ಮನೆ ಆರೋಗ್ಯ ಬುದ್ಧಿ ಪಾದರಸದಂತೆ ಚುರುಕಾಗಿರಲು ಕರಿಬೇವಿನ ಸೊಪ್ಪು ಸಹಕಾರಿ

ಬುದ್ಧಿ ಪಾದರಸದಂತೆ ಚುರುಕಾಗಿರಲು ಕರಿಬೇವಿನ ಸೊಪ್ಪು ಸಹಕಾರಿ

0

ಹಿತ್ತಲ ಗಿಡ ಅನೇಕ ರೋಗ ರುಜನಗಳಿಗೆ ಮದ್ದು ಎಂಬ ಮಾತು ಕೇಳಿದ್ದೇವೆ. ಅದು ಸಾಮಾನ್ಯವಾಗಿ ಕರಿಬೇವಿನ ವಿಚಾರದಲ್ಲಿ ನಿಜವಾಗುತ್ತದೆ ಎನಿಸುತ್ತದೆ. ಏಕೆಂದರೆ ಮನುಷ್ಯನ ಆರೋಗ್ಯದ ವಿಚಾರ ಎಂದು ಬಂದಾಗ ಅದರಲ್ಲಿ ಕರಿಬೇವಿನ ಸೊಪ್ಪಿನ ಪಾತ್ರ ಸಾಕಷ್ಟಿರುತ್ತದೆ. ಅನೇಕ ಆರೋಗ್ಯ ಸಮಸ್ಯೆಗಳಿಗೆ ಇದು ಪರಿಹಾರ.

ಅದರಂತೆ ಮನುಷ್ಯನ ಬುದ್ಧಿವಂತಿಕೆ ಹೆಚ್ಚಿಸುವಲ್ಲಿ ಕೂಡ ಕರಿಬೇವಿನ ಸೊಪ್ಪು ನಿರ್ಣಾಯಕ ಪಾತ್ರ ಹೊಂದಿದೆ. ಹೆಚ್ಚು ಚುರುಕುತನ ಮತ್ತು ಒಳ್ಳೆಯ ನೆನಪಿನ ಶಕ್ತಿ ಬೇಕು ಎನ್ನುವವರು ಕರಿಬೇವಿನ ಸೊಪ್ಪಿನ ಚಹಾ ಮಾಡಿ ಕುಡಿಯಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಆದರೆ ಬಿಪಿ ಇರುವವರು ಸ್ವಲ್ಪ ಆಲೋಚನೆ ಮಾಡಬೇಕು.

ನೆನಪಿನ ಶಕ್ತಿಗೆ ಸಂಬಂಧಪಟ್ಟ ಸಂಶೋಧನೆ

ನಮ್ಮೆಲ್ಲರಿಗೂ ನೆನಪಿನ ಶಕ್ತಿ ಒಂದು ವರದಾನ. ಆದರೆ ಎಲ್ಲರಿಗೂ ಒಂದೇ ರೀತಿಯ ನೆನಪಿನ ಶಕ್ತಿ ಇರುವುದಿಲ್ಲ. ಕೆಲವರು ಧೀರ್ಘ ಕಾಲದಿಂದ ತುಂಬಾ ಹಳೆಯದ್ದನ್ನು ಎಷ್ಟು ವರ್ಷಗಳ ಕಾಲ ಬೇಕಾದರೂ ನೆನಪಿಟ್ಟುಕೊಳ್ಳುತ್ತಾರೆ. ಕೆಲವರು ನೆನ್ನೆ ಮೊನ್ನೆ ನಡೆದದ್ದನ್ನು ಮರೆತು ಹೋಗುತ್ತಾರೆ. ಹಾಗಾದರೆ ಏಕೆ ಹೀಗೆ?

ಮನುಷ್ಯರಾದ ಮೇಲೆ ನಾವೆಲ್ಲರೂ ಒಂದೇ ತಾನೇ ಎಂದು ನಮ್ಮಲ್ಲಿ ಗೊಂದಲ ಮೂಡುವುದು ಸಹಜ. ಆದರೆ ಇದಕ್ಕೆಲ್ಲ ಅನುವಂಶಿಯತೆ ಸೇರಿದಂತೆ ಬೇರೆ ಬೇರೆ ಕಾರಣಗಳು ಇರುತ್ತವೆ. ಇಂತಹ ಒಂದು ನೆನಪಿನ ಶಕ್ತಿಯ ಕೊರತೆಯನ್ನು ಹೇಗೆ ಸರಿ ಹೊಂದಿಸಬೇಕು ಎನ್ನುವುದನ್ನು ತಿಳಿದುಕೊಳ್ಳುವುದು ಅಗತ್ಯವಾಗಿದೆ.

ಸಂಶೋಧನೆಯಲ್ಲಿ ಹೇಳಿರುವ ಪ್ರಕಾರ…

ಇದಕ್ಕಾಗಿ ಒಂದು ಸಂಶೋಧನೆ ಸಹ ನಡೆದಿದೆ. ಅದು ಕೂಡ ಕರಿಬೇವಿನ ಸೊಪ್ಪಿನ ಬಳಕೆಯಿಂದ ನಿಜವಾಗಲೂ ಮನುಷ್ಯನ ಬುದ್ಧಿ ಚುರುಕಾಗುತ್ತದೆಯೇ ಎಂಬ ಬಗ್ಗೆ. ಮೊದಲು ಇಲಿಗಳ ಮೇಲೆ ಈ ಸಂಶೋಧನೆ ನಡೆದಿತ್ತು ಮತ್ತು ಅದನ್ನು ಫೈಟೋಥೆರಪಿ ರಿಸರ್ಚ್ ನಲ್ಲಿ ವರದಿ ಪ್ರಕಟ ಮಾಡಲಾಗಿತ್ತು.

ಅಲ್ಲಿ ತಿಳಿದು ಬಂದ ಒಂದು ಅಚ್ಚರಿಯ ವಿಷಯ ಏನೆಂದರೆ ಇಲಿಗಳಲ್ಲಿ ನೆನಪಿನ ಶಕ್ತಿ ಕುಂದುವ ಹಾಗೆ ಔಷಧಿ ನೀಡಿ ಮತ್ತೆ ಅವುಗಳ ಆಹಾರ ಪದ್ಧತಿಯಲ್ಲಿ ಕರಿಬೇವಿನ ಸೊಪ್ಪನ್ನು ಸೇರಿಸಿ ಮೆದುಳಿನಲ್ಲಿ ನಿಜವಾಗಲೂ ಆಗುವ ಬದಲಾವಣೆಗಳ ಬಗ್ಗೆ ತಿಳಿದುಕೊಳ್ಳಲು ಅಲ್ಲಿನ ಸಂಶೋಧಕರು ಮುಂದಾದರು.

ಸಂಶೋಧನೆಯ ಕೊನೆಯ ಹಂತದಲ್ಲಿ ಅವರು ಕಂಡುಕೊಂಡ ವಿಚಾರ ಎಂದರೆ ಕರಿಬೇವಿನ ಸೊಪ್ಪು ಸೇವನೆ ಮಾಡಿದ ಇಲಿಗಳಲ್ಲಿ ಆಮ್ನೇಶಿಯ ಕಡಿಮೆಯಾಗಿತ್ತು. ಅದೇ ರೀತಿ ದೇಹದಲ್ಲಿ ಕೊಲೆಸ್ಟ್ರಾಲ್ ಅಂಶ ಕೂಡ ಸಾಕಷ್ಟು ಕಡಿಮೆಯಾದ ಬಗ್ಗೆ ಮಾಹಿತಿ ಸಿಕ್ಕಿತು.

ಇದರಿಂದ ಅಧ್ಯಯನಕಾರರು ಒಂದು ವಿಷಯವನ್ನು ಸ್ಪಷ್ಟಪಡಿಸಿದರು. ಅದೇನೆಂದರೆ ಮುಂದಿನ ದಿನಗಳಲ್ಲಿ ಕರಿಬೇವಿನ ಸೊಪ್ಪನ್ನು ಜನರು ತಮ್ಮ ಬುದ್ಧಿಯ ಚುರುಕುತನಕ್ಕಾಗಿ ಬಳಸಬಹುದು ಎಂದು ಹೇಳಿದರು.

ವಯಸ್ಸಾದಂತೆ ಕಾಡುವ ನೆನಪಿನ ಶಕ್ತಿಯ ಸಮಸ್ಯೆ…

ವಯಸ್ಸಾದಂತೆ ಮನುಷ್ಯನಿಗೆ ಎದುರಾಗುವ ನೆನಪಿನ ಶಕ್ತಿಯ ಕೊರತೆ ಮತ್ತು ಹಾಳಾಗುವ ಮೆದುಳಿನ ಜೀವಕೋಶಗಳನ್ನು ಸರಿಪಡಿಸುವ ಜೊತೆಗೆ ಅಲ್ಜಿಮರ್ ಕಾಯಿಲೆ ಮತ್ತು ಡೆಮನ್ಶಿಯಾ ರೋಗಗಳನ್ನು ಸಹ ನಿಯಂತ್ರಣ ಮಾಡುವ ಶಕ್ತಿ ಕರಿಬೇವಿನ ಸೊಪ್ಪಿಗೆ ಇದೆ ಎಂದು ತಿಳಿದು ಬಂದಿದೆ.

ಹೀಗಾಗಿ ಜನರು ಬೆಳಗ್ಗೆ ಎದ್ದು ಬೆಡ್ ಕಾಫಿ ಕುಡಿಯುವ ಬದಲು ಮೆದುಳಿಗೆ ಸಹಕಾರಿಯಾದ ಕರಿಬೇವಿನ ಚಹಾ ಮಾಡಿ ಕುಡಿಯುವುದು ಒಳ್ಳೆಯದು.

ಕರಿಬೇವಿನ ಚಹಾ ತಯಾರು ಮಾಡಲು ಬೇಕಾಗಿರುವ ಸಾಮಗ್ರಿಗಳು

• ಕರಿಬೇವಿನ ಎಲೆಗಳು

• ಎರಡು ಕಪ್ ನೀರು

• ಸ್ವಲ್ಪ ಬೆಲ್ಲ

• ಒಂದು ಚಿಟಿಕೆ ಜೀರಿಗೆ

• ಸಣ್ಣ ಗಾತ್ರದ ಶುಂಠಿ

• ಸ್ವಲ್ಪ ಕಪ್ಪು ಉಪ್ಪು

ತಯಾರು ಮಾಡುವ ವಿಧಾನ

• ಮೊದಲಿಗೆ ಜೀರಿಗೆಯನ್ನು ಹುರಿದುಕೊಂಡು ಕುಟಾಣಿ ಸಹಾಯದಿಂದ ಕುಟ್ಟಿ ಪುಡಿ ಮಾಡಿಕೊಳ್ಳಿ.

• ಈಗ ಒಂದು ಪ್ಯಾನ್ ತೆಗೆದುಕೊಂಡು ಅದರಲ್ಲಿ ಎರಡು ಕಪ್ ನೀರು ಹಾಕಿ, ಅದರಲ್ಲಿ ಕರಬೇವಿನ ಸೊಪ್ಪು ಹಾಕಿ ಚೆನ್ನಾಗಿ ಕುದಿಸಬೇಕು.

• ಈಗ ಬೆಲ್ಲ ಸೇರಿಸಿ, ಸ್ಟವ್ ಆರಿಸಿ ಐದು ನಿಮಿಷಗಳ ಕಾಲ ಹಾಗೆ ಬಿಡಬೇಕು.

• ಇದನ್ನು ಒಂದು ಕಪ್ ಗೆ ಹಾಕಿಕೊಂಡು ಅದಕ್ಕೆ ಕಪ್ಪು ಉಪ್ಪು ಸೇರಿಸಬೇಕು.

• ಈಗ ನೀವು ಹುರಿದ ಜೀರಿಗೆ ಪೌಡರ್ ಇದರಲ್ಲಿ ಸೇರಿಸಬೇಕು.

• ಈ ಚಹವನ್ನು ಬಿಸಿ ಇರುವಾಗ ಕುಡಿಯುವುದು ಒಳ್ಳೆಯದು.

ಕೊನೆಯ ಮಾತು…

ಕೆಲವರಿಗೆ ಬೆಲ್ಲ ಇಷ್ಟವಾಗುವುದಿಲ್ಲ. ಇನ್ನು ಕೆಲವರು ಶುಂಠಿ ಮತ್ತು ಜೀರಿಗೆ ಇಷ್ಟಪಡುವುದಿಲ್ಲ. ಅಂತಹವರು ಇವುಗಳನ್ನು ಸೇರಿಸದೆ ಕೇವಲ ಕರಿಬೇವಿನ ಸೊಪ್ಪಿನಿಂದ ಚಹಾ ತಯಾರು ಮಾಡಿ ಕುಡಿಯಬಹುದು.

ಹಿಂದಿನ ಲೇಖನಕರ್ನಾಟಕ ಏರೋಸ್ಪೇಸ್‌ ಮತ್ತು ಡಿಫೆನ್ಸ್‌ ನೀತಿ 2022-2027: ರಕ್ಷಣಾ ವಲಯದಲ್ಲಿ ಸ್ವದೇಶಿ ಉತ್ಪನ್ನಗಳನ್ನು ಹೆಚ್ಚಿಸಲು ಸಹಕಾರಿ ಎಂದ ಸಚಿವ ಡಾ.ಕೆ.ಸುಧಾಕರ್‌
ಮುಂದಿನ ಲೇಖನನ್ಯಾಯಾಲಯದ ಆದೇಶಕ್ಕೆ ವಿರುದ್ಧವಾಗಿ ಮನೆಗೆ ಅತಿಕ್ರಮ ಪ್ರವೇಶ, ಗೃಹೋಪಯೋಗಿ ವಸ್ತುಗಳಿಗೆ ಹಾನಿ: ಸಾರಸ್ವತ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್’ನ ಮ್ಯಾನೇಜರ್ ವಿರುದ್ಧ ದೂರು ದಾಖಲು