ಇದು ಮಹಾಭಾರತದಲ್ಲಿ ಬರುವ ಒಂದು ಕಥೆ : ಕೃಷ್ಣ ಅನೇಕ ಮಕ್ಕಳಲ್ಲಿ ಸಂಬಾನೂ ಒಬ್ಬನಾಗಿದ್ದ. ಸಾಂಬ ತುಂಬಾ ಸುಂದರನಾಗಿದ್ದ.ಅವನಿಗೆ ತಾನು ಬಹಳ ಸುಂದರನಿದ್ದೇನೆ ಎಂಬ ಅಹಂಕಾರವೂ ಇತ್ತು. ಸಾಂಬವಿಗೆ ದೊಡ್ಡದಾದ ಗೆಳೆಯರ ಗುಂಪೊ ಇತ್ತು. ಒಮ್ಮೆ ಅವನು ಯಾರ್ಯಾರಿಗೋ ಕೀಟಲೆ ಮಾಡಿ ಶಾಪದಿಂದ ಕುರೂಪಿಯಾಗಿದ್ದ. ನಂತರ ಸೂರ್ಯೋಪಾಸನೆಯಿಂದ ತನ್ನ ಸುಂದರ ದೇಹವನ್ನು ಮತ್ತೆ ಪಡೆದಿದ್ದ ಈ ಘಟನೆ ನಡೆದ ನಂತರ ಕೂಡ ಸಾಂಬಾನ ದುರಹಂಕಾರದ ಸೊಕ್ಕು ಇಳಿದಿರಲಿಲ್ಲ. ಅವನ ದುರಹಂಕಾರಕ್ಕೆ ಅವನ ಪುಂಡ ಗೆಳೆಯರ ತಂಡವು ಸಾಕಷ್ಟು ಪ್ರೋತ್ಸಾಹವನ್ನೂ ನೀಡುತ್ತಿತ್ತು. ಹೀಗಿರುವಾಗ ಒಂದು ದಿನ ಮಹರ್ಷಿ ಕಣ್ವರು ಕೃಷ್ಣನ ದ್ವಾರಕೆ ಹೇಗಿದಿಯೋ ನೋಡಿ ಹೋಗೋಣವೆಂದು ದ್ವಾರಕೆಗೆ ಬಂದರು ಅವರು ಒಂದು ಮರದ ಬುಡದಲ್ಲಿ ಕುಳಿತು ವಿಶ್ರಾಂತಿಯನ್ನು ಪಡೆಯುತ್ತಿದ್ದರು.
ಸಾಂಬಾನ ಪುಂಡರ ದಂಡು ಕಣ್ವರನ್ನು ನೋಡಿತು. ಕಣ್ವರ ಬಳಿ ಕುಚೇಷ್ಟೆ ಮಾಡಬೇಕೆನಿಸಿತು.ಸಾಂಬನಿಗೆ ಒಳ್ಳಯ ಹೆಣ್ಣುಡುಗೆಯನ್ನು ತೊಡೆಸಿದರು.ಹೊಟ್ಟೆಗೆ ಬಟ್ಟೆ ಕಟ್ಟಿ ಗರ್ಭಿಣಿಯಂತೆ ಕಾಣುವಂತೆ ಮಾಡಿದರು.ಹೆಣ್ಣುಡುಗೆಯಲ್ಲಿ ಸಾಂಬನು ಇನ್ನಷ್ಟು ಸೌಂದರ್ಯವನ್ನು ಹೊರಹೊಮ್ಮಿಸುತ್ತಿದ್ದ. ನಂತರ ಪುಂಡರ ದಂಡು ಕಣ್ವ ಋಷಿಯ ಬಳಿಗೆ ಸಾಂಬನನ್ನು ಕರೆತಂದಿತು. ಅವರೆಲ್ಲರೂ ಕಣ್ಮ ಋಷಿಗೆ ವಂದಿಸಿದರು. ನಂತರ ಒಬ್ಬ ಪುಂಡ ಗೆಳೆಯನ ಕಣ್ವರ ಬಳಿ, “ಮಹಾತ್ಮೆರೇ, ಈ ನಮ್ಮ ಸುಂದರಿ ಗರ್ಭವತಿಯಾಗಿದ್ದಾಳೆ. ಇವಳಿಗೆ ಹೆಣ್ಣು ಮಗು ಜನಿಸುವುದೋ, ಗಂಡು ಮಗು ಜನಿಸುವುದೋ ಎಂಬುದನ್ನು ಮಹಾತ್ಮರಾದ ತಾವು ದಿವ್ಯ ಜ್ಞಾನದಿಂದ ಹೇಳಬೇಕು” ಎಂದು ವಿನಯವನ್ನು ನಟಿಸಿದನು. ಕಣ್ವರು ದಿವ್ಯ ಜ್ಞಾನ ದೃಷ್ಟಿಯಿಂದ ಎಲ್ಲವನ್ನೂ ತಿಳಿದು ಸಿಟ್ಟುಗೊಂಡರು. “ಇವಳು ಒಂದು ಒನೆಕೆಯನ್ನು ಹಡೆಯುತ್ತಾಳೆ.ಆ ಒನೆಕೆಯು ನಿಮ್ಮ ಇಡೀ ಕುಲವನ್ನೇ ನಾಶ ಮಾಡುತ್ತದೆ” ಎಂದು ನುಡಿದ ಕಣ್ಮರು ಹೊರಟು ಹೋದರು. ಪುಂಡರ ದಂಡು ಗೊಳ್ಳನೆ ನಕ್ಕಿತು.ಆದರೆ ಸಾಂಬನ ಸ್ರೀವೇಷವನ್ನು ಬಿಚ್ಚುವಾಗ ಒಂದು ಒನಕೆಯು ದೊಪ್ಪನೆ ಉರುಳಿತು.ಈಗ ಪುಂಡರ ದಂಡಿಗೆ ಆಘಾತವಾಯಿತು. ಋಷಿ ಶಾಪ ಫಲಿಸುವುದೇನೋ ಎಂದು ಆತಂಕಕ್ಕೆ ಒಳಗಾದ ಅವರು ಒನಕೆಯನ್ನೇ ಇಲ್ಲದಂತೆ ಮಾಡೋಣ ಎಂದು ಒನಕೆಯನ್ನು ಚೆನ್ನಾಗಿ ಅರೆದು ಪುಡಿ ಮಾಡಿ ಪುಡಿಯನ್ನು ಸಮುದ್ರದಲ್ಲಿ ತೇಲಿ ಬಿಟ್ಟರು. ಆ ಪುಡಿಗಳೆಲ್ಲ ಸೇರಿ ಸಮುದ್ರದ ತೀರದಲ್ಲಿ ಜೊಂಡು ಹುಲ್ಲಾಗಿ ಬೆಳೆಯಿತು.ಅನಂತರ ವಿಚಾರವು ಬಲರಾಮ ಕೃಷ್ಣರಿಗೂ ತಿಳಿಯಿತು. ಬಲರಾಮನು ಕೃಷ್ಣನ ಬಳಿ ಬಂದು ಸಮಸ್ಯೆಯಿಂದ ಕುಲವನ್ನು ಪಾರುಮಾಡುವುದು ಹೇಗೆಂದು ಕೇಳಿದನು. ಕೃಷ್ಣನು ವಿಷಾದದಿಂದ ನಕ್ಕು ”ಅಣ್ಣಾ,ಸಂಕಷ್ಟದಿಂದ ಪಾರು ಮಾಡುವ ಶಕ್ತಿ ನಿನಗೆ ಇಲ್ಲವೇನು. ನನಗೂ ಇದೆ. ಆದರೆ ನಮ್ಮ ಕುಲ ಈಗ ಸಂಕಷ್ಟದಿಂದ ಪಾರಾಗಲು ಯೋಗ್ಯವಾಗಿದೆಯೇ.ದುರಂಕಾರದ ಮರದಲ್ಲಿ ಸರ್ವನಾಶ ಬೀಜವೇ ಬೆಳೆಯುತ್ತದೆ. ನಾಶ ಆಗಲಿ ಬಿಡು” ಎಂದನು. ನಂತರ ಒಂದು ದಿನ ವನ ಭೋಜನಕ್ಕೆಂದು ಸಮುದ್ರತೀರಕ್ಕೆ ಹೋದ ಯಾದವರೆಲ್ಲರೂ ಪಾನ ಮತ್ತರಾಗಿ ಜಗಳವಾಡಿಕೊಂಡು ಆ ಜೊಂಡು ಹುಲ್ಲನ್ನೇ ಕಿತ್ತು ಹೊಡೆದಾಡಿಕೊಂಡು ಸತ್ತರು. ಮಹಾ ವ್ಯಕ್ತಿಗಳಾಗಲಿ ಸಾಮಾನ್ಯರಾಗಲಿ ದುರಹಂಕಾರದ ನಡವಳಿಕೆಯನ್ನು ಮಾಡಿದರೆ ಸರ್ವನಾಶವು ಕಟ್ಟಿಟ್ಟ ಬುತ್ತಿ ಯಾಗಿರುತ್ತದೆ.