ಮೈಸೂರು (Mysuru): ರಕ್ಷಣಾ ಆಹಾರ ಸಂಶೋಧನಾ ಪ್ರಯೋಗಾಲಯವು (ಡಿಎಫ್ಆರ್ಎಲ್) ಪರಿಸರ ಸ್ನೇಹಿ ಪ್ಲಾಸ್ಟಿಕ್ ಚೀಲವನ್ನು ಸಂಶೋಧಿಸಿದೆ.
ಈ ಪ್ಲಾಸ್ಟಿಕ್ ಚೀಲವು ಸುಲಭವಾಗಿ ಮಣ್ಣಿನಲ್ಲಿ ಕರಗುತ್ತದೆ. 5 ಕೆ.ಜಿ ಭಾರದ ವಸ್ತುಗಳನ್ನು ಕೊಂಡೊಯ್ಯುವ ಸಾಮರ್ಥ್ಯ ಇದಕ್ಕಿದೆ.
ನೈಸರ್ಗಿಕವಾಗಿ ದೊರೆಯುವ ಪಾಲಿ ಲ್ಯಾಕ್ಟಿಕ್ ಆಸಿಡ್ ಪಾಲಿಪೆಟ್ನಿಂದ ಚೀಲವನ್ನು ತಯಾರಿಸಲಾಗಿದೆ. ಬಯೊ ಡಿಗ್ರೇಡಬಲ್ ಚೀಲವು ಪ್ಲಾಸ್ಟಿಕ್ ಬ್ಯಾಗ್‌ನಂತೆ ಕಂಡರೂ 180 ದಿನಗಳಲ್ಲಿ ಸಂಪೂರ್ಣ ಕರಗುತ್ತದೆ. ಅಲ್ಲದೆ, ಇದೇ ತಂತ್ರಜ್ಞಾನದಲ್ಲಿ ಊಟದ ತಟ್ಟೆ, ಚಮಚ ಹಾಗೂ ಆಹಾರ ಪೊಟ್ಟಣಗಳನ್ನು ಸಿದ್ಧಗೊಂಡಿವೆ.
ಪರಿಸರಸ್ನೇಹಿ ಪ್ಲಾಸ್ಟಿಕ್ ಬ್ಯಾಗ್ ಬಗ್ಗೆ ಡಾ.ಜಾನ್ಸಿ ಜಾರ್ಜ್, ಡಾ.ಎಂ.ಪಾಲ್ ಮುರುಗನ್, ಡಾ.ವಾಸುದೇವನ್ ನೇತೃತ್ವದ 15 ವಿಜ್ಞಾನಿಗಳ ತಂಡ ಸತತವಾಗಿ 5 ವರ್ಷ ಸಂಶೋಧನೆ ನಡೆಸಿದೆ. ಸಾಮಾನ್ಯವಾಗಿ 5 ಕೆ.ಜಿ ಭಾರ ಹೊರುವ ಬಟ್ಟೆಯ ಬ್ಯಾಗಿಗೆ 10 ರಿಂದ 15 ರೂಪಾಯಿ ಇರುತ್ತದೆ. ಡಿಎಫ್ಆರ್ಎಲ್ ಕಂಡು ಹಿಡಿದಿರುವ ಪ್ಲಾಸ್ಟಿಕ್ ಬ್ಯಾಗನ್ನು ಕೇವಲ 2 ರೂಪಾಯಿಗಳಿಗೆ ನೀಡಬಹುದು.
ಚಾಮುಂಡಿ ಬೆಟ್ಟಕ್ಕೆ 5 ಸಾವಿರ ಬ್ಯಾಗ್ ಕೊಡುಗೆ:
ಚಾಮುಂಡಿ ಬೆಟ್ಟದ ಪ್ರಸಾದ ವಿತರಣೆಗೆ 5 ಸಾವಿರ ಬ್ಯಾಗ್‌ಗಳನ್ನು ನೀಡಲಾಗಿದ್ದು, ಜನರಲ್ಲಿ ಅರಿವು ಮೂಡಿಸುವ ಕೆಲಸ ನಡೆದಿದೆ. ಮುಂದಿನ ದಿನಗಳಲ್ಲಿ ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯ, ಶ್ರೀರಂಗಪಟ್ಟಣ ರಂಗನಾಥ ಸ್ವಾಮಿ ದೇವಾಲಯಕ್ಕೆ ಹಾಗೂ ಇತರ ದೇವಾಲಯಗಳಿಗೆ ನೀಡುವ ಉದ್ದೇಶ ಹೊಂದಿದೆ.