ನವದೆಹಲಿ : ಶ್ರೀಲಂಕಾದಲ್ಲಿ ಭಾರಿ ವಿನಾಶವನ್ನುಂಟು ಮಾಡಿ 159 ಜನರನ್ನು ಬಲಿ ಪಡೆದ ದಿತ್ವಾ ಚಂಡಮಾರುತವು ಈಗ ಭಾರತದತ್ತ ವೇಗವಾಗಿ ನುಗ್ಗಿ ಬರುತ್ತಿದೆ. ಇಂದು ಯಾವುದೇ ಸಮಯದಲ್ಲಿ ಚಂಡಮಾರುತವು ಉತ್ತರ ತಮಿಳುನಾಡು, ಪುದುಚೇರಿ ಮತ್ತು ದಕ್ಷಿಣ ಆಂಧ್ರಪ್ರದೇಶದ ಕರಾವಳಿಗಳನ್ನು ಅಪ್ಪಳಿಸುವ ನಿರೀಕ್ಷೆಯಿದೆ. ಆದರೆ ಈ ನಡುವೆ ದಿತ್ವಾ ಚಂಡಮಾರುತವು ದುರ್ಬಲಗೊಂಡಿದ್ದು, ಅದರ ಪರಿಣಾಮಗಳು ಕಡಿಮೆಯಾಗಬಹುದು ಎಂದು ನಿರೀಕ್ಷಿಸಿದೆ.
ಬಂಗಾಳಕೊಲ್ಲಿಯ ನೈಋತ್ಯ ಭಾಗದಲ್ಲಿ ಬೀಸುತ್ತಿರುವ ದಿತ್ವಾ ಚಂಡಮಾರುತವು ದುರ್ಬಲಗೊಂಡು ತಮಿಳುನಾಡು-ಪುದುಚೇರಿ ಕರಾವಳಿಗೆ ಸಮಾನಾಂತರವಾಗಿ ಉತ್ತರದ ಕಡೆಗೆ ಚಲಿಸುತ್ತಿರುವುದರಿಂದ ಕರಾವಳಿಗೆ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಮಾನ ಇಲಾಖೆ ಹೇಳಿದೆ.
ಸುಮಾರು ಆರು ಗಂಟೆಗಳ ಕಾಲ ಗಂಟೆಗೆ 10 ಕಿ.ಮೀ ವೇಗದಲ್ಲಿ ನಿಧಾನಗತಿಯಲ್ಲಿ ಚಲಿಸುತ್ತಿದ್ದ ಚಂಡಮಾರುತ ಶನಿವಾರ ಸಂಜೆ 5:30ರ ಹೊತ್ತಿಗೆ ಪುದುಚೇರಿಯ ಆಗ್ನೇಯಕ್ಕೆ ಸುಮಾರು 190 ಕಿ.ಮೀ ಮತ್ತು ಚೆನ್ನೈನಿಂದ ದಕ್ಷಿಣಕ್ಕೆ 290 ಕಿ.ಮೀ ದೂರದಲ್ಲಿ ನೆಲೆಗೊಂಡಿತ್ತು. ಚೆನ್ನೈನ ಪ್ರಾದೇಶಿಕ ಹವಾಮಾನ ಕೇಂದ್ರದ ಪ್ರಕಾರ, ಚಂಡಮಾರುತ ದುರ್ಬಲಗೊಳ್ಳುವ ಸ್ಪಷ್ಟ ಲಕ್ಷಣಗಳನ್ನು ತೋರಿಸುತ್ತಿದೆ.
ಚಂಡಮಾರುತ ಕರಾವಳಿಯನ್ನು ಅಪ್ಪಳಿಸುತ್ತಿರುವುದರಿಂದ ತಮಿಳುನಾಡಿನ ಕರಾವಳಿ ಪ್ರದೇಶಗಳಲ್ಲಿ 175 ಮಿ.ಮೀ ಮತ್ತು 250 ಮಿ.ಮೀ ನಡುವೆ ಮಳೆ ದಾಖಲಾಗಿದೆ. ಕಾಂಚೀಪುರಂ, ತಿರುವಳ್ಳೂರು, ಚೆನ್ನೈ ಮತ್ತು ಚೆಂಗಲ್ಪಟ್ಟುಗಳಲ್ಲಿ ಇಂದೂ ಭಾರಿ ಮಳೆಯಾಗಿದೆ. ನಾಳೆಯವರೆಗೆ ಹವಮಾನ ಇಲಾಖೆ ರೆಡ್ ಅಲರ್ಟ್ ಮುಂದುವರಿಸಿದೆ.
ಸೈಕ್ಲೋನ್ ಹಿನ್ನೆಲೆ ಪರಿಸ್ಥಿತಿ ನಿಯಂತ್ರಣಕ್ಕೆ ಎಸ್‌ಡಿಆರ್‌ಎಫ್ ಮತ್ತು ಎನ್‌ಡಿಆರ್‌ಎಫ್‌ನ ಸುಮಾರು 28 ವಿಪತ್ತು ಪ್ರತಿಕ್ರಿಯೆ ತಂಡಗಳು ಸಜ್ಜಾಗಿವೆ. ಇತರ ರಾಜ್ಯಗಳಿಂದ ಇನ್ನೂ 10 ತಂಡಗಳನ್ನು ವಿಮಾನದಲ್ಲಿ ಸಾಗಿಸಲು ನಾವು ಯೋಜಿಸುತ್ತಿದ್ದೇವೆ. ವಾಯುಪಡೆ ಮತ್ತು ಕೋಸ್ಟ್ ಗಾರ್ಡ್ಗೆ ಸಹ ಎಚ್ಚರಿಕೆ ನೀಡಲಾಗಿದೆ ಎಂದು ಸಚಿವ ಕೆಕೆಎಸ್‌ಎಸ್‌ಆರ್ ರಾಮಚಂದ್ರನ್ ತಿಳಿಸಿದ್ದಾರೆ.
ದಿತ್ವಾ ಚಂಡಮಾರುತದ ಪ್ರಭಾವದಿಂದಾಗಿ, ಚೆನ್ನೈ ವಿಮಾನ ನಿಲ್ದಾಣದಿಂದ ಶ್ರೀಲಂಕಾದ ಜಾಫ್ನಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಿಗದಿಯಾಗಿದ್ದ ಎರಡು ಇಂಡಿಗೋ ವಿಮಾನಗಳ ಹಾರಾಟ ರದ್ದುಗೊಳಿಸಲಾಗಿದೆ. ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸನ್ನದ್ಧತಾ ಕ್ರಮಗಳ ಬಗ್ಗೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅಧಿಕಾರಿಗಳ ಜೊತೆಗೆ ಸಭೆ ನಡೆಸಿದರು, ಅಗತ್ಯ ಕ್ರಮಗಳಿಗೆ ಸೂಚನೆ ನೀಡಿದರು. ದಿತ್ವಾ ಎಫೆಕ್ಟ್ ಬೆಂಗಳೂರು ಮೇಲೆ ಇರಲಿದ್ದು ಚಳಿ ಹೆಚ್ಚುವ ಸಾಧ್ಯತೆಗಳಿದೆ.















