ಮನೆ ರಾಜ್ಯ ಶಿಥಿಲಾವಸ್ಥೆಯಲ್ಲಿ ಶಾಲಾ ಕಟ್ಟಡ: ದುರಸ್ಥಿಗಾಗಿ ಶಾಲಾ ಮಕ್ಕಳ ಮನವಿ

ಶಿಥಿಲಾವಸ್ಥೆಯಲ್ಲಿ ಶಾಲಾ ಕಟ್ಟಡ: ದುರಸ್ಥಿಗಾಗಿ ಶಾಲಾ ಮಕ್ಕಳ ಮನವಿ

0

ಹಾಸನ(Hassan): ಈಗಾಗಲೇ ಮಳೆಗಾಲ ಆರಂಭವಾಗಿದ್ದು, ಗಾಳಿ ಮಳೆಗೆ ಕಟ್ಟಡಗಳು ಧರೆಗುರುಳುವುದು ಸಾಮಾನ್ಯ. ಅದರಲ್ಲಿಯೂ ಶಿಥಿಲಾವಸ್ಥೆಯಲ್ಲಿರುವ ಕಟ್ಟಡ ಯಾವಾಗ ಬೀಳುತ್ತದೆ ಎಂದು ಹೇಳಲಾಗದು.

ಇಂತಹದ್ದೇ ಪರಿಸ್ಥಿತಿ ಅರಸೀಕೆರೆ ತಾಲೂಕಿನ ಕಾಮಸಮುದ್ರ ಗ್ರಾಮದ ಸರ್ಕಾರಿ ಶಾಲೆಯಲ್ಲಿ ನಿರ್ಮಾಣವಾಗಿದ್ದು, ಶಿಥಿಲಾವಸ್ಥೆಯಲ್ಲಿರುವ ಶಾಲೆಯಲ್ಲಿ ಮಕ್ಕಳು ಭಯದಲ್ಲೇ ಪಾಠ ಕೇಳುವ ನಿರ್ಮಾಣವಾಗಿದೆ.

ಶಾಲೆಯಲ್ಲಿ ಸುಮಾರು ನೂರು ಮಕ್ಕಳು ಓದುತ್ತಿದ್ದಾರೆ. ಆದರೆ ಈ ಶಾಲೆಯಲ್ಲಿ ಸರಿಯಾದ ಕಟ್ಟಡ ಇಲ್ಲದೆ, ಬಿರುಕು ಗೋಡೆಯ ಕೊಠಡಿಯಲ್ಲಿ ಮಕ್ಕಳು ಕುಳಿತು ಪಾಠ ಕೇಳುವಂತಾಗಿದೆ. ಇದರಿಂದ ಮಕ್ಕಳು ಮತ್ತು ಪೋಷಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಶಾಲೆಯಲ್ಲಿ ಒಂದರಿಂದ ಏಳನೇ ತರಗತಿವರೆಗೆ ಸುಮಾರು ನೂರು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದರೂ ಕೂಡ ಸರಿಯಾದ ಕಟ್ಟಡ, ಶೌಚಾಲಯ ಇಲ್ಲದೆ, ಪ್ರತಿನಿತ್ಯ ಮಕ್ಕಳು ಸಂಕಟ ಪಡುವಂತಾಗಿದೆ. ಮಕ್ಕಳು ಕುಳಿತು ಪಾಠ ಕೇಳುವ ತರಗತಿಯ ಗೋಡೆಗಳು ಬಿರುಕು ಬಿಟ್ಟಿದ್ದು, ಬೀಳುವ ಹಂತದಲ್ಲಿವೆ. ಮಕ್ಕಳು ಅದೇ ತರಗತಿಯೊಳಗೆ ಕುಳಿತು ಪಾಠ ಕೇಳುವಂತಾಗಿದೆ.

ಶಾಲಾ ಕಟ್ಟಡ ಸೋರುತ್ತಿರುವುದರಿಂದ ಮಳೆ ಬಂದರೆ ನಾವು ನೆನೆಯುತ್ತೇವೆ. ಪುಸ್ತಕಗಳೂ ಹಾಳಾಗುತ್ತಿವೆ. ನಮಗೆ ಸರಿಯಾದ ಶಾಲಾ ಕೊಠಡಿ ಕಟ್ಟಿಸಿಕೊಡಿ, ನಾವು ಚೆನ್ನಾಗಿ ಓದಬೇಕು, ಇಲ್ಲಿ ಮಳೆ ಬಂದರೆ ಭಯ ಆಗುತ್ತೆ, ಗೋಡೆ ಬಿರುಕು ಬಿಟ್ಟಿದೆ, ಪಾಠ ಕೇಳುವಾಗ ಗೋಡೆ ಕಡೆ ನೋಡಿದ್ದರೆ ಭಯ ಆಗುತ್ತೆ, ಹಾಗಾಗಿ ಇದು ಬೀಳುವವರೆಗೆ ಕಾಯದೆ ಈಗಲೇ ಹೊಸ ಕಟ್ಟಡ ನಿರ್ಮಿಸಿ ಎಂದು ಶಾಲಾ‌ ಮಕ್ಕಳು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಸುಸಜ್ಜಿತ ಕಟ್ಟಡ ಹಾಗೂ ಶೌಚಾಲಯಕ್ಕಾಗಿ ಈಗಾಗಲೇ ಗ್ರಾಮಸ್ಥರು ಹಲವು ಅಧಿಕಾರಿಗಳ ಮೊರೆ ಹೋಗಿದ್ದಾರೆ. ಆದರೆ ಅದರಿಂದ ಯಾವುದೇ ಪ್ರಯೋಜನವಾಗಿಲ್ಲ. ಶಿಥಿಲಾವಸ್ಥೆಯಲ್ಲಿರುವ ಶಾಲಾ ಕಟ್ಟಡ ಕುಸಿದು ಏನಾದರೂ ಅವಾಂತರ ಆಗುವ ಮೊದಲು, ಸರ್ಕಾರ ಈ ಶಾಲೆಗೆ ಒಳ್ಳೆಯ ಕಟ್ಟಡ ಕಟ್ಟಿಕೊಡಲು ತಕ್ಷಣವೇ ಮುಂದಾಗಬೇಕಿದೆ‌.