ಮನೆ ಭಾವನಾತ್ಮಕ ಲೇಖನ ಬದುಕಿನ ಯಶಸ್ಸಿಗೆ ಪ್ರಯತ್ನವೇ ಆಧಾರ

ಬದುಕಿನ ಯಶಸ್ಸಿಗೆ ಪ್ರಯತ್ನವೇ ಆಧಾರ

0

ನಮ್ಮ ಚಿಂತನೆಗಳೇ ನಮ್ಮೊಳಗಿನ ಭಾವನೆಗಳನ್ನು ಸೃಷ್ಟಿಸುತ್ತವೆ. ಆ ಭಾವನೆಗಳು ನಮ್ಮ ವರ್ತನೆ, ಕಾರ್ಯಚಟುವಟಿಕೆಯನ್ನು ರೂಪಿಸುತ್ತವೆ. ನಾವು ಇತರರೊಂದಿಗೆ ಹೇಗೆ ವರ್ತಿಸುತ್ತೇವೆ ಎಂಬುದು ನಮ್ಮ ವ್ಯಕ್ತಿತ್ವವನ್ನು ಬಿಂಬಿಸುತ್ತದೆ. ನಮ್ಮ ಯೋಚನೆ ಹೇಗೋ, ಹಾಗೆಯೇ ನಮ್ಮ ವರ್ತನೆ, ನಾವು ಮಾಡುವ ಕೆಲಸವೂ ಇರುತ್ತದೆ. ಮುಖ ಮನಸ್ಸಿನ ಕನ್ನಡಿ ಎನ್ನುತ್ತಾರೆ. ನಮ್ಮ ಮುಖದ ಮೇಲಿನ ಭಾವನೆಗಳು ನಮ್ಮ ಆ ಕ್ಷಣದ ಪರಿಸ್ಥಿತಿಯನ್ನು ಪ್ರತಿಬಿಂಬಿಸುತ್ತವೆ. ಅದೇ ರೀತಿ ಸಕಾರಾತ್ಮಕ ಚಿಂತನೆ ಇರುವಲ್ಲಿ ಭಾವನೆ ಮತ್ತು ವರ್ತನೆ ಕೂಡಾ ಸಕಾರಾತ್ಮಕವೇ ಆಗಿರುತ್ತದೆ. ಹಾಗೆಯೇ ನಕಾರಾತ್ಮಕ ಚಿಂತನೆ ಇದ್ದಲ್ಲಿ ಭಾವನೆ ಮತ್ತು ವರ್ತನೆ ನಕಾರಾತ್ಮಕವಾಗಿರುತ್ತದೆ. ಅದರಿಂದ ಸೋಲು ಮತ್ತು ನಿರಾಶೆ ಮಾತ್ರ ನಮ್ಮನ್ನು ಹಿಂಬಾಲಿಸುತ್ತದೆ.

ಉದಾಹರಣೆಗೆ ಕತ್ತಲಾದಾಗ ಅಥವಾ ಕತ್ತಲು ತುಂಬಿದ ಕೋಣೆಗೆ ಹೋದಾಗ ಬೆಳಕನ್ನು ಹುಡುಕುತ್ತೀರಿ. ಬೆಳಕು ಬರಲು ದೀಪ ಹಚ್ಚುತ್ತೀರಿ. ಅಂದರೆ ಕತ್ತಲಾದಾಗ ಬೆಳಕು ಹಚ್ಚಬೇಕು ಎನ್ನುವ ಅರಿವು ಇದೆ ಎಂದಾಯ್ತು. ಹಾಗೆಯೇ ಸಕಾರಾತ್ಮಕ ಚಿಂತನೆ, ನಕಾರಾತ್ಮಕ ಆಲೋಚನೆ ನಮ್ಮ ಮನಸ್ಸನ್ನು ಅವಲಂಬಿಸಿರುತ್ತದೆ. ಅದರಲ್ಲಿ ಯಾವುದನ್ನು ಬೆಳಗಿಸಬೇಕು ಎನ್ನುವ ಆಯ್ಕೆ ನಮಗೇ ಬಿಟ್ಟಿದ್ದು.

ಬದಲಾವಣೆ ನಮ್ಮೊಳಗೇ ನಡೆಯುವ ಆಯ್ಕೆಯ ಪ್ರಕ್ರಿಯೆ. ನಮ್ಮ ನಕಾರಾತ್ಮಕ ನಂಬಿಕೆಗಳನ್ನು ಬದಲಾಯಿಸಿಕೊಳ್ಳದೆ ಹೋದರೆ ಬದಲಾಗುವುದಕ್ಕೆ ಸಾಧ್ಯವಿಲ್ಲ. ನಂಬಿಕೆ, ಚಿಂತನೆ, ಭಾವನೆಗಳಲ್ಲಿ ಬದಲಾವಣೆ ಮಾಡಿಕೊಂಡರೆ ಮಾತ್ರ ಪರಿವರ್ತನೆಯ ಅನುಭವವನ್ನು ನಮ್ಮದಾಗಿಸಿಕೊಳ್ಳಬಹುದು.

ಪ್ರತಿಭೆ ಎಂಬುದು ಒಬ್ಬರ ಸ್ವತ್ತಲ್ಲ. ಆದರೂ ಎಲ್ಲರೂ ಯಶಸ್ಸನ್ನು ಕಾಣುವುದಕ್ಕೆ ಸಾಧ್ಯವಾಗುವುದಿಲ್ಲ. ಕಾರಣ ಇಷ್ಟೇ ನಾವು ಏನನ್ನು ಯೋಚನೆ ಮಾಡುತ್ತೇವೆಯೋ ಹಾಗೆಯೇ ಆಗುತ್ತೇವೆ. ನನ್ನಿಂದ ಮಾಡುವುದಕ್ಕೆ ಸಾಧ್ಯ ಎನ್ನುವ ಸಕಾರಾತ್ಮಕ ಮನಸ್ಥಿತಿಯನ್ನು ಬೆಳೆಸಿಕೊಂಡು, ನಕಾರಾತ್ಮಕ ಯೋಚನೆಗಳಿಗೆ ಅವಕಾಶ ಮಾಡಿಕೊಡದಿದ್ದರೆ ಅಂದುಕೊಂಡಂತೆ ಯಶಸ್ವಿಯಾಗುತ್ತೇವೆ. ಅಂತಹ ಬದಲಾವಣೆಗೆ ನಮ್ಮನ್ನು ಒಡ್ಡಿಕೊಳ್ಳಲು ನಮ್ಮ ಪ್ರಯತ್ನವೇ ಮೂಲ ಆಗಿರುತ್ತದೆ.

ಯಾವತ್ತೋ ನಡೆದು ಹೋದ ಘಟನೆಯೊಂದು ಭವಿಷ್ಯದಲ್ಲಿ ಮತ್ತೆ ಮರುಕಳಿಸಬಹುದು ಎಂಬ ಚಿಂತೆಯನ್ನು ಬಿಟ್ಟುಬಿಡಬೇಕು. ಒಮ್ಮೆ ಅಂದುಕೊಂಡ ಸಾಧ್ಯವಾಗದೇ ಇದ್ದದ್ದು ಈ ಸಂದರ್ಭದಲ್ಲಿ ಯಶಸ್ವಿಯಾಗಬಾರದು ಅಂತೇನೂ ಇಲ್ಲವಲ್ಲ. ಅದಕ್ಕಾಗಿ ಬದಲಾವಣೆಗೆ ಮುಕ್ತವಾಗಿ ತೆರೆದುಕೊಳ್ಳಿ. ಒಂದೊಳ್ಳೆಯ ಐಡಿಯಾ ಬದಲಾವಣೆಯನ್ನು ತರಬಲ್ಲುದು ಎಂಬ ಮನೋಭಾವವನ್ನು ಬೆಳೆಸಿಕೊಳ್ಳಿ. ನನ್ನ ನಂಬಿಕೆಗಳನ್ನು ಬದಲಾಯಿಸಿಕೊಳ್ಳಲು ನಾನು ಮುಕ್ತವಾಗಿದ್ದೇನೆ ಎಂಬುದನ್ನು ಮನನ ಮಾಡಿಕೊಳ್ಳಿ. ಯಾಕೆಂದರೆ ನಾವೇನನ್ನು ಯೋಚಿಸುತ್ತೇವೆಯೋ ಹಾಗೆಯೇ ಆಗುತ್ತೇವೆ.

ನಾನಿರುವುದೇ ಹೀಗೆ ಎನ್ನುವ ಹುಂಬತನ ಇರಬಾರದು. ಹಾಗೆಯೇ ನಾನ್ಯಾಕೆ ಹೀಗಿದ್ದೀನಿ ಎಂದು ಟೀಕೆಗಳಿಗೆ ಒಳಪಡಿಸಿಕೊಳ್ಳಬಾರದು. ತನ್ನಲ್ಲಿರುವ ಒಳ್ಳೆಯ ಗುಣಗಳು ಮಾನವೀಯತೆ, ಸಾವಧಾನತೆ, ಸ್ವೀಕಾರ, ಮೆಚ್ಚುಗೆ ಹಾಗೂ ಆಶಾವಾದದ ಬಗ್ಗೆ ಹೆಮ್ಮೆ ಪಟ್ಟುಕೊಳ್ಳಬೇಕು. ವ್ಯಕ್ತಿತ್ವದಲ್ಲಿ ಬದಲಾವಣೆ ಮಾಡಿಕೊಳ್ಳುವುದರಿಂದ ಒಳ್ಳೆಯದು ಆಗುತ್ತದೆ ಎಂದಾದರೆ ಖಂಡಿತಾ ಅದನ್ನು ಒಪ್ಪಿಕೊಂಡು ಬದಲಾಯಿಸಿಕೊಳ್ಳಬೇಕು.

ಸ್ವತಃ ಬದಲಾವಣೆ ಮಾಡಿಕೊಳ್ಳಬೇಕೆಂದಿದ್ದರೆ ಕೆಲವನ್ನು ತ್ಯಾಗ ಮಾಡಲೇಬೇಕು. ಉದಾಹರಣೆಗೆ ದೇಹ ದಪ್ಪಗಿದೆ, ದೈಹಿಕ ಸಮಸ್ಯೆಗಳು ಕಾಡುತ್ತಿವೆ. ಆರೋಗ್ಯದಲ್ಲಿ ಸುಧಾರಣೆ ತಂದುಕೊಳ್ಳಬೇಕೆಂದು ಬಯಸುವಿರಾದರೆ ಬಾಯಿರುಚಿ ಅನ್ನಿಸಿದನ್ನೆಲ್ಲಾ ತಿನ್ನುವುದನ್ನು ಬಿಡಲೇಬೇಕು. ಅನಾರೋಗ್ಯಕ್ಕೊಳಪಡಿಸುವ ಧೂಮಪಾನ, ವೈಯಕ್ತಿಕವಾಗಿ ಮಾತ್ರವಲ್ಲ ಸಾಮಾಜಿಕವಾಗಿಯೂ ಒಳ್ಳೆಯದು ಅಲ್ಲ ಎನ್ನಿಸಿದ ಚಟ, ಗುಣಗಳನ್ನು ಬಿಟ್ಟು ಬಿಡಲು ಹಿಂಜರಿಕೆ ಬೇಡ.

ನಿರೀಕ್ಷೆ ಅನ್ನೋದು ಮುಂದೆ ಏನಾಗಬೇಕು ಎಂಬುದು ಆಗಿರುತ್ತದೆ. ಅದನ್ನು ಸಾಧಿಸಿಯೇ ತೀರುತ್ತೇನೆ ಎನ್ನುವ ದೃಢವಾದ ನಂಬಿಕೆ, ಅದರೆಡೆಗಿನ ಪ್ರಯತ್ನ ಇದ್ದಾಗ ಮಾತ್ರ ಯಶಸ್ಸು ಸಿಗಲು ಸಾಧ್ಯ. ಬರಿ ನಿರೀಕ್ಷೆ ಇಟ್ಟುಕೊಂಡು ಉದ್ದೇಶ ಮತ್ತು ಅದರೆಡೆಗಿನ ಪ್ರಯತ್ನ ಇಲ್ಲದೇ ಹೋದರೆ ಕನಸು ಕನಸಾಗಿಯೇ ಉಳಿಯುವುದು.