ಮನೆ ಕವನ ಮುನಿಯಬೇಡ ಗೆಳತಿ- ಕವನ

ಮುನಿಯಬೇಡ ಗೆಳತಿ- ಕವನ

0

ಬೇಕೆನಿಸಿದರು ನಿನ್ನ ಬಳಿ ಇರಲಾಗದಿರುವಾಗ

ನೆನೆದರೂ ನಿನ್ನ ಸನಿಹ ಬರಲಾಗದಿರುವಾಗ

ಬಯಸಿದರು ನಿನ್ನ ಸಂಗ ಸಿಗಲಾಗದಿರುವಾಗ

ಮುನಿದು ಮೌನದಿ ಮರೆಯಾಗದಿರು ಗೆಳತಿ

ಚಿತ್ತ ಚೈತನ್ಯ ಜಡವಾಗಿ ಏನು ತೋಚದಾದಾಗ

ಎದೆ ಭಾವ ಜಲ ಬತ್ತುತ ಬರಡಾದಂತಾದಾಗ

ಪದ ಸಾಲು ಮಿನುಗಿ ಹೊಳೆಯದಂತಾದಾಗ

ಕನಿಕರವಿಲ್ಲದೆ ಕೈತಪ್ಪಿ ಹೋಗದಿರು ಗೆಳತಿ

ಹೀಗೆ ಬರೆಯಲೂ ಆಗದಷ್ಟು ಬಸವಳಿದಾಗ

ಹಾಗೆ ಓಡುತಾ ಕಾಲದೊಂದಿಗೆ ಜಿದ್ದಿಗಿಳಿದಾಗ

ಕ್ಷಣ ಬಿಡುವಿರದೆ ಬೆಂದು ಬಳಲಿ ಹೈರಾಣಾದಾಗ

ಹೇಳದೆ ಕೇಳದೆ ಕಾಣೆಯಾಗದಿರು ಗೆಳತಿ

ಚಿಂತೆಯಲ್ಲಿರಲಿ ಸಂತೆಯಲ್ಲಿರಲಿ ಬಿಗುಮಾನಿಸದೆ

ಸಂತಸದಲ್ಲಿರಲಿ ಸಂಕಟದಲ್ಲಿರಲಿ ಅನುಮಾನಿಸದೆ

ಎಲ್ಲಿದ್ದರೂ ಹೇಗಿದ್ದರೂ ಯೋಚಿಸದೆ ಯಾಚಿಸದೆ

ಬಂದೆನ್ನ ಒಪ್ಪಿ ಬರಸೆಳೆದು ಬಿಗಿದಪ್ಪಿ ಬಿಡು ಗೆಳತಿ

ನೀನೆನ್ನ ಜೀವದಾ ಭಾವ, ಭಾವದ ಜೀವ ಗೆಳತಿ.

ನೀನೆನ್ನ ಅರಿವು, ಅಂತಃಕರಣಗಳ ದೈವ

ನಿನ್ನಿಂದಲೇ ಈ ಜಗದಿ ನನಗೊಂದು ಮಾನ್ಯತೆ,

ನಿನ್ನಿಂದಲೇ ಈ ಬದುಕಿಗೊಂದು ಅಸ್ಮಿತೆ ಧನ್ಯತೆ.