ಬೆಂಗಳೂರು: ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ ಮತ್ತು ಉಗಾಂಡಾದಲ್ಲಿ ಎಬೋಲಾ ಸೋಂಕು ವೇಗವಾಗಿ ವ್ಯಾಪಿಸುತ್ತಿರುವ ಹಿನ್ನೆಲೆ, ವಿಶ್ವ ಆರೋಗ್ಯ ಸಂಸ್ಥೆ (WHO) ಮೇ 17 ರಂದು ಇದನ್ನು ‘ಅಂತರರಾಷ್ಟ್ರೀಯ ಕಳವಳದ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿ’ ಎಂದು ಘೋಷಿಸಿದೆ.ಈ ಘೋಷಣೆಯ ಬೆನ್ನಲ್ಲೇ ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಜ್ಯದಾದ್ಯಂತ ಮುನ್ನೆಚ್ಚರಿಕಾ ಕ್ರಮಗಳನ್ನು ತೀವ್ರಗೊಳಿಸಿದ್ದು, ಸಾರ್ವಜನಿಕರಿಗೆ ಅಗತ್ಯ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.
ಭಾರತದಲ್ಲಿ ಇದುವರೆಗೆ ಯಾವುದೇ ಎಬೋಲಾ ಪ್ರಕರಣಗಳು ಪತ್ತೆಯಾಗಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ. ಆದರೆ ಅಂತರರಾಷ್ಟ್ರೀಯ ಪ್ರಯಾಣ ಮತ್ತು ವ್ಯಾಪಾರ ಚಟುವಟಿಕೆಗಳನ್ನು ಗಮನದಲ್ಲಿಟ್ಟುಕೊಂಡು ರಾಜ್ಯದಾದ್ಯಂತ ನಿಗಾ ವ್ಯವಸ್ಥೆಯನ್ನು ಬಲಪಡಿಸಲಾಗಿದೆ ಎಂದು ತಿಳಿಸಿದೆ.ಸಮಗ್ರ ರೋಗ ಕಣ್ಗಾವಲು ಕಾರ್ಯಕ್ರಮ (IDSP) ಅಡಿಯಲ್ಲಿ ಶಂಕಿತ ಪ್ರಕರಣಗಳ ಮೇಲ್ವಿಚಾರಣೆಯನ್ನು ಹೆಚ್ಚಿಸಲಾಗಿದೆ. ಎಬೋಲಾ ಪೀಡಿತ ದೇಶಗಳಿಂದ ಆಗಮಿಸುವ ಪ್ರಯಾಣಿಕರನ್ನು ಪತ್ತೆಹಚ್ಚಲು ವಿಮಾನ ನಿಲ್ದಾಣಗಳು ಹಾಗೂ ಇತರ ಪ್ರವೇಶ ಕೇಂದ್ರಗಳೊಂದಿಗೆ ಸಮನ್ವಯವನ್ನು ಗಟ್ಟಿಗೊಳಿಸಲಾಗಿದೆ.
ರಾಜ್ಯದ ಎಲ್ಲಾ ತ್ವರಿತ ಪ್ರತಿಕ್ರಿಯೆ ತಂಡಗಳನ್ನು ಹೈ ಅಲರ್ಟ್ನಲ್ಲಿ ಇರಿಸಲಾಗಿದ್ದು, ಆಸ್ಪತ್ರೆಗಳಲ್ಲಿ ಸೋಂಕು ತಡೆ ಮತ್ತು ನಿಯಂತ್ರಣ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದೆ. ಶಂಕಿತ ಪ್ರಕರಣಗಳನ್ನು ನಿರ್ವಹಿಸಲು ಆರೋಗ್ಯ ಸಿಬ್ಬಂದಿಗೆ ವಿಶೇಷ ತರಬೇತಿ ನೀಡಲಾಗುತ್ತಿದೆ.ಇದಲ್ಲದೆ PPE ಕಿಟ್ಗಳು, ಅಗತ್ಯ ಔಷಧಗಳು ಮತ್ತು ಪ್ರಯೋಗಾಲಯ ಸೌಲಭ್ಯಗಳನ್ನು ಸಾಕಷ್ಟು ಪ್ರಮಾಣದಲ್ಲಿ ಸಿದ್ಧವಾಗಿಡಲಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಬೆಂಗಳೂರಿನ ರಾಜೀವ್ ಗಾಂಧಿ ಎದೆ ರೋಗಗಳ ಸಂಸ್ಥೆಯನ್ನು ಪ್ರತ್ಯೇಕ ವಾರ್ಡ್ ಆಗಿ ಹಾಗೂ ಸಾಂಕ್ರಾಮಿಕ ರೋಗಗಳ ಆಸ್ಪತ್ರೆಯನ್ನು ಕ್ವಾರಂಟೈನ್ ಮತ್ತು ಚಿಕಿತ್ಸಾ ಕೇಂದ್ರವಾಗಿ ಗುರುತಿಸಲಾಗಿದೆ.ಮಂಗಳೂರಿನಲ್ಲಿ ಶ್ರೀನಿವಾಸ್ ಪೋರ್ಟ್ ಆಸ್ಪತ್ರೆಯನ್ನು ಕ್ವಾರಂಟೈನ್ ಕೇಂದ್ರವಾಗಿ ಹಾಗೂ ವೆನ್ಲಾಕ್ ಜಿಲ್ಲಾ ಆಸ್ಪತ್ರೆಯನ್ನು ಐಸೊಲೇಷನ್ ಮತ್ತು ಚಿಕಿತ್ಸಾ ಕೇಂದ್ರವಾಗಿ ಸಜ್ಜುಗೊಳಿಸಲಾಗಿದೆ.
ಶಂಕಿತ ರೋಗಿಗಳನ್ನು ಸುರಕ್ಷಿತವಾಗಿ ಸಾಗಿಸಲು ಪ್ರತ್ಯೇಕ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಲಾಗಿದೆ. ಶಂಕಿತರಿಂದ ಸಂಗ್ರಹಿಸಲಾದ ಮಾದರಿಗಳನ್ನು ಬೆಂಗಳೂರಿನ NIV ಮೂಲಕ ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆಗೆ ಅಂತಿಮ ಪರೀಕ್ಷೆಗಾಗಿ ಕಳುಹಿಸಲಾಗುತ್ತದೆ. ಎಬೋಲಾ ಪೀಡಿತ ರಾಷ್ಟ್ರಗಳಿಂದ ಹಿಂದಿರುಗುವ ಪ್ರಯಾಣಿಕರು ಕಡ್ಡಾಯವಾಗಿ 21 ದಿನಗಳ ಕಾಲ ಆರೋಗ್ಯದ ಮೇಲ್ವಿಚಾರಣೆ ಮಾಡಿಕೊಳ್ಳಬೇಕು. ಜ್ವರ, ವಾಂತಿ, ಭೇದಿ ಅಥವಾ ತೀವ್ರ ಸುಸ್ತು ಕಂಡುಬಂದರೆ ತಕ್ಷಣವೇ ಸಮೀಪದ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆಯಬೇಕು ಎಂದು ಇಲಾಖೆ ಸೂಚಿಸಿದೆ.


















