ಕೊಪ್ಪಳ : ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು 7 ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ಗಂಗಾವತಿ ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ ನಡೆದಿದೆ.
ಅವಘಡದಲ್ಲಿ ಗಾಯಗೊಂಡವರನ್ನು ರಾಜ (38), ಸುರೇಶ್ (35), ದುರುಗಪ್ಪ (27), ಹುಸೇನಮ್ಮ (40), ನಾಗರಾಜ (18), ದುರುಗಮ್ಮ (17), ವಿಷ್ಣು (16), ಶ್ರೀಕಾಂತ್ (22) ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಗಂಗಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳ ಸ್ಥಿತಿ ಕಂಡು ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದಾರೆ.
ಹುಸೇನಮ್ಮ ಮನೆಯಲ್ಲಿ ಹೊಸದಾಗಿ ಸಿಲಿಂಡರ್ ತೆಗೆದುಕೊಂಡಿದ್ದರು. ಬೆಳಗ್ಗೆ ಆನ್ ಮಾಡುವಾಗ ಸ್ಫೋಟಗೊಂಡಿದೆ ಎಂದು ತಿಳಿದು ಬಂದಿದೆ. ಸ್ಫೋಟದ ತೀವ್ರತೆಗೆ ಇಡೀ ಮನೆ ನೆಲಸಮವಾಗಿದೆ.
ಅಲ್ಲದೇ ಅಕ್ಕಪಕ್ಕದ ಮನೆಗಳ ಗೋಡೆಗಳು ಬಿರುಕು ಬಿಟ್ಟಿವೆ. ಮನೆಯ ಅಕ್ಕಪಕ್ಕ ನಿಂತವರಿಗೂ ಸುಟ್ಟ ಗಾಯಗಳಾಗಿವೆ. ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿರುವುದು ವರದಿಯಾಗಿದೆ.















