
ವಿಧಾನಸಭೆ ಚುನಾವಣೆಯ ಮತದಾನಕ್ಕೆ ಇನ್ನೆರಡೇ ದಿನ ಬಾಕಿ ಉಳಿದಿದೆ. ಎಲ್ಲೆಡೆ ಮತ ಬೇಟೆಯೂ ಭರ್ಜರಿಯಾಗಿ ನಡೆಯುತ್ತಿದೆ. ಅದೇ ರೀತಿ ಮೈಸೂರು, ಬೆಂಗಳೂರು ಸೇರಿದಂತೆ ಉದ್ಯೋಗಕ್ಕಾಗಿ ನಾನಾ ಕಡೆ ತೆರಳಿ ವಾಸಿಸುತ್ತಿರುವ ಮತದಾರರ ಮನವೊಲಿಕೆ ಕಾರ್ಯವೂ ಬಿರುಸಿನಿಂದ ನಡೆಯುತ್ತಿದೆ. ಜತೆಗೆ ದೂರವಾಣಿಯಲ್ಲಿ ಮಾತನಾಡುವ ಮುಖಂಡರು ತಮಗೆ ತುಂಬಾ ಆತ್ಮೀಯನಿರಬೇಕು ಎಂಬಂತೆ ವಯಸ್ಸಿನಲ್ಲಿ ಮತದಾರ ಕಿರಿಯನಾದರೂ ಅತ್ಯಂತ ಗೌರವ ನೀಡಿ ತಮ್ಮ ಪಕ್ಷಕ್ಕೆ ಮತ ನೀಡುವಂತೆ ಮನವಿ ಮಾಡುತ್ತಿದ್ದಾರೆ. ಹೊರಗಿರುವವರ ಮತ ಸೆಳೆಯಲು ಪ್ರಮುಖ ಪಕ್ಷಗಳು ಕಸರತ್ತು ನಡೆಸುತ್ತಿವೆ.
ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳು ರಾಜ್ಯದ ರಾಜಧಾನಿಗೆ ದೂರ ಏನಿಲ್ಲ. ಅದರಲ್ಲೂ ದಶಪಥ ಪೂರ್ಣಗೊಂಡ ನಂತರ ಬೆಂಗಳೂರು ಕೂಡ ಹತ್ತಿರವಾಗಿದೆ. ಅದೇ ರೀತಿ ಪಿರಿಯಾಪಟ್ಟಣ, ಕೆ.ಆರ್.ನಗರ, ಹುಣಸೂರು, ಎಚ್.ಡಿ.ಕೋಟೆ, ನಂಜನಗೂಡು, ತಿ.ನರಸೀಪುರ, ಹೀಗೆ ನಾನಾ ಪಟ್ಟಣಗಳಿಂದ ನಗರಗಳಲ್ಲಿ ಉದ್ಯೋಗ ಅರಸಿ ನೆಲೆಸಿದ್ದಾರೆ. ಆದರೆ, ಮತದಾನದ ಹಕ್ಕನ್ನು ತಮ್ಮ ಸ್ವ ಗ್ರಾಮ, ಪಟ್ಟಣಗಳಲ್ಲೇ ಇಟ್ಟುಕೊಂಡಿದ್ದು, ಅಂತಹ ಮತದಾರರಿಗೆ ಈಗ ಸಿಕ್ಕಾಪಟ್ಟೆ ಬೇಡಿಕೆ.
ತಂಡಗಳು ಕಾರ್ಯೋನ್ಮುಖ
ಬೇರೆಡೆ ಇರುವ ಮತದಾರರ ದೂರವಾಣಿ ಸಂಖ್ಯೆ ಸಂಗ್ರಹಿಸಿ ಅವರನ್ನು ಸಂಪರ್ಕಿಸಿ ಮತದಾನ ದಿನದಂದು ತಪ್ಪದೇ ಬಂದು ತಮ್ಮ ಪಕ್ಷಕ್ಕೆ ವೋಟ್ ಮಾಡಬೇಕೆಂದು ಓಲೈಸಲು ತಂಡಗಳು ಈಗಾಗಲೇ ಮತದಾರರು ಇರುವೆಡೆಯೇ ತೆರಳಿ ಓಲೈಸುತ್ತಿದೆ. ಯುವಕರಾದಿಯಾಗಿ ಸಾಕಷ್ಟು ಮಂದಿ ಉದ್ಯೋಗ ಬಯಸಿ ಬೇರೆಡೆ ವಾಸವಾಗಿದ್ದಾರೆ. ಹೀಗಾಗಿ ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಇಂತಹ ಮತದಾರರ ಓಲೈಕೆಗೆ ನಾನಾ ಮಾರ್ಗಗಳನ್ನು ಅನುಸರಿಸುತ್ತಿದ್ದಾರೆ.
ಕೆಲವು ಪಕ್ಷಗಳು ಬೆಂಗಳೂರು ಸೇರಿದಂತೆ ಹಲವೆಡೆ ವಾಸವಿರುವ ಮತದಾರರನ್ನು ಒಂದೆಡೆ ಸೇರಿಸಿ ಮತಯಾಚನೆ ಮಾಡಿದ್ದಾರೆ. ಅಲ್ಲದೆ ತಮ್ಮ ಪಕ್ಷ ಬೆಂಬಲಿಸುವಂತೆ ಮನವಿ ಮಾಡಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ನಿಮ್ಮೆಲ್ಲರ ಬೆಂಬಲ ಅಗತ್ಯ ಎಂದು ಮನವರಿಕೆ ಮಾಡಿ, ಅವರ ಬೇಡಿಕೆಗಳನ್ನು ಈಡೇರಿಸುವ ಭರವಸೆ ಕೊಟ್ಟು ಮತದಾನ ಮಾಡುವಂತೆ ಓಲೈಸುತ್ತಿದ್ದಾರೆ. ಉದ್ಯೋಗಕ್ಕಾಗಿ ಮಾತ್ರ ನಗರ ಪ್ರದೇಶಗಳಿಗೆ ಹೋಗಿ ಮತದಾರರನ್ನು ಮನವೊಲಿಸುವುದು ದೊಡ್ಡ ಸವಾಲೇ. ನೇರವಾಗಿ ಅಭ್ಯರ್ಥಿಗಳು ಅವರನ್ನು ಸಂಪರ್ಕಿಸಲು ಸಾಧ್ಯವಿಲ್ಲವಾದರೂ ಬೂತ್ ಮಟ್ಟದ ಮುಖಂಡರಿಗೆ ಅವರ ಮನವೊಲಿಸುವ ಕಾರ್ಯವನ್ನು ಒಪ್ಪಿಸಲಾಗಿದೆ. ಕೆಲವರು ಫೋನ್‌ಗಳ ಮೂಲಕ ಅವರನ್ನು ಸಂಪರ್ಕಿಸಿದರೆ, ಇನ್ನೊಂದಿಷ್ಟು ಮಂದಿ ನಗರಗಳಿಗೆ ತೆರಳಿ ಮತದಾರರು ಹೆಚ್ಚಿರುವ ಕಡೆ ಮನೆ ಮನೆಗೂ ಹೋಗಿ ಪ್ರಚಾರ ನಡೆಸಿದ್ದಾರೆ. ಇನ್ನು ಕೆಲವು ಪಕ್ಷಗಳ ಮುಖಂಡರು ಮತದಾನದ ದಿನ ಕ್ಷೇತ್ರಕ್ಕೆ ಬರಲು ಸಾರಿಗೆ ವ್ಯವಸ್ಥೆ ಕಲ್ಪಿಸುವ, ವೋಟಿಗಿಷ್ಟು ಹಣ ಕೊಡುವ ಆಶ್ವಾಸನೆಯನ್ನೂ ನೀಡಿದ್ದಾರೆ.
‘ನಾವೇ ಬಂದು ವೋಟ್ ಮಾಡುತ್ತೇವೆ’: ಬೇರೆ ನಗರಗಳಲ್ಲಿವಾಸಿಸುವ ಪ್ರಜ್ಞಾವಂತ ಮತದಾರರು ಯಾವುದೇ ಆಮಿಷಗಳಿಗೆ ಒಳಗಾಗದೆ, ”ನಮಗೂ ಮತದಾನದ ಜವಾಬ್ದಾರಿ ಇದೆ. ನೀವು ಯಾವ ‘ವ್ಯವಸ್ಥೆ’ಯನ್ನೂ ಮಾಡಬೇಕಿಲ್ಲ. ಮೇ 10ರಂದು ನಾವೇ ಬಂದು ನಮ್ಮ ಹಕ್ಕು ಚಲಾಯಿಸುತ್ತೇವೆ” ಎಂದು ಖಡಕ್ ಆಗಿ ಹೇಳುತ್ತಿದ್ದಾರೆ. ಕ್ಷೇತ್ರದಿಂದ ಹೊರಗಿರುವ ಮತದಾರರನ್ನು ನಿರ್ಲಕ್ಷಿಸುವಂತೆಯೂ ಇಲ್ಲ. ಏಕೆಂದರೆ ಅವರ ಸಂಖ್ಯೆಯೂ ಹೆಚ್ಚಿದೆ. ಅವರಿಗೆ ಮತ ಹಾಕುವಂತೆ ಮನವೊಲಿಸಿದರೆ ಮಾತ್ರ ಗೆಲುವು ಸಾಧ್ಯ ಎಂಬುದು ಗೊತ್ತು. ಹೀಗಾಗಿ ಎಲ್ಲ ಪಕ್ಷಗಳ ಮುಖಂಡರು ಹೊರಗಿರುವ ಮತದಾರರನ್ನು ಮನವೊಲಿಸುವ ಕಾರ್ಯವನ್ನು ಗಂಭೀರವಾಗಿ ಸ್ವೀಕರಿಸಿದ್ದಾರೆ. ಇದಕ್ಕಾಗಿ ನಾನಾ ಕಸರತ್ತು ನಡೆಸುತ್ತಿದ್ದಾರೆ.