ಮನೆ ಕ್ರೀಡೆ ಈಗಿನ ಆಸ್ಟ್ರೇಲಿಯಾದ ತಂಡದಲ್ಲಿ ಧಮ್ ಇಲ್ಲ: ಹರ್ಭಜನ್ ಸಿಂಗ್

ಈಗಿನ ಆಸ್ಟ್ರೇಲಿಯಾದ ತಂಡದಲ್ಲಿ ಧಮ್ ಇಲ್ಲ: ಹರ್ಭಜನ್ ಸಿಂಗ್

0

ಬೆಂಗಳೂರು: ಪ್ರಸಕ್ತ ಸಾಲಿನ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಕ್ರಿಕೆಟ್ ಸರಣಿಯಲ್ಲಿ ಟೀಮ್ ಇಂಡಿಯಾ ಭರ್ಜರಿ ಆರಂಭ ಪಡೆದಿದೆ.

ನಾಗ್ಪುರದಲ್ಲಿ ನಡೆದ ಸರಣಿಯ ಮೊದಲ ಟೆಸ್ಟ್’ನಲ್ಲಿ ಟೀಮ್ ಇಂಡಿಯಾ ಇನಿಂಗ್ಸ್ ಮತ್ತು 132 ರನ್’ಗಳ ಜಯ ದಾಖಲಿಸಿತ್ತು. ಬಳಿಕ ದಿಲ್ಲಿಯಲ್ಲಿ ನಡೆದ ದ್ವಿತೀಯ ಟೆಸ್ಟ್’ನಲ್ಲಿ ಭಾರತ 6 ವಿಕೆಟ್’ಗಳ ಜಯ ದಕ್ಕಿಸಿಕೊಂಡಿತು.

ದಿಲ್ಲಿ ಟೆಸ್ಟ್ ಪಂದ್ಯದ ಮೂರನೇ ದಿನದ ಆರಂಭದಲ್ಲಿ 85ಕ್ಕೆ 2 ವಿಕೆಟ್ ನಷ್ಟದಲ್ಲಿ ಉತ್ತಮ ಸ್ಥಿತಿಯಲ್ಲಿದ್ದ ಆಸ್ಟ್ರೇಲಿಯಾ ತಂಡ ಬಳಿಕ ನಾಟಕೀಯ ರೀತಿಯಲ್ಲಿ ಕುಸಿತ ಕಂಡು 2ನೇ ಇನಿಂಗ್ಸ್’ನಲ್ಲಿ 113 ರನ್ಗಳ ಅಲ್ಪ ಮೊತ್ತಕ್ಕೆ ಆಲ್ಔಟ್ ಆಯಿತು.

ಭಾರತೀಯ ಸ್ಪಿನ್ನರ್’ಗಳ ಎದುರು ಸ್ವೀಪ್ ಮತ್ತು ರಿವರ್ಸ್ ಸ್ವೀಪ್ ಹೊಡೆತಗಳಿಗೆ ಕೈ ಹಾಕಿದ ಆಸ್ಟ್ರೇಲಿಯಾ ಬ್ಯಾಟರ್’ಗಳು ಪೆವಿಲಿಯನ್ ಪರೇಡ್ ನಡೆಸುವಂತ್ತಾಯಿತು.

ಈ ಬಗ್ಗೆ ಮಾತನಾಡಿರುವ ಭಾರತ ತಂಡದ ಮಾಜಿ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್, ಭಾರತದಲ್ಲಿ ಆಸೀಸ್ ತಂಡದ ಕಳಪೆ ಆಟವನ್ನು ಕಟುವಾಗಿ ಟೀಕೆ ಮಾಡಿದ್ದಾರೆ.

“ಆಸ್ಟ್ರೇಲಿಯಾ ತಂಡ ಈ ಸರಣಿ ಸಲುವಾಗಿ ಅದ್ಯಾವ ರೀತಿಯ ತಾಲೀಮು ನಡೆಸಿದೆ ಎಂಬುದೇ ನನಗೆ ಅರ್ಥವಾಗುತ್ತಿಲ್ಲ. ವಿವಿಧ ಬಗೆಯಲ್ಲಿ ಔಟ್ ಆಗುವುದನ್ನು ಅಭ್ಯಾಸ ಮಾಡಿದ್ದಾರೆ ಎಂದನ್ನಿಸುತ್ತಿದೆ. ಈ ಪಿಚ್’ಗಳಲ್ಲಿ ಏಕಾಗ್ರತೆಯಿಂದ ರಕ್ಷಣಾತ್ಮ ಆಟದ ಮೇಲೆ ವಿಶ್ವಾಸವಿಟ್ಟು ಬ್ಯಾಟ್ ಮಾಡಬೇಕಾಗುತ್ತದೆ. ಕ್ರೀಸ್’ನಲ್ಲಿ ಹೆಚ್ಚು ಸಮಯ ಕಳೆದಷ್ಟೂ ಬ್ಯಾಟಿಂಗ್ ಸುಲಭವಾಗುತ್ತದೆ. ಆದರೆ, ಆಸ್ಟ್ರೇಲಿಯಾ ತಂಡ ಅನಗತ್ಯ ಹೊಡೆತಗಳಿಗೆ ಕೈಹಾಕಿ ಬೇಜವಾಬ್ದಾರಿ ತನದ ಆಟವಾಡಿದೆ. ಬೌನ್ಸ್ ಕಡಿಮೆ ಇರುವ ಪಿಚ್’ನಲ್ಲಿ ಸ್ವೀಪ್ ಶಾಟ್ ಆಡುವುದೆಂದರೆ ಏನು? ಭಾರತ ತಂಡ ಈ ಸರಣಿಯನ್ನು 4-0 ಅಂತರದಲ್ಲಿ ಗೆದ್ದುಕೊಳ್ಳಲಿದೆ,” ಎಂದು ಭಜ್ಜಿ ಹೇಳಿದ್ದಾರೆ.

“ಇದು ಬ್ಯಾಟ್ ಮಾಡಲು ಅತ್ಯಂತ ಕಠಿಣ ಪಿಚ್’ಗಳಾಗಿವೆ. ಅವರ ಬ್ಯಾಟರ್’ಗಳಿಗೆ ಮಾತ್ರವಲ್ಲ ನಮ್ಮ ಬ್ಯಾಟರ್’ಗಳು ಕೂಡ ಇಲ್ಲಿ ಬ್ಯಾಟ್ ಮಾಡುವುದು ಕಷ್ಟವಿದೆ. ಆದರೆ, ಈ ಹಿಂದಿನ ಆಸ್ಟ್ರೇಲಿಯಾ ತಂಡಕ್ಕೆ ಹೋಲಿಸಿದರೆ ಈಗಿನ ಆಸ್ಟ್ರೇಲಿಯಾದ ತಂಡದಲ್ಲಿ ಧಮ್ ಇಲ್ಲ. ಹಿಂದೆಲ್ಲಾ ಪಿಚ್ ಹೇಗೇ ಇದ್ದರೂ ಆಸ್ಟ್ರೇಲಿಯಾ ತಂಡ ಜಿದ್ದಾಜಿದ್ದಿನ ಪೈಪೋಟಿ ನೀಡುತ್ತಿತ್ತು. ಆದರೆ, ಈಗಿನ ತಂಡ ಸರಣಿ ಆರಂಭಕ್ಕೂ ಮೊದಲೇ ಪಿಚ್ ಬಗ್ಗೆ ದೂರು ನೀಡುತ್ತಾ ಗೋಳಾಡಲು ಶುರು ಮಾಡಿದೆ. ಇದು ತಂಡದ ಆಟಗಾರರ ಆತ್ಮವಿಶ್ವಾಸವನ್ನು ಕುಗ್ಗಿಸುತ್ತದೆ,” ಎಂದಿದ್ದಾರೆ.

ನಾಲ್ಕು ಪಂದ್ಯಗಳ ಟೆಸ್ಟ್ ಕ್ರಿಕೆಟ್ ಸರಣಿಯ ಮೂರನೇ ಪಂದ್ಯ ಇಂದೋರ್’ನ ಹೋಳ್ಕರ್ ಕ್ರೀಡಾಂಗಣದಲ್ಲಿ ಮಾರ್ಚ್ 1ರಂದು ಶುರುವಾಗಲಿದೆ. ಸರಣಿಯಲ್ಲಿ ಭಾರತ ತಂಡ 2-0 ಅಂತರದ ಮುನ್ನಡೆ ಗಳಿಸಿದ್ದು, 3-0ಗೆ ವಿಸ್ತರಿಸುವ ಲೆಕ್ಕಾಚಾರ ಹಾಕಿಕೊಂಡಿದೆ. ಈ ನಡುವೆ ಮೂರನೇ ಪಂದ್ಯ ಆರಂಭಕ್ಕೆ ಇನ್ನು 10 ದಿನಗಳು ಬಾಕಿ ಇರುವ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ತಾಯ್ನಾಡಿಗೆ ಹಿಂದಿರುಗಿ ಪಂದ್ಯದ ಹೊತ್ತಿಗೆ ಮರಳಲಿದ್ದಾರೆ. ಈ ನಡುವೆ ಗಾಯಗೊಂಡಿರುವ ಆಸೀಸ್’ನ 4 ಆಟಗಾರರು ತಾಯ್ನಾಡಿಗೆ ಹಿಂದಿರುಗಿದ್ದಾರೆ.