ಮನೆ ರಾಜಕೀಯ ಎನ್‌ ಇಪಿ ಮತ್ತು ಎಸ್‌ ಇಪಿ ಬಗ್ಗೆ ಗೊಂದಲ ಬೇಡ. ರಾಜ್ಯಪಠ್ಯವೇ ಅಂತಿಮ: ಮಧು ಬಂಗಾರಪ್ಪ

ಎನ್‌ ಇಪಿ ಮತ್ತು ಎಸ್‌ ಇಪಿ ಬಗ್ಗೆ ಗೊಂದಲ ಬೇಡ. ರಾಜ್ಯಪಠ್ಯವೇ ಅಂತಿಮ: ಮಧು ಬಂಗಾರಪ್ಪ

0

ಕುಂದಾಪುರ: ಎನ್‌ ಇಪಿ ಮತ್ತು ಎಸ್‌ ಇಪಿ ಬಗ್ಗೆ ಗೊಂದಲ ಬೇಡ. ನಾವು ಎನ್‌ ಇಪಿಗೆ ವಿರೋಧ ಮಾಡಿದ್ದೇವೆ. ರಾಜ್ಯ ಪಠ್ಯದ ಅಧ್ಯಯನ ಸಮಿತಿ ವರದಿ ಸಿದ್ಧ ಮಾಡುತ್ತಿದೆ. ಅದೇ ಜಾರಿಯಾಗಲಿದೆ. ಈಗಾಗಲೇ ಎನ್‌ ಇಪಿ ಶಿಕ್ಷಣ ಪಡೆಯುತ್ತಿರುವವರು ಅದರಲ್ಲಿ ಮುಂದುವರಿಯಬಹುದು. ಮುಂದಿನ ದಿನಗಳಲ್ಲಿ ಆಯ್ಕೆಗೆ ಅವಕಾಶ ಇರುವುದಿಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ಪ್ರಣಾಳಿಕೆಯಲ್ಲಿ ನಾವು ಎನ್‌ ಇಪಿಗೆ ವಿರೋಧವನ್ನು ಪ್ರಕಟಿಸಿದ್ದೆವು. ನಾವು 3 ಪರೀಕ್ಷೆಗಳನ್ನು ಮಾಡುತ್ತೇವೆ ಎಂದೆವು. ಕೇಂದ್ರ ಈಗ 2 ಪರೀಕ್ಷೆ ಮಾಡಲು ಮುಂದಾಗಿದೆ. ಕೇಂದ್ರವೂ ನಮ್ಮ ಶಿಕ್ಷಣ ಕ್ರಮವನ್ನು ಅನುಸರಿಸುತ್ತಿದೆ ಎನ್ನುವುದೇ ನಾವು ಸರಿದಾರಿಯಲ್ಲಿದ್ದೇವೆ ಎನ್ನುವುದಕ್ಕೆ ಕುರುಹು ಎಂದರು.

ಪಠ್ಯಪುಸ್ತಕ ಬದಲಾಗುತ್ತದೆ. ಕಾಂಗ್ರೆಸ್‌ ಪಠ್ಯ, ಬಿಜೆಪಿ ಪಠ್ಯ ಎಂದಲ್ಲ. ಮಕ್ಕಳಿಗೆ ಯಾವುದು ಬೇಕೋ ಅದನ್ನು ನೀಡುತ್ತೇವೆ. 5, 8, 9 ತರಗತಿ ಬೋರ್ಡ್‌ ಪರೀಕ್ಷೆ ಕುರಿತು ಗೊಂದಲ ಇದೆ. ಹೈಕೋರ್ಟ್‌ ಏನು ತೀರ್ಪು ನೀಡಲಿದೆಯೋ ಅದನ್ನು ಅನುಷ್ಠಾನಕ್ಕೆ ತರುತ್ತೇವೆ. ನಾವು ಪರೀಕ್ಷೆ ನಡೆಸಲು ಮುಂದಾದಾಗ ಸಂಘ ಸಂಸ್ಥೆಗಳು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಸದ್ಯ ಪರೀಕ್ಷೆ ನಡೆಸದಂತೆ ಕೋರ್ಟ್‌ ಸೂಚಿಸಿದ ಕಾರಣ ಯಥಾಸ್ಥಿತಿ ಇರಲಿದೆ ಎಂದರು.

ರಾಜ್ಯದ ಮೂರನೆಯ ಒಂದಂಶದ ಜನ ನನ್ನ ಇಲಾಖೆ ವ್ಯಾಪ್ತಿಗೆ ಬರುತ್ತಾರೆ. ಕಳೆದ ಬಾರಿ 37 ಸಾವಿರ ಕೋ.ರೂ.ಬಜೆಟ್‌ ಇದ್ದರೆ ಈ ಬಾರಿ ನನ್ನ ಇಲಾಖೆಗೆ 44,500 ಕೋ.ರೂ. ಬಜೆಟ್‌ ನೀಡಲಾಗಿದೆ ಎಂದರು. ಶಾಲೆಗಳಿಗೆ 10 ವರ್ಷಗಳಿಗೆ ಅನುಮತಿ ನೀಡಲಾಗುತ್ತಿದೆ. ಸುರಕ್ಷೆ ಕುರಿತು ಆಯಾ ಇಲಾಖೆಗಳೇ ಪ್ರಮಾಣಪತ್ರ ನೀಡಬೇಕು. ತಪ್ಪಿದರೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಹಿಂದಿನ ಲೇಖನಬಾಳು ಕೊಡುವುದಾಗಿ ನಂಬಿಸಿ ಮಹಿಳೆಯಿಂದ ಲಕ್ಷ ರೂ. ಪಡೆದು ವಂಚನೆ: ವ್ಯಕ್ತಿ ಮನೆ ಮುಂದೆ ಕುಟುಂಬಸ್ಥರ ಪ್ರತಿಭಟನೆ
ಮುಂದಿನ ಲೇಖನಬಿಯರ್​​ ಬಾಟಲಿಗೆ 50 ರೂ. ಶುಲ್ಕ ಹೆಚ್ಚಳ: ವ್ಯಕ್ತಿ ಆತ್ಮಹತ್ಯೆಗೆ ಯತ್ನ