ಮನೆ ಅಪರಾಧ ಬೈಜೂಸ್ ಸಂಸ್ಥಾಪಕ ಬೈಜು ರವೀಂದ್ರನ್ ಅವರ ಬೆಂಗಳೂರಿನ ಮನೆ ಮೇಲೆ ಇ.ಡಿ ದಾಳಿ

ಬೈಜೂಸ್ ಸಂಸ್ಥಾಪಕ ಬೈಜು ರವೀಂದ್ರನ್ ಅವರ ಬೆಂಗಳೂರಿನ ಮನೆ ಮೇಲೆ ಇ.ಡಿ ದಾಳಿ

0

ಹೊಸದಿಲ್ಲಿ: ವಿದೇಶಿ ಹೂಡಿಕೆ ಕಾನೂನುಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ) ಬೆಂಗಳೂರು ಮೂಲದ ಎಡು ಟೆಕ್ ಸಂಸ್ಥೆ ಬೈಜೂಸ್ ಸಿಇಒ ಬೈಜು ರವೀಂದ್ರನ್ ಅವರ ಮನೆ ಹಾಗೂ ಕಚೇರಿಗಳ ಮೇಲೆ ಇಂದು ದಾಳಿ ನಡೆಸಿದೆ.

Join Our Whatsapp Group

ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆ (ಫೆಮಾ) ನಿಬಂಧನೆಗಳ ಅಡಿಯಲ್ಲಿ ಬೈಜು ರವೀಂದ್ರನ್ ಮತ್ತು ಅವರ ಕಂಪನಿ ‘ಥಿಂಕ್ & ಲರ್ನ್ ಪ್ರೈವೇಟ್ ಲಿಮಿಟೆಡ್’ ವಿರುದ್ಧದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ಸಂಸ್ಥೆಯು ಬೆಂಗಳೂರಿನ ಎರಡು ವಾಣಿಜ್ಯ ಮತ್ತು ಒಂದು ವಸತಿ ಪ್ರದೇಶದಲ್ಲಿ ಶೋಧ ನಡೆಸಿದೆ. ಶೋಧದ ವೇಳೆ ಹಲವಾರು ದಾಖಲೆಗಳು ಮತ್ತು ದತ್ತಾಂಶಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತಿಳಿಸಿದರು.

2011 ರಿಂದ 2023ರ ಅವಧಿಯಲ್ಲಿ ಕಂಪನಿಯು 28,000 ಕೋಟಿ ರೂ.ಗಳಷ್ಟು (ಅಂದಾಜು) ವಿದೇಶಿ ನೇರ ಹೂಡಿಕೆಯನ್ನು ಸ್ವೀಕರಿಸಿದೆ ಎಂಬುದು ಫೇಮಾ ಹುಡುಕಾಟದ ವೇಳೆ ತಿಳಿದು ಬಂದಿದೆ ಎಂದು ತನಿಖಾ ಸಂಸ್ಥೆಯ ಮಾಧ್ಯಮ ಪ್ರಕಟಣೆ ತಿಳಿಸಿದೆ.

ಇದೇ ಅವಧಿಯಲ್ಲಿ ಕಂಪನಿಯು ಸಾಗರೋತ್ತರ ನೇರ ಹೂಡಿಕೆಯ ಹೆಸರಿನಲ್ಲಿ ವಿವಿಧ ವಿದೇಶಿ ಸಂಸ್ಥೆಗಳಿಗೆ ಸುಮಾರು 9,754 ಕೋಟಿ ರೂ.ಗಳನ್ನು ರವಾನಿಸಿದೆ ಎಂದು ಇ.ಡಿ ಆರೋಪಿಸಿದೆ.

ಖಾಸಗಿ ವ್ಯಕ್ತಿಗಳಿಂದ ಸ್ವೀಕರಿಸಿದ ‘ವಿವಿಧ ದೂರುಗಳ’ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತನಿಖಾ ಸಂಸ್ಥೆ ಹೇಳಿದ್ದು, ಬೈಜು ರವೀಂದ್ರನ್ ಅವರಿಗೆ ಹಲವಾರು ಸಮನ್ಸ್’ಗಳನ್ನು ನೀಡಲಾಗಿತ್ತು. ಆದರೆ ಅವರು ಇದರಿಂದ ತಪ್ಪಿಸಿಕೊಂಡು, ಜಾರಿ ನಿರ್ದೇಶನಾಲಯದ ಮುಂದೆ ವಿಚಾರಣೆಗೆ ಹಾಜರಾಗಬೇಕು ಎಂದು ಇ.ಡಿ. ಹೇಳಿದೆ.

ಕಂಪನಿಯು 2020-21ರ ಆರ್ಥಿಕ ವರ್ಷದಿಂದ ತನ್ನ ಹಣಕಾಸಿನ ಹೇಳಿಕೆಗಳನ್ನು ಸಿದ್ಧಪಡಿಸಿಲ್ಲ ಮತ್ತು ತಮ್ಮ ಖಾತೆಗಳನ್ನು ಲೆಕ್ಕಪರಿಶೋಧಕರಿಂದ ಪರಿಶೀಲನೆಯನ್ನೂ ಮಾಡಿಲ್ಲ. ಇದು ನಿಯಮಗಳ ಪ್ರಕಾರ ಕಡ್ಡಾಯವಾಗಿದ್ದರೂ ಇದನ್ನು ನಡೆಸಿಲ್ಲ ಎಂದು ಇ.ಡಿ ದೂರಿದೆ.

ಕಂಪನಿಯು ವಿದೇಶಿ ನ್ಯಾಯವ್ಯಾಪ್ತಿಗೆ ರವಾನಿಸಿದ ಮೊತ್ತ ಸೇರಿದಂತೆ ಜಾಹೀರಾತು ಮತ್ತು ಮಾರುಕಟ್ಟೆ ವೆಚ್ಚಗಳ ಹೆಸರಿನಲ್ಲಿ ಸುಮಾರು 944 ಕೋಟಿ ರೂ.ಗಳನ್ನು ಖರ್ಚು ಮಾಡಿದೆ ಎಂದು ಜಾರಿ ನಿರ್ದೇಶನಾಲಯ ಹೇಳಿದೆ.