ಮನೆ ಮನರಂಜನೆ “ದಿಗ್ವಿಜಯ’ ಸಿನಿಮಾ ವಿಮರ್ಶೆ

“ದಿಗ್ವಿಜಯ’ ಸಿನಿಮಾ ವಿಮರ್ಶೆ

0

ರೈತರು ಎದುರಿಸುತ್ತಿರುವ ಸಂಕಷ್ಟಗಳು ಹಾಗೂ ಅದಕ್ಕೆ ಪರಿಹಾರ ಹುಡುಕುವ ವಿಷಯವನ್ನು ಇಟ್ಟುಕೊಂಡು ತೆರೆಗೆ ಬಂದಿರುವ ಸಿನಿಮಾ “ದಿಗ್ವಿಜಯ’. ಸಾಲ ಬಾಧೆಯಿಂದ ಬೇಸತ್ತ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು, ಸಾಲದ ಸುಳಿಯಿಂದ ರೈತರನ್ನು ಪತ್ರಕರ್ತನೊಬ್ಬ ಹೇಗೆ ಪಾರು ಮಾಡುತ್ತಾನೆ. ರೈತಪರವಾದ ಹೋರಾಟವನ್ನು ಕಟ್ಟುವ ಮೂಲಕ, ಇಡೀ ಸರ್ಕಾರ ಮತ್ತು ಸಾರ್ವಜನಿಕರ ಗಮನವನ್ನು ಸೆಳೆದು ಹೇಗೆ ರೈತರ ಸಮಸ್ಯೆಗಳಿಗೆ ಕೇವಲ 48 ಗಂಟೆಗಳಲ್ಲಿ ಹೇಗೆ ಪರಿಹಾರ ನೀಡುತ್ತಾನೆ ಎಂಬುದರ ಸುತ್ತ “ದಿಗ್ವಿಜಯ’ ಸಿನಿಮಾದ ಕಥಾಹಂದರ ಸಾಗುತ್ತದೆ.

ಪ್ರಸ್ತುತ ರಾಜ್ಯದಲ್ಲಿ ಆಗಾಗ್ಗೆ ಸುದ್ದಿಯಾಗುವ ರೈತರ ಆತ್ಮಹತ್ಯೆ, ಸಾಲಬಾಧೆ, ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಸಿಗದಿರುವುದು… ಹೀಗೆ ರೈತರ ಹಲವು ಪ್ರಚಲಿತ ಸಮಸ್ಯೆಗಳನ್ನು “ದಿಗ್ವಿಜಯ’ ಸಿನಿಮಾದಲ್ಲಿ ತೆರೆಮೇಲೆ ತರುವ ಪ್ರಯತ್ನ ಮಾಡಿದೆ ಚಿತ್ರತಂಡ. ಆ್ಯಕ್ಷನ್‌, ಲವ್‌, ಎಮೋಶನ್ಸ್‌, ಸೆಂಟಿಮೆಂಟ್‌ ಹೀಗೆ ಎಲ್ಲ ವಿಷಯಗಳನ್ನು ಇಟ್ಟುಕೊಂಡು ಕಮರ್ಷಿಯಲ್‌ ಎಂಟರ್‌ಟೈನ್ಮೆಂಟ್‌ ಶೈಲಿಯಲ್ಲಿ ಸಿನಿಮಾವನ್ನು ಕಟ್ಟಿಕೊಡಲಾಗಿದೆ.

ನಾಯಕ ನಟ ಜಯಪ್ರಭು ಪತ್ರಕರ್ತನಾಗಿ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ನಾಯಕಿ ಸ್ನೇಹಾ ಅಭಿನಯದಲ್ಲಿ ಇನ್ನಷ್ಟು ಪಳಗಬೇಕಾಗಿದೆ. ಉಳಿದಂತೆ ಹಿರಿಯ ನಟರಾದ ಸುಚೇಂದ್ರ ಪ್ರಸಾದ್‌, ಹೊನ್ನವಳ್ಳಿ ಕೃಷ್ಣ, ಕಿಲ್ಲರ್‌ ವೆಂಕಟೇಶ್‌, ಶಿವಕುಮಾರ ಆರಾಧ್ಯ ತಮ್ಮ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ.

ಸಿನಿಮಾದ ಛಾಯಾಗ್ರಹಣ ಹಳ್ಳಿಯ ಸೊಗಡಿನ ದೃಶ್ಯಗಳನ್ನು ಸುಂದರವಾಗಿ ಕಟ್ಟಿಕೊಟ್ಟಿದ್ದು, ಒಂದೆರಡು ಹಾಡುಗಳು ಗುನುಗುವಂತಿದೆ. ಅತಿಯಾದ ಆಡಂಬರವಿಲ್ಲದೆ, ಪ್ರಸ್ತುತ ರೈತರ ಸಮಸ್ಯೆಗಳನ್ನು ಕಥಾವಸ್ತುವಾಗಿ ಚಿತ್ರಿಸಿರುವುದು ಸಿನಿಮಾದ ಹೆಗ್ಗಳಿಕೆ. ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸಿರುವ “ದಿಗ್ವಿಜಯ’ ಸಿನಿಮಾವನ್ನು ಅತಿಯಾದ ನಿರೀಕ್ಷೆಗಳಿಲ್ಲದೆ ಒಮ್ಮೆ ನೋಡಿ ಬೆನ್ನುತಟ್ಟಿಬರಬಹುದು.

ಹಿಂದಿನ ಲೇಖನರಾಯಚೂರು: ಪತ್ನಿಯನ್ನು ಕೊಂದು ನೇಣಿಗೆ ಶರಣಾದ ಪತಿ
ಮುಂದಿನ ಲೇಖನಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುವ ಪಕ್ಷಕ್ಕೆ ದಾರಿದ್ರ್ಯ ಬರುತ್ತದೆ: ವೀರಪ್ಪ ಮೊಯ್ಲಿ