ಮನೆ ಕಾನೂನು ದರ್ಶನ್ ಅರ್ಜಿ ಮಾನ್ಯ: ಆರೋಪ ಪಟ್ಟಿ ಮಾಹಿತಿ ಪ್ರಕಟಿಸದಂತೆ ಹೈಕೋರ್ಟ್ ಸೂಚನೆ

ದರ್ಶನ್ ಅರ್ಜಿ ಮಾನ್ಯ: ಆರೋಪ ಪಟ್ಟಿ ಮಾಹಿತಿ ಪ್ರಕಟಿಸದಂತೆ ಹೈಕೋರ್ಟ್ ಸೂಚನೆ

0

ರೇಣುಕಾ ಸ್ವಾಮಿ ಕೊಲೆ ಪ್ರಕರಣದ ತನಿಖೆ ಮುಗಿಸಿದ ಪೊಲೀಸರು ದರ್ಶನ್ ಸೇರಿದಂತೆ ಎಲ್ಲ ಆರೋಪಿಗಳ ವಿರುದ್ಧ 3991 ಪುಟಗಳ ವಿವರವಾದ ಆರೋಪ ಪಟ್ಟಿ ಸಲ್ಲಿಕೆ ಮಾಡಿದ್ದಾರೆ. ಆರೋಪ ಪಟ್ಟಿಯಲ್ಲಿ ಕೊಲೆಯ ವಿವರ, ಸ್ಥಳ ಮಹಜರು, ಆರೋಪಿಗಳ ಸ್ವ ಇಚ್ಛಾ ಹೇಳಿಕೆ, ಸಾಕ್ಷಿಗಳ ಹೇಳಿಕೆ, ಸಾಕ್ಷ್ಯಗಳ ಮಾಹಿತಿ ಇನ್ನೂ ಹಲವು ಅಂಶಗಳನ್ನು ಸೇರಿಸಲಾಗಿದೆ.

Join Our Whatsapp Group

ಆರೋಪ ಪಟ್ಟಿ ದಾಖಲು ಮಾಡಿದಾಗಿನಿಂದಲೂ ಆರೋಪ ಪಟ್ಟಿಯಲ್ಲಿರುವ ಅಂಶಗಳು ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ವರದಿ ಆಗುತ್ತಲೇ ಇವೆ. ದರ್ಶನ್, ಪವಿತ್ರಾ ಹಾಗೂ ರೇಣುಕಾ ಸ್ವಾಮಿಯ ಕೆಲವು ಫೋಟೊಗಳು ಸಹ ಹರಿದಾಡುತ್ತಿವೆ. ಆದರೆ ಇದೀಗ ಹೈಕೋರ್ಟ್ ಸೂಚನೆಯೊಂದನ್ನು ನೀಡಿದ್ದು, ಆರೋಪ ಪಟ್ಟಿಯ ಯಾವುದೇ ಮಾಹಿತಿಯನ್ನು ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ಸೂಚಿಸಿದೆ.

ಆರೋಪ ಪಟ್ಟಿಯ ಮಾಹಿತಿಯನ್ನು ಪ್ರಸಾರ ಮಾಡದಂತೆ ಅಥವಾ ಪ್ರಿಂಟ್ ಮಾಡದಂತೆ ಹೈಕೋರ್ಟ್ ಮಾಧ್ಯಮ ಸಂಸ್ಥೆಗಳಿಗೆ ಸೂಚನೆ ನೀಡಿದೆ. ಅಸಲಿಗೆ ಆಗಸ್ಟ್ 27 ರಂದು ದರ್ಶನ್ ಪತ್ನಿ ವಿಜಯಲಕ್ಷ್ಮಿ, ದರ್ಶನ್ ಅವರಿಗೆ ಸಂಬಂಧಿಸಿದ ಖಾಸಗಿ ಚಿತ್ರಗಳನ್ನು ಮಾಧ್ಯಮಗಳಲ್ಲಿ ಪ್ರದರ್ಶಿಸದಂತೆ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿ ಪ್ರತಿಬಂಧಕಾಜ್ಞೆ ತಂದಿದ್ದರು. ಈಗ ಅದೇ ಅರ್ಜಿಯನ್ನು ಉಲ್ಲೇಖಿಸಿ, ಆರೋಪ ಪಟ್ಟಿಯಲ್ಲಿರುವ ಮಾಹಿತಿ ಹಾಗೂ ಹರಿದಾಡುತ್ತಿರುವ ಕೆಲವು ಚಿತ್ರಗಳನ್ನು ಪ್ರದರ್ಶಿಸದಂತೆ ಸೂಚನೆ ನೀಡುವಂತೆ ಮನವಿ ಮಾಡಲಾಗಿತ್ತು. ಅದರಂತೆ ಹೈಕೋರ್ಟ್ ಏಕಸದಸ್ಯ ಪೀಠವು ಮುಂದಿನ ವಿಚಾರಣೆ ವರೆಗೂ ಆರೋಪ ಪಟ್ಟಿಯಲ್ಲಿರುವ ಮಾಹಿತಿಯನ್ನು ಪ್ರಸಾರ ಮಾಡದಂತೆ ಸೂಚನೆ ನೀಡಿದೆ.

ವಿಚಾರಣೆ ನಡೆಸಿದ ಹೈಕೋರ್ಟ್ ಪೀಠವು ಸುಪ್ರೀಂಕೋರ್ಟ್​ನ ಸಿದ್ಧಾರ್ಥ ವಶಿಷ್ಟ್ @ ಮನು ಶರ್ಮಾ ವಿರುದ್ಧ ರಾಜ್ಯ (ದೆಹಲಿಯ ಎನ್‌ಸಿಟಿ), 2010, ಮತ್ತು ಕೇಬಲ್ ಟೆಲಿವಿಷನ್ ನೆಟ್‌ವರ್ಕ್ ರೆಗ್ಯುಲೇಶನ್ ಆಕ್ಟ್, 1995 ರ ಷರತ್ತು 5 ಮತ್ತು ಸಮನ್ವಯ ಪೀಠದ ತೀರ್ಪನ್ನು ಉಲ್ಲೇಖ ಮಾಡಿ, ಮೇಲಿನಂತೆ ಆದೇಶ ನೀಡಿದೆ. ನ್ಯಾಯಾಲಯದ ಆದೇಶವನ್ನು ಮಾಧ್ಯಮಗಳಿಗೆ ತಲುಪಿಸುವಂತೆ ಹಾಗೂ ಆದೇಶ ಪಾಲನೆ ಆಗವಂತೆ ನಿಗಾ ವಹಿಸುವಂತೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆಗೆ ನಿರ್ದೇಶನ ನೀಡಿದೆ.

ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಒಟ್ಟು 17 ಜನರನ್ನು ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜೂನ್ 11 ರಂದು ಬಂಧಿಸಲಾಗಿತ್ತು. ರೇಣುಕಾ ಸ್ವಾಮಿ, ದರ್ಶನ್​ರ ಪ್ರೇಯಸಿ ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳಿಸಿದ್ದಾನೆಂಬ ಕಾರಣಕ್ಕೆ ಆತನನ್ನು ಚಿತ್ರದುರ್ಗದಿಂದ ಅಪಹರಿಸಿ ಬೆಂಗಳೂರಿಗೆ ಕರೆತಂದು ಪಟ್ಟಣಗೆರೆ ಶೆಡ್​ನಲ್ಲಿ ಹಲ್ಲೆ ನಡೆಸಿ ಸಾವಿಗೆ ಕಾರಣರಾಗಿದ್ದಾರೆ ಎಂಬ ಆರೋಪ ಬಂಧಿತರ ಮೇಲಿದೆ. ಪ್ರಕರಣದ ಮುಂದಿನ ವಿಚಾರಣೆ ಸೆಪ್ಟೆಂಬರ್ 12 ಕ್ಕೆ ನಡೆಯಲಿದೆ.