ಮನೆ ಪೌರಾಣಿಕ ದೀಪಾವಳಿ: ಇಂದು ಬಲೀಂದ್ರನನ್ನು ಸ್ವಾಗತಿಸುವ ಬಲಿಪಾಡ್ಯಮಿ

ದೀಪಾವಳಿ: ಇಂದು ಬಲೀಂದ್ರನನ್ನು ಸ್ವಾಗತಿಸುವ ಬಲಿಪಾಡ್ಯಮಿ

0

ದೀಪಗಳ ಹಬ್ಬವಾದ ದೀಪಾವಳಿಯನ್ನು ಭಾರತೀಯ ಹಬ್ಬಗಳಲ್ಲಿ ಪ್ರಮುಖ ಹಬ್ಬವೆಂದು ಪರಿಗಣಿಸಲಾಗಿದೆ. ಈ ಹಬ್ಬವನ್ನು ಯುಗಯುಗಗಳಿಂದಲೂ ಆಚರಿಸಲಾಗುತ್ತಿದೆ, ದೀಪಾವಳಿಯ ಕಥೆಗಳಲ್ಲಿ ದೀಪಾವಳಿ ಹಬ್ಬದ ಬಗ್ಗೆ ಪೌರಾಣಿಕ ಮಹತ್ವವನ್ನು ನಾವು ಕಾಣುತ್ತೇವೆ.

ದೀಪಾವಳಿಯನ್ನು ಕುರಿತಂತೆ ಭವಿಷ್ಯೋತ್ತರಪುರಾಣದಲ್ಲಿ

ಉಪಶಮಿತ ಮೇಘನಾದಂ ಪ್ರಜ್ವಲಿತ ದಶಾನನಂ ರಮಿತರಾಮಮ್‌ |

ರಾಮಾಯಣಮಿವ ಸುಭಗಂ ದೀಪದಿನಂ ಹರತು ವೋ ದುರಿತಮ್‌ ||

ಎಂಬ ಪ್ರಶಸ್ತಿ ಶ್ಲೋಕವಿದೆ. ಇದರಲ್ಲಿ ದೀಪಾವಳಿಯನ್ನು ರಾಮಾಯಣಕ್ಕೆ ಹೋಲಿಸಿದೆ. ಮಳೆಯಿಲ್ಲದ ಕಾಲದಲ್ಲಿ ಆಚರಿಸುವ ದೀಪಾವಳಿಯು ದುಷ್ಟಸಂಹಾರವನ್ನು ಮಾಡಿ, ಎಲ್ಲರನ್ನೂ ಮುದಗೊಳಿಸಿದ ರಾಮಾಯಣದಂತೆ ಪಾಪಹರವೂ, ರಮಣೀಯವೂ ಆಗಿದೆ ಎಂದಿದೆ.

ಆಶ್ವಯುಜ ಬಹುಳ ತ್ರಯೋದಶಿಯ ನೀರುತುಂಬುವ ಹಬ್ಬದಿಂದ ಆರಂಭಿಸಿ ಕಾರ್ತಿಕ ಶುದ್ಧ ದ್ವಿತೀಯಾ ತಿಥಿಯ ಸೋದರಬಿದಿಗೆಯವರೆಗಿನ ಐದೂ ದಿನಗಳೂ ದೀಪಾವಳಿಯ ಹಬ್ಬದ ಅಂಗಭೂತವಾದ ಆಚರಣೆಗಳೇ ಆಗಿವೆ.

ಇವುಗಳಲ್ಲಿ ನರಕಚತುರ್ದಶಿ ಮತ್ತು ಬಲಿಪಾಡ್ಯಮಿಗಳನ್ನು ಹೆಚ್ಚಾಗಿ ಆಚರಿಸುವ ಪದ್ಧತಿ ಕರ್ನಾಟಕದಲ್ಲಿದೆ.

ಈ ಹಬ್ಬದ ಐದೂ ದಿನಗಳ ಆಚರಣೆಗಳಿಗೆ ಅವುಗಳದೇ ಆದ ವೈಶಿಷ್ಟ್ಯಗಳು, ಪೌರಾಣಿಕ ಹಿನ್ನೆಲೆಗಳು ಸೇರಿಕೊಂಡಿವೆ. ಜೊತೆಗೆ ಹಬ್ಬದ ಆಚರಣೆಯ ಹಿಂದಿರುವ ತಾತ್ತ್ವಿಕ ಮೌಲ್ಯಗಳನ್ನು ಬಿಂಬಿಸುವ ದಿವ್ಯರೂಪಕಗಳೂ ಸೇರಿಕೊಂಡಿವೆ. ಈ ಹಬ್ಬದ ಆಚರಣೆಯ ವಿವರಗಳನ್ನು ಭವಿಷ್ಯೋತ್ತರ, ಪದ್ಮ, ಸ್ಕಾಂದವೇ ಮೊದಲಾದ ಪುರಾಣಗಳಲ್ಲಿಯೂ, ಪೂಜಾಕಲ್ಪಗಳಲ್ಲಿಯೂ ಕಾಣಬಹುದಾಗಿದೆ.

ಕಾರ್ತಿಕಶುದ್ಧ ಪ್ರಥಮಾ ತಿಥಿಯಂದು ಬಲಿಪಾಡ್ಯಮಿಯ ಆಚರಣೆ. ‘ಉಂಡದ್ದೇ ಉ(ಯು)ಗಾದಿ, ಮಿಂದದ್ದೇ ದೀವಳಿಗೆ’ ಎನ್ನುವಂತೆ ಇದರ ಆಚರಣೆಯೂ ಅಭ್ಯಂಗಸ್ನಾನದಿಂದಲೇ ಆರಂಭವಾಗುತ್ತದೆ.

‘ತೈಲೇ ಲಕ್ಷ್ಮೀ ಜಲೇ ಗಂಗಾ‘ ಎಂದು ಹೇಳಿ ಪದ್ಮಪುರಾಣವು ಅಭ್ಯಂಗಸ್ನಾನಕ್ಕೆ ಒತ್ತುಕೊಟ್ಟಿದೆ. ಸಾಯಂಕಾಲದಲ್ಲಿ ನಡೆಸುವ ಬಲೀಂದ್ರನ ಪೂಜೆ ಈ ದಿನದ ಮುಖ್ಯ ಕಲಾಪ.

ಎರಡು ಕೈಗಳಿಂದ ಶೋಭಿಸುವ ಬಲೀಂದ್ರನ ಚಿತ್ರವನ್ನು ಐದು ಬಣ್ಣದ ರಂಗೋಲಿಪುಡಿಗಳಿಂದ ಬರೆದು ಪೂಜಿಸುವ ಪದ್ಧತಿ ಕೆಲವೆಡೆ ಕಂಡುಬಂದರೆ, ಕೆಲವೆಡೆ ಕಿರೀಟ-ಕುಂಡಲಗಳಿಂದ ಅಲಂಕರಿಸಿದ ಬಲೀಂದ್ರನ ವಿಗ್ರಹವನ್ನು ಇಟ್ಟು, ಬಾಣ, ಮುರ ಮೊದಲಾದ ಅಸುರರನ್ನು ಜೊತೆಯಲ್ಲಿಟ್ಟು ಪೂಜಿಸುತ್ತಾರೆ.

ಮೈಸೂರುಸೀಮೆಯ ಸುತ್ತಮುತ್ತ ಕಳಶದಲ್ಲಿ ಬಲೀಂದ್ರನನ್ನು ಸ್ಥಾಪಿಸಿ, ದಾಳಿಂಬೆಯ ಹೂವು, ಮೊಗ್ಗು, ಹೀಚು ಮತ್ತು ಹಣ್ಣುಗಳಿರುವ ರೆಂಬೆಯೊಂದನ್ನು ಜೊತೆಯಲ್ಲಿಟ್ಟು ಧೂಪ-ದೀಪ-ನೈವೇದ್ಯಗಳಿಂದ ಪೂಜಿಸುವ ಪದ್ಧತಿಯಿದೆ.

ಸುವರ್ಣಪುಷ್ಪಗಳಿಂದ ಪೂಜಿಸುವುದಕ್ಕೆ ಪರ್ಯಾಯವಾಗಿ ಹೊನ್ನಾವರಿಕೆಯ ಹೂವುಗಳನ್ನು ‘ಹೊನ್ನು ಹೊನ್ನು’ ಎಂದು ಹೇಳುತ್ತಾ ಅಂಗಳದ ತುಂಬೆಲ್ಲಾ ಎರಚಿ ಬಲೀಂದ್ರನನ್ನು ಸ್ವಾಗತಿಸುತ್ತಾರೆ.

ಬಲಿಪಾಡ್ಯಮಿಯ ಬೆಳಿಗ್ಗೆ ಆಗಷ್ಟೇ ಹಾಕಿದ ಹಸುವಿನ ಸಗಣಿಯಿಂದ ಬಲೀಂದ್ರನ ಕೋಟೆ ನಿರ್ಮಿಸಿ, ಅದರ ಮಧ್ಯದದಲ್ಲಿ ಸಗಣಿಯ ಗೋಪುರಾಕಾರದ ಬಲೀಂದ್ರನನ್ನು ಸ್ಥಾಪಿಸಿ ಪೂಜಿಸುವುದೂ ಕಂಡುಬರುತ್ತದೆ.

ಬಲೀಂದ್ರನಿಗೆ ಅರ್ಘ್ಯ ಕೊಡುವಾಗ –

ಬಲಿರಾಜ ನಮಸ್ತುಭ್ಯಂ ವಿರೋಚನ ಸುತಪ್ರಭೋ |

ಭವಿಷ್ಯೇಂದ್ರ ಸುರಾರಾತೇ ವಿಷ್ಣು ಸಾನ್ನಿಧ್ಯೋ ಭವ ||

ಎಂದು ಹೇಳಿ, ಅಸುರನಾದರೂ, ವಿಷ್ಣುವಿಗೆ ಪ್ರಿಯನಾಗಿ ಭಾಗವತರ ಸಾಲಿಗೆ ಸೇರಿದ ಬಲಿಯನ್ನು ನೆನಪಿಸಿಕೊಳ್ಳಲಾಗುತ್ತದೆ.

ಭವಿಷ್ಯೋತ್ತರ ಪುರಾಣವು ಬಲಿಪಾಡ್ಯಮಿಯಂದು ರಾತ್ರಿಯೆಲ್ಲಾ ಎಚ್ಚರವಿದ್ದು ವೀರಕ್ಷತ್ರಿಯರ ಕಥೆಗಳಿಂದ ಕೂಡಿದ ನಾಟಕಗಳನ್ನು ಆಡಬೇಕು ಎಂದಿದೆ. ಹಾಗಾಗಿಯೇ ಬಲಿಪಾಡ್ಯಮಿಯನ್ನು ‘ವೀರಪ್ರತಿಪದಾ’ ಎಂದೂ ಕರೆಯುತ್ತಾರೆ.

ಮಲೆನಾಡಿನ ಊರುಗಳಲ್ಲಿ ರಾಸುಗಳಿಗೆ ಅಲಂಕಾರಮಾಡಿ ಪೂಜಿಸುವ ಪದ್ಧತಿ ಇದೆ. ‘ಅನ್ನಕೂಟ’ವೆಂದು ಕರೆಯಲಾಗುವ ಗೋವರ್ಧನಪೂಜೆಯೂ ಬಲಿಪಾಡ್ಯಮಿಯಂದು ಹಲವೆಡೆ ನಡೆಯುತ್ತದೆ.

ದೀಪಾವಳಿಯ ಇನ್ನಷ್ಟು ಕಥೆಗಳು:

ಸತ್ಯಯುಗದ ಕಥೆ

ಮೊದಲನೇಯದಾಗಿ ದೀಪಾವಳಿಯನ್ನು ಸತ್ಯಯುಗದಲ್ಲಿಯೇ ಆಚರಿಸಲಾಯಿತು. ದೇವತೆಗಳು ಮತ್ತು ರಾಕ್ಷಸರು ಒಟ್ಟಾಗಿ ಸಾಗರವನ್ನು ಮಂಥನ ಮಾಡಿದಾಗ, ಐರಾವತ, ಚಂದ್ರ, ಉಚ್ಚೈಶ್ರ್ವ, ಪಾರಿಜಾತ, ವಾರುಣಿ, ರಂಭ ಮುಂತಾದ 14 ರತ್ನಗಳೊಂದಿಗೆ ಹಾಲಾಹಲ ವಿಷವು ಹೊರಹೊಮ್ಮಿತು. ಇದರೊಂದಿಗೆ ಆರೋಗ್ಯದ ಆದಿದೇವನಾದ ಧನ್ವಂತರಿಯು ಪ್ರಕಟಗೊಳ್ಳುತ್ತಾನೆ. ಅಶ್ವಿನಿ ಕೃಷ್ಣ ತ್ರಯೋದಶಿ ಎಂದರೆ ಧನತೇರಸ್. ಇದರ ನಂತರ ಮಹಾಲಕ್ಷ್ಮಿ ದೇವಿಯು ಈ ಮಹಾ ಮಂಥನದಿಂದ ಜನಿಸಿದಳು ಮತ್ತು ಮೊದಲ ದೀಪಾವಳಿಯನ್ನು ಎಲ್ಲಾ ದೇವರುಗಳು ಅವಳ ಸ್ವಾಗತದೊಂದಿಗೆ ಆಚರಿಸಿದರು.

ತ್ರೇತಾಯುಗ

ತ್ರೇತಾಯುಗದ ಕಥೆಯು ಭಗವಾನ್ ಶ್ರೀರಾಮನ ಹೆಸರಿನಿಂದ ಹೆಚ್ಚು ಪ್ರಸಿದ್ಧವಾಗಿದೆ. ರಾಕ್ಷಸೇಂದ್ರ ರಾವಣನನ್ನು ಸೋಲಿಸಿದ ನಂತರ, 14 ವರ್ಷಗಳ ವನವಾಸವನ್ನು ಕಳೆದು ಶ್ರೀರಾಮನು ಅಯೋಧ್ಯೆಗೆ ಹಿಂದಿರುಗಿದಾಗ ಇಡೀ ನಗರವನ್ನು ದೀಪಗಳಿಂದ ಅಲಂಕರಿಸಲಾಗಿತ್ತು ಮತ್ತು ಈ ಹಬ್ಬವು ಕತ್ತಲೆಯ ಮೇಲೆ ಬೆಳಕಿನ ವಿಜಯದ ಸಂಕೇತವಾಗಿ ದೀಪಾವಳಿಯೆಂದು ಆಚರಿಸಲಾಯಿತು.

 ದ್ವಾಪರ ಯುಗದ ಕಥೆ

ಎರಡನೇ ಘಟನೆ ಕೃಷ್ಣನ ಮದುವೆಗೆ ಸಂಬಂಧಿಸಿದೆ. ನರಕಾಸುರನೆಂಬ ರಾಕ್ಷಸನನ್ನು ಕೊಂದು ಅವನ ಪ್ರೀತಿಯ ಸತ್ಯಭಾಮೆಗಾಗಿ ಪಾರಿಜಾತ ವೃಕ್ಷವನ್ನು ತಂದ ಘಟನೆಯು ದೀಪೋತ್ಸವದ ಒಂದು ದಿನದ ಹಿಂದಿನ ರೂಪ ಚತುರ್ದಶಿಯೊಂದಿಗೆ ಸಂಬಂಧಿಸಿದೆ. ಅದಕ್ಕಾಗಿಯೇ ಇದನ್ನು ನರಕ ಚತುರ್ದಶಿ ಎಂದೂ ಕರೆಯುತ್ತಾರೆ.

ಕಲಿಯುಗದ ಕಥೆ

ಪ್ರಸ್ತುತ ಕಲಿಯುಗವು ದೀಪಾವಳಿಯನ್ನು ಸ್ವಾಮಿ ರಾಮತೀರ್ಥ ಮತ್ತು ಸ್ವಾಮಿ ದಯಾನಂದರ ನಿರ್ವಾಣದೊಂದಿಗೆ ಸಂಪರ್ಕಿಸುತ್ತದೆ. ತ್ರಿಶಲಾನಂದನ್ ಮಹಾವೀರ್ ಅವರು ತಮ್ಮ ಸ್ವಯಂ-ಅಜ್ಞಾನದ ಅತ್ಯುನ್ನತ ಬೆಳಕನ್ನು ಪೂರೈಸಲು ಈ ಉತ್ಸವವನ್ನು ಆರಿಸಿಕೊಂಡರು, ಅವರನ್ನು ಭಾರತೀಯ ಜ್ಞಾನ ಮತ್ತು ಬುದ್ಧಿವಂತಿಕೆಯ ಪ್ರಜ್ವಲಿಸುವ ಅಮರ ದೀಪ ಎಂದು ನೆನಪಿಸಿಕೊಳ್ಳುತ್ತಾರೆ. ಅವರ ದಿವ್ಯವಾದ ಸೆಳವು ಪ್ರೀತಿ, ಅಹಿಂಸೆ ಮತ್ತು ಸಂಯಮದ ಅದ್ಭುತ ಮಾದರಿಯಾಗಿ ಇಂದಿಗೂ ಜಗತ್ತನ್ನು ಬೆಳಗಿಸಿದೆ.

ಹಿಂದಿನ ಲೇಖನದೀಪ
ಮುಂದಿನ ಲೇಖನಮಂಡ್ಯದ ಅತ್ಯಾಚಾರ ಪ್ರಕರಣ: ಪೊಲೀಸರಿಂದ 638 ಪುಟಗಳ ಚಾರ್ಜ್’ಶೀಟ್ ಸಲ್ಲಿಕೆ