ಮನೆ ಕವನ “ ನಿನಗೆ ಸಮರ್ಪಣೆ”

“ ನಿನಗೆ ಸಮರ್ಪಣೆ”

0

ಹೃದಯ ನಿನ್ನ ಕರದಲಿಡುತಿಹೆನು

ಒಪ್ಪಿಸಿಕೋ, ನಿನ್ನೆದುರು ನನ್ನದು ಪೂರ್ಣ ಶರಣಾಗತಿ

ಅವಿರತ ಕಾಪಿಡಲಿ ಹೃದಯವ ನಿನ್ನ ಪ್ರೀತಿ.

ನನ್ನೆದೆಯ ತುಂಬ ರಾಗ ದ್ವೇಷಗಳ ಜ್ವಾಲೆ

ನನ್ನೊಳಗಿದ್ದರೆ ಸುಟ್ಟೀತು.

ಈ ಹೃದಯ ನಿನ್ನಯ ಅಂಗೈಯಲ್ಲಿದ್ದರೇ  ಕ್ಷೇಮ

ಆದೀತು ಪ್ರೀತಿ ಶಾಂತಿಗಳ ದಿವ್ಯ ಧಾಮ.

ಗಾಳಿ ನಿನ್ನದೆಂದ ಮೇಲೆ ಉಸಿರು ನಿನ್ನದೆ

ಜೀವ ನಿನ್ನದಾದ ಮೇಲೆ ಹೃದಯ ನಿನ್ನದೆ

ನನ್ನದೆನ್ನುವುದೇನಿದೆ ಇಲ್ಲಿ ಹೇಳು ಜೀಯ

ಸಕಲವೂ ಸಮಸ್ತವೂ ನಿನ್ನದೇ ಮಾಯ.

ಭೂಮಿ ಆಕಾಶದೆತ್ತರಕೂ ಕಾರುಣ್ಯ ಕರವಿಟ್ಟು

ಅಣು ರೇಣುಗಳನ್ನು ಕಾದು ನಿಂದವಳು ನೀನು,

ಕುಬ್ಜನಾಗಿ ಮುಷ್ಟಿ ಗಾತ್ರದ ಹೃದಯ ಹಿಡಿದು

ನಿನ್ನೆದುರು ದೀನನಾಗಿ ನಿಂತವನು ನಾನು.

ಪಾಪ ಕರ್ಮಗಳನೆಲ್ಲ ಕ್ಷಮಿಸಿ ಅರ್ಪಿಸಿಕೋ

ಪಶ್ಚಾತಾಪದಿ ಬೆಂದ ನನ್ನೀ ಹೃದಯವನ್ನು,

ಹಗೆ ಮತ್ಸರ ಹಾಲಹಲಗಳ ಹಿಂಡಿ ಬಸಿದು

ಸ್ಫುರಿಸಿಬಿಡು ಭಕ್ತಿ ಪ್ರೀತಿಗಳ ಹಾಲುಜೇನು.

ಪ್ರತಿ ಬಡಿತದಲ್ಲೂ ರಿಂಗಣಿಸಲಿ ನಿನ್ನ ನಾಮ

ಉಸಿರುಸಿರಲ್ಲು ಧ್ವನಿಸಲಿ ಸ್ಮರಣೆಯ ಸಂಭ್ರಮ.

ನಿನ್ನ ಕರಗಳಲ್ಲಿ ಕೃತಾರ್ಥವಾಗಲಿ ಈ ಜೀವ

ನರ ನರಗಳಲ್ಲಿ ಯತಾರ್ಥವಾಗಲಿ ನಿನ್ನನುಭಾವ.

  • ಎಎನ್ಆರ್