ನವದೆಹಲಿ(New delhi): ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಶೇ. 40 ರಷ್ಟು ಕಮಿಷನ್ ಕೇಳಿರುವ ಬಗ್ಗೆ ದಾಖಲೆ ಕೊಡದಿದ್ದರೆ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದು ತೋಟಗಾರಿಕೆ ಸಚಿವ ಮುನಿರತ್ನ ಹೇಳಿದ್ದಾರೆ.
ಕೆಂಪಣ್ಣ ಆರೋಪ ಕುರಿತು ಮಾತನಾಡಿದ ಸಚಿವ ಮುನಿರತ್ನ, ಆರೋಪ ಮಾಡೋದು ದೊಡ್ಡ ಸಂಗತಿಯಲ್ಲ. ಆದರೆ ಅದನ್ನು ಸಾಬೀತುಪಡಿಸಬೇಕಾಗುತ್ತದೆ ಸರ್ಕಾರಕ್ಕೆ ಕೆಟ್ಟ ಹೆಸರು ತರಬೇಕು ಎನ್ನುವ ಉದ್ದೇಶದಿಂದ ಸುಖಾಸುಮ್ಮನೆ ಆರೋಪಗಳನ್ನು ಮಾಡಲಾಗುತ್ತಿದೆ. ಕೆಂಪಣ್ಣ ಆರೋಪವನ್ನು ಗಂಭೀರವಾಗಿ ಪರಿಗಣಿಸಿದ್ದೇನೆ. ಇದು ಸಿದ್ಧರಾಮಯ್ಯ ಮಾರ್ಗದರ್ಶನದಂತೆ ನಡೆಯುತ್ತಿದೆ. ರಾಜಕೀಯ ದುರುದ್ಧೇಶದಿಂದ ನಡೆಯುತ್ತಿದೆ. ಸಮಸ್ಯೆ ಇದ್ರೆ ಲೋಕಾಯುಕ್ತಕ್ಕೆ ಹೋಗಲಿ ಎಂದರು.
ಕೆಂಪಣ್ಣ ಗಾಳಿಯಲ್ಲಿ ಗುಂಡು ಹೊಡೆಯುವುದು ಸರಿಯಲ್ಲ. ಈ ಬಗ್ಗೆ ನಾನು ನಮ್ಮ ವಕೀಲರ ಜತೆ ಚರ್ಚಿಸುತ್ತೇನೆ ಕಾನೂನಿನ ಮೂಲಕ ಉತ್ತರ ನೀಡುತ್ತೇನೆ ಎಂದು ಹೇಳಿದರು.