆಂಕಟೇಶ್, ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್, ಮಾನಸ ಗಂಗೋತ್ರಿ ಮಾನವಶಾಸ್ತ್ರ ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ.ಎಂ.ಆರ್.ಗಂಗಾಧರ್, ಸಾಮಾಜಿಕ ಕಾರ್ಯ ವಿಭಾಗದ ಪ್ರೊ.ಜ್ಯೋತಿ ಮತ್ತಿತರರು ಹಾಜರಿದ್ದರು.