ಮನೆ ಕಾನೂನು ಆರಾಧ್ಯ ಬಚ್ಚನ್ ಆರೋಗ್ಯದ ಬಗ್ಗೆ ವಿಡಿಯೋ ಹಂಚಿಕೊಳ್ಳದಂತೆ ಯೂಟ್ಯೂಬ್ ವಾಹಿನಿಗಳಿಗೆ ದೆಹಲಿ ಹೈಕೋರ್ಟ್ ನಿರ್ಬಂಧ

ಆರಾಧ್ಯ ಬಚ್ಚನ್ ಆರೋಗ್ಯದ ಬಗ್ಗೆ ವಿಡಿಯೋ ಹಂಚಿಕೊಳ್ಳದಂತೆ ಯೂಟ್ಯೂಬ್ ವಾಹಿನಿಗಳಿಗೆ ದೆಹಲಿ ಹೈಕೋರ್ಟ್ ನಿರ್ಬಂಧ

0

ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರ 11 ವರ್ಷದ ಮೊಮ್ಮಗಳು ಆರಾಧ್ಯ ಬಚ್ಚನ್ ಬಗ್ಗೆ ಸುಳ್ಳು ಹೇಳಿಕೆಗಳನ್ನು ಪ್ರಸಾರ ಮಾಡದಂತೆ ಯೂಟ್ಯೂಬ್ ವಾಹಿನಿಗಳಿಗೆ ದೆಹಲಿ ಹೈಕೋರ್ಟ್ ಗುರುವಾರ ನಿರ್ಬಂಧ ವಿಧಿಸಿದೆ.

Join Our Whatsapp Group

ಆರಾಧ್ಯ ಮಾಡಿದ್ದ ಮನವಿ ಹಿನ್ನೆಲೆಯಲ್ಲಿ ನೋಟಿಸ್ ನೀಡಿದ ನ್ಯಾ. ಸಿ ಹರಿಶಂಕರ್ ದೂರಿನಲ್ಲಿ ಪ್ರಸ್ತಾಪಿಸಲಾದ ವೀಡಿಯೊಗಳನ್ನು ಪ್ರಸಾರ ಮಾಡದಂತೆ ಮುಂದೆಯೂ ಬಿತ್ತರಿಸದಂತೆ ನಿರ್ಬಂಧಿಸಿದರು. ಖ್ಯಾತನಾಮರ ಮಕ್ಕಳೇ ಇರಲಿ ಅಥವಾ ಸಾಮಾನ್ಯರೇ ಇರಲಿ ಪ್ರತಿ ಮಗುವನ್ನೂ ಗೌರವದಿಂದ ಕಾಣಬೇಕು ಎಂದು ನ್ಯಾಯಮೂರ್ತಿಗಳು ತಿಳಿಸಿದರು.

ಆರಾಧ್ಯಾಳ ಮಾನಸಿಕ ಅಥವಾ ದೈಹಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ಅಂತರ್ಜಾಲದಲ್ಲಿ ಲಭ್ಯವಿರುವ ವಿಡಿಯೋಗಳನ್ನು ಯಾವುದೇ ವೇದಿಕೆಯಲ್ಲಿ ಪ್ರಸಾರ ಮಾಡದಂತೆ ಯೂಟ್ಯೂಬ್ ವಾಹಿನಿಗಳನ್ನು ಸಂಪೂರ್ಣ ನಿರ್ಬಂಧಿಸಿರುವುದಾಗಿ ಆದೇಶದಲ್ಲಿ ತಿಳಿಸಲಾಯಿತು.

ಪ್ರತಿವಾದಿಗಳ ವಿವರಗಳನ್ನು ಬಚ್ಚನ್ ಅವರಿಗೆ ನೀಡಬೇಕು. ಜೊತೆಗೆ ತಕ್ಷಣವೇ ದೂರಿನಲ್ಲಿ ಉಲ್ಲೇಖಿಸಲಾದ ಯುಆರ್ಎಲ್ಗಳನ್ನು ನಿಷ್ಕ್ರಿಯಗೊಳಿಸಬೇಕು ಎಂದು ಅಂತರ್ಜಾಲದ ಪ್ರಮುಖ ಸರ್ಚ್ ಎಂಜಿನ್ ಗೂಗಲ್ಗೆ ಅದು ಸೂಚಿಸಿತು. ಅಲ್ಲದೆ, ದೂರರು ಇದೇ ವಿಚಾರಕ್ಕೆ ಸಂಬಂಧಿಸಿದ ಮತ್ತಾವುದೇ ವಿಡಿಯೋಗಳನ್ನು ಗೂಗಲ್ ಗಮನಕ್ಕೆ ತಂದರೆ ಅವನ್ನೂ ಕೂಡ ತಕ್ಷಣವೇ ತೆಗೆದುಹಾಕಲು ಗೂಗಲ್ ತುರ್ತಾಗಿ ಕ್ರಮ ಕೈಗೊಳ್ಳಬೇಕು ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು.

ಇದಕ್ಕೆ ಸಂಬಂಧಿಸಿದ ಎಲ್ಲಾ ವಸ್ತು ವಿಷಯಗಳಿಗೆ ಹಾಗೆಯೇ ವೀಡಿಯೊ ಅಥವಾ ಕ್ಲಿಪ್ಗಳಿಗೆ ನಿರ್ಬಂಧ ವಿಧಿಸುವಂತೆಯೂ ಕೇಂದ್ರ ಸರ್ಕಾರಕ್ಕೆ ನ್ಯಾಯಾಲಯ ಸೂಚಿಸಿದೆ.

ತನ್ನ ಖಾಸಗಿ ಜೀವನಕ್ಕೆ ಧಕ್ಕೆ ತರುವ ಮತ್ತು ಅಮಿತಾಭ್ ಬಚ್ಚನ್ ಕುಟುಂಬದ ಹೆಸರಿಗೆ ಕಳಂಕ ತರುವಂತಹ ಮಾನಹಾನಿಕರ ವೀಡಿಯೊಗಳನ್ನು ತೆಗೆದುಹಾಕಲು ಅಥವಾ ನಿರ್ಬಂಧಿಸಲು ಯೂಟ್ಯೂಬ್ಗೆ ನಿರ್ದೇಶಿಸುವಂತೆ ಕೋರಿ ಅಮಿತಾಭ್ ಮೊಮ್ಮಗಳು ಆರಾಧ್ಯ ಬಚ್ಚನ್ ಮತ್ತು ಆಕೆಯ ತಂದೆ ಅಭಿಷೇಕ್ ಬಚ್ಚನ್ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದರು.

ಆರಾಧ್ಯ ಅವರು ತೀವ್ರವಾಗಿ ಅಸ್ವಸ್ಥರಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳುವ ಹಲವು ವೀಡಿಯೊಗಳನ್ನು ಯೂಟ್ಯೂಬ್ನಲ್ಲಿ ನೋಡಿದ್ದೇವೆ. ಒಂದು ವಿಡಿಯೋದಲ್ಲಿ ಆಕೆ ತೀರಿಕೊಂಡಿದ್ದಾಳೆ ಎಂದು ಹೇಳಲಾಗಿದೆ. ಮಗುವಿಗೆ ತಕ್ಷಣದ ವೈದ್ಯಕೀಯ ಆರೈಕೆ ನೀಡಲು ಬಚ್ಚನ್ ಕುಟುಂಬ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ವೀಡಿಯೊಗಳು ಆರೋಪಿಸಿವೆ. ಆದರೆ ಆರಾಧ್ಯ ಆರೋಗ್ಯದಿಂದ ಇದ್ದು ಆಸ್ಪತ್ರೆಗೆ ದಾಖಲಾಗಿಲ್ಲ ಎಂದು ದೂರಿನಲ್ಲಿ ವಿವರಿಸಲಾಗಿತ್ತು.

ಹಿಂದಿನ ಲೇಖನಬೆಂಗಳೂರು: ರೌಡಿಶೀಟರ್​ ಗಳ ಮನೆ ಮೇಲೆ ಪೊಲೀಸರ ದಾಳಿ:  ಮಾರಕಾಸ್ತ್ರಗಳ ವಶ
ಮುಂದಿನ ಲೇಖನವಿಧಾನಸಭೆ ಚುನಾವಣೆ: ಜೆಡಿಎಸ್‌ ಅಭ್ಯರ್ಥಿಗಳ ನಾಲ್ಕನೇ ಪಟ್ಟಿ ಬಿಡುಗಡೆ