ಮನೆ ಕಾನೂನು ಅಪರಾಧ ಪ್ರಕರಣ: ನಿರೀಕ್ಷಣಾ ಜಾಮೀನಿಗೆ ಆರೋಪಿ ಅನರ್ಹನಾಗುವುದು ಯಾವಾಗ? ಇಲ್ಲಿದೆ ಮಾಹಿತಿ

ಅಪರಾಧ ಪ್ರಕರಣ: ನಿರೀಕ್ಷಣಾ ಜಾಮೀನಿಗೆ ಆರೋಪಿ ಅನರ್ಹನಾಗುವುದು ಯಾವಾಗ? ಇಲ್ಲಿದೆ ಮಾಹಿತಿ

0

ಬೆಂಗಳೂರು: ಅಪರಾಧ ಪ್ರಕರಣಗಳಲ್ಲಿ ನಿರೀಕ್ಷಣಾ ಜಾಮೀನು ಪಡೆಯಲು ಆರೋಪಿ ಯಾವಾಗ ಅನರ್ಹನಾಗುತ್ತೇನೆ ? ಈ ಬಗ್ಗೆ ಹೈ ಕೋರ್ಟ್ ಹೇಳುವುದೇನು ಎಂಬುದನ್ನು ಈ ಸುದ್ದಿಯಲ್ಲಿ ತಿಳಿಯಿರಿ.

ಅಪರಾಧ ಪ್ರಕರಣಗಳಲ್ಲಿ ಆರೋಪಿಯು ಒಮ್ಮೆ ನ್ಯಾಯಾಲಯದ ಎದುರು ಖುದ್ದಾಗಿ ಅಥವಾ ವಕೀಲರ ಮೂಲಕ ಹಾಜರಾದರೆ ಆತ ಮತ್ತೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಲು ಅನರ್ಹನಾಗುತ್ತಾನೆ ಎಂದು ಹೈಕೋರ್ಟ್ ಆದೇಶಿಸಿದೆ.

ಗೌರಿಬಿದನೂರಿನ ರಮೇಶ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್.ಪಿ ಸಂದೇಶ್ ಅವರಿದ್ಧ ಏಕಸದಸ್ಯಪೀಠ, ಆರೋಪಿ ಒಮ್ಮೆ ಹಾಜರಾದರೆ ನಂತರ ಅಪರಾಧ ದಂಡ ಸಂಹಿತೆ ಸೆಕ್ಷನ್ 438 ಅಡಿ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಲಾಗದು ಎಂದು ಆದೇಶ ನೀಡಿದೆ.

ಆರೋಪಿ ಒಮ್ಮೆ ಖುದ್ದಾಗಿ ಅಥವಾ ವಕೀಲರ ಮೂಲಕ ನ್ಯಾಯಾಲಯದ ಮುಂದೆ ಹಾಜರಾದ ಬಳಿಕ ವಿಚಾರಣೆಗೆ ಗೈರು ಹಾಜರಾದರೆ ಆತನ ವಿರುದ್ದ ಕೋರ್ಟ್ ವಾರಂಟ್ ಹೊರಡಿಸಬಹುದು.ಆ ವೇಳೆ ಆರೋಪಿ ಸಿಆರ್ ಪಿಸಿ ಸೆಕ್ಷನ್ 438 ಅಡಿ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಲಾಗದು ಎಂದು ಕೋರ್ಟ್ ಹೇಳಿದೆ.

ಅರ್ಜಿದಾರ ಈ ಹಿಂದೆ ವಕೀಲರ ಮೂಲಕ ವಿಚಾರಣಾ ಕೋರ್ಟ್‌ಗೆ ಹಾಜರಾಗಿ ಸೆಕ್ಷನ್ 205ರ ಅಡಿಯಲ್ಲಿ ವಿನಾಯ್ತಿ ಪಡೆದಿದ್ದಾನೆ. ವಿಚಾರಣಾ ನ್ಯಾಯಾಲಯವು ಅದನ್ನು ಪರಿಗಣಿಸಿ ವಿನಾಯ್ತಿ ನೀಡಿದೆ. ಹೀಗಾಗಿ, ಅರ್ಜಿದಾರ ಸಿಆರ್ಪಿಸಿ ಸೆಕ್ಷನ್ 438ರ ಅಡಿ ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿ ಪರಿಗಣಿಸಲು ಸಾಧ್ಯವಿಲ್ಲ ಎಂದು ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕರಿಸಿದೆ.

ಪ್ರಕರಣದ ವಿವರ: ಗೌರಿಬಿದನೂರು ಉಪವಲಯ ಅರಣ್ಯಾಧಿಕಾರಿ ವನ್ಯಜೀವಿ ಸಂರಕ್ಷಣೆ ಕಾಯ್ದೆ-1972ರ ಸೆಕ್ಷನ್ 55ಬಿ, 51ರ ಅಡಿ ರಮೇಶ್ ನಿವಾಸದಲ್ಲಿ 2020ರ ಜುಲೈ 8ರಂದು ಉಡ ಹಾಗೂ ಮೂರು ಪಕ್ಷಿ ವಶಪಡಿಸಿಕೊಂಡಿದ್ದಾಗಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ವಿಚಾರಣಾ ನ್ಯಾಯಾಲಯ ಆರೋಪಿಗೆ ಸಮನ್ಸ್ ಜಾರಿ ಮಾಡಿತ್ತು. ಈ ವೇಳೆ ಆರೋಪಿ ರಮೇಶ್ ವಕೀಲರ ಮೂಲಕ 2020ರ ಮೇ 5ರಂದು ಕೋರ್ಟ್‌ಗೆ ಹಾಜರಾಗಿ, ನ್ಯಾಯಾಲಯದ ವಿಚಾರಣೆಗೆ ಖುದ್ದು ಹಾಜರಾತಿಯಿಂದ ವಿನಾಯ್ತಿ ಕೋರಿದ್ದರು. ಕೋರ್ಟ್ ಹಾಜರಿಗೆ ವಿನಾಯ್ತಿ ನೀಡಿತ್ತು.

ಹಿಂದಿನ ಲೇಖನಇಬ್ಬರು ವಯಸ್ಕರು ಮದುವೆ ಅಥವಾ ಲಿವ್-ಇನ್-ರಿಲೇಶನ್‌ಶಿಪ್ ಮೂಲಕ ಒಟ್ಟಿಗೆ ಇರುವಾಗ ನೈತಿಕ ಪೋಲಿಸ್‌ಗಿರಿಯನ್ನು ಅನುಮತಿಸಲಾಗುವುದಿಲ್ಲ: ಮಧ್ಯಪ್ರದೇಶ ಹೈಕೋರ್ಟ್
ಮುಂದಿನ ಲೇಖನಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗಳ ಬಗ್ಗೆ ಸಿಎಂ ಜತೆ ಚರ್ಚೆ: ಹೆಚ್‌ಡಿಕೆ ಭರವಸೆ