ಮೈಸೂರು: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಲ್ಪಸಂಖ್ಯಾತರ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು, ಈ ಯೋಜನೆಗಳ ಉಪಯೋಗ ಅರ್ಹ ಅಲ್ಪಸಂಖ್ಯಾತರಿಗೆ ದೊರೆಯುವ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದು ರಾಷ್ಟೀಯ ಅಲ್ಪಸಂಖ್ಯಾತರ ಆಯೋಗದ ಸದಸ್ಯರಾದ ರಿಚನ್ ಲ್ಯಾಮೋ ಅವರು ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ, ನಂತರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು. ದೇಶದಲ್ಲಿ 6 ಧರ್ಮಗಳು ಅಲ್ಪಸಂಖ್ಯಾತರ ಪಟ್ಟಿಯಲ್ಲಿ ಬರುತ್ತವೆ. ನಾವೆಲ್ಲರೂ ಒಂದೇ ಎಂಬ ಭಾವನೆಯಿಂದ ಬಾಳಬೇಕು. ಅಲ್ಪಸಂಖ್ಯಾತರಿಗೆ ಸೌಲಭ್ಯ ಕಲ್ಪಿಸುವಲ್ಲಿ ಇರುವ ತೊಂದರೆಗಳು ಹಾಗೂ ಅಲ್ಪಸಂಖ್ಯಾತರ ಕುಂದುಕೊರತೆಗಳನ್ನು ಆಲಿಸಿ ಪರಿಹರಿಸುವುದು ಈ ಭೇಟಿಯ ಉದ್ದೇಶ ಎಂದರು.
ಜಿಲ್ಲೆಯಲ್ಲಿ ಮೈಸೂರಿನ ಮಹಾಬೋಧಿ ಶಾಲೆ, ಸೇಂಟ್ ಫಿಲೋಮಿನಾ ಚರ್ಚ್, ಟಿಬೇಟಿಯನ್ ಪನರ್‌ವಸತಿ ಕೇಂದ್ರಗಳಿಗೆ ಭೇಟಿ ನೀಡಿ ಕುಂದುಕೊರತೆಗಳು ಹಾಗೂ ಸಮಸ್ಯೆಗಳನ್ನು ಪರಿಶೀಲಿಸಲಾಗಿದೆ. ಟಿಬೇಟಿಯನ್ ಪುನರ್‌ವಸತಿ ಕೇಂದ್ರದಲ್ಲಿ ಮಳೆಗಾಲದಲ್ಲಿ ರಸ್ತೆ ಸಮಸ್ಯೆ, ಬೀದಿ ದೀಪಗಳ ಸಮಸ್ಯೆ, ಬಸ್ ಸೌಲಭ್ಯಗಳ ಕೊರತೆ ಹಾಗೂ ಫುಟ್‌ಪಾತ್‌ಗಳ ಸಮಸ್ಯೆ ಇದ್ದು, ಸೌಲಭ್ಯಗಳನ್ನು ಕಲ್ಪಿಸುವಂತೆ ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.
ಅಲ್ಪಸಂಖ್ಯಾತರ ಶಿಕ್ಷಣ, ಆರ್ಥಿಕ ಸ್ಥಿತಿಗತಿ, ಜೀವನಮಟ್ಟವನ್ನು ಅಧ್ಯಯನ ನಡೆಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಜಿಲ್ಲಾಧಿಕಾರಿಗಳಾದ ಬಗಾದಿ ಗೌತಮ್ ಅವರು ಮಾತನಾಡಿ ಅಲ್ಪಸಂಖ್ಯಾತರಿಗೆ ಸರ್ಕಾರಗಳು ನೀಡಿರುವ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಅಲ್ಪಸಂಖ್ಯಾತರ ಸಮುದಾಯಗಳ ಮುಖಂಡರು ಉಪಸ್ಥಿತರಿದ್ದರು.