ಮನೆ ಅಪರಾಧ ಎಲೆಕ್ಷನ್ ಎಫೆಕ್ಟ್ ಕ್ರೈಂ ರೇಟ್ ಕಟ್, ಆದ್ರೆ ಜೈಲುಗಳು ಮಾತ್ರ ಫುಲ್ ಟೈಟ್:

ಎಲೆಕ್ಷನ್ ಎಫೆಕ್ಟ್ ಕ್ರೈಂ ರೇಟ್ ಕಟ್, ಆದ್ರೆ ಜೈಲುಗಳು ಮಾತ್ರ ಫುಲ್ ಟೈಟ್:

0

ಚುನಾವಣೆ ಘೋಷಣೆಯಾದ ದಿನದಿಂದಲೇ ರಾಜ್ಯದಲ್ಲಿ ಖಾಕಿ ಸರ್ಪಗಾವಲು ಏರ್ಪಟ್ಟಿದೆ. ಹೀಗಾಗಿ, ಕಳ್ಳಕಾರರ ಪಾಲಿಗೆ ಈಗ ಡ್ರೈ ಡೇ. ಸುಲಿಗೆ, ದರೋಡೆ ಮಾಡಲು ಪೊಲೀಸರ ಭಯ. ಎಲ್ಲೆಲ್ಲೂ ಪೊಲೀಸರು ಹಾಗೂ ಚೆಕ್ ಪೋಸ್ಟ್ ಇರುವ ಕಾರಣ ಮನೆ ಕಳ್ಳತನ ಮಾಡಿದರೂ ಕದ್ದ ಮಾಲು ಸಾಗಿಸಲು ಚಾನ್ಸೇ ಸಿಗಲ್ಲ. ಜೊತೆಯಲ್ಲೇ ರೌಡಿ ಶೀಟರ್‌ಗಳೂ ಜೈಲು ಪಾಲಾಗಿದ್ದು, ಜೈಲುಗಳಂತೂ ತುಂಬಿ ತುಳುಕುತ್ತಿವೆ. ರಾಜ್ಯ ಶಾಂತವಾಗಿದೆ, ಜೈಲುಗಳು ಕಿಕ್ಕಿರಿದು ತುಂಬಿವೆ. ಇದು ಎಲೆಕ್ಷನ್ ಎಫೆಕ್ಟ್. ರಾಜ್ಯದಲ್ಲಿ ಎಲ್ಲೆಲ್ಲೂ ಚುನಾವಣೆಯದ್ದೇ ಮಾತು. ಅಭ್ಯರ್ಥಿಗಳ ಪ್ರಚಾರ, ಹೆಜ್ಜೆ ಹೆಜ್ಜೆಗೂ ಪೊಲೀಸರು, ಪ್ಯಾರಾ ಮಿಲಿಟರಿ ಪಡೆ, ಚೆಕ್ ಪೋಸ್ಟ್‌. ಹೀಗೆ, ಜಾತ್ರೆಯ ವಾತಾವರಣ ರಾಜ್ಯದಲ್ಲಿ ಮನೆ ಮಾಡಿದೆ. ಇದರ ನೇರ ಪರಿಣಾಮ ಆಗಿರೋದು ಕ್ರಿಮಿನಲ್‌ಗಳ ಮೇಲೆ. ಯಾಕಂದ್ರೆ, ಅಪರಾಧ ಕೃತ್ಯಗಳನ್ನು ಎಸಗುವವರಿಗೆ ಅವಕಾಶಗಳೇ ಸಿಗದಂತಾಗಿದೆ, ಇಷ್ಟಾದರೂ ರಾಜ್ಯದ ಜೈಲುಗಳು ಮಾತ್ರ ಹೌಸ್‌ ಫುಲ್ ಆಗಿವೆ.

ಅಪರಾಧ ಪ್ರಮಾಣ ಕಡಿಮೆ ಆಗಿರೋದು ಏಕೆ?

ಮನೆ ಕಳ್ಳತನ ಹಾಗೂ ಡಕಾಯಿತಿ ಮಾಡೋದಂತೂ ಕಷ್ಟ ಕಷ್ಟ ಎಂಬ ಪರಿಸ್ಥಿತಿ ಇದೆ. ಏಕೆಂದರೆ ಬೀಗ ಹಾಕಿದ ಮನೆಗಳ ಬಾಗಿಲು ಮುರಿದು, ಕನ್ನ ಹಾಕಿ ಕಳ್ಳತನ ಮಾಡಿದರೂ ಕೂಡಾ ಕದ್ದ ವಸ್ತುಗಳನ್ನು ಸಾಗಾಟ ಮಾಡೋದೇ ದೊಡ್ಡ ಸವಾಲು. ಹೆಜ್ಜೆ ಹೆಜ್ಜೆಗೂ ಚೆಕ್ ಪೋಸ್ಟ್‌ಗಳು ಇರುವ ಕಾರಣ ಕಳ್ಳರು ಸುಲಭವಾಗಿ ತಾವು ಕಳ್ಳತನ ಮಾಡಿದ ವಸ್ತುಗಳನ್ನು ಸಾಗಿಸಲು ಸಾಧ್ಯವಿಲ್ಲದಂತಾಗಿದೆ. ಹೀಗಾಗಿ, ಕಳ್ಳತನ ಕೃತ್ಯಗಳಿಗೆ ಚುನಾವಣಾ ಆಯೋಗ ಕಡ್ಡಾಯ ರಜೆ ದಯಪಾಲಿಸಿದಂತಾಗಿದೆ.

ಆದ್ರೂ ಜೈಲುಗಳೇಕೆ ಫುಲ್!

ರಾಜ್ಯಾದ್ಯಂತ ಸದ್ಯ ಜೈಲುಗಳು ಸರಾಸರಿ ಶೇ. 108ರಷ್ಟು ಕೈದಿಗಳನ್ನು ಹೊಂದಿವೆ. ತಮ್ಮ ಸಾಮರ್ಥ್ಯ ಮೀರಿ ಕೈದಿಗಳನ್ನು ತುಂಬಿಕೊಂಡಿವೆ. ಇದಕ್ಕೆ ಪ್ರಮುಖ ಕಾರಣ ಎಲೆಕ್ಷನ್ ಹಿನ್ನೆಲೆಯಲ್ಲಿ ರೌಡಿ ಶೀಟರ್‌ಗಳು ‘ಅಂದರ್’ ಆಗಿರೋದು. ರಾಜ್ಯಾದ್ಯಂತ ಎಲ್ಲ ಜೈಲುಗಳ ಬ್ಯಾರಕ್‌ಗಳೂ ಭರ್ತಿಯಾಗಿವೆ. ಇನ್ನು ಈ ಕೈದಿಗಳಿಗೆ ಆಹಾರ ಹಾಗೂ ಇನ್ನಿತರ ವ್ಯವಸ್ಥೆ ಕಲ್ಪಿಸಲು ಜೈಲು ಸಿಬ್ಬಂದಿ ಪರದಾಡುವಂತಾಗಿದೆ.

ಇನ್ನು ಜೈಲಿನಲ್ಲಿ ಅಗತ್ಯ ಸಿಬ್ಬಂದಿ ಕೊರತೆಯೂ ಇದೆ. ಸರ್ಕಾರವು ರಾಜ್ಯದ 51 ಜೈಲುಗಳಿಗೆ 4,154 ಮಂದಿಯ ನೇಮಕಕ್ಕೆ ಅನುಮತಿ ನೀಡಿತ್ತು. ಆದ್ರೆ, 3,094 ಸಿಬ್ಬಂದಿ ಮಾತ್ರ ನೇಮಕವಾಗಿದೆ. ಇನ್ನೂ 1,060 ಹುದ್ದೆಗಳು ಖಾಲಿ ಉಳಿದಿವೆ. ಕೆಲವು ಜೈಲುಗಳಂತೂ ದಾಖಲೆ ಸಂಖ್ಯೆಯ ಕೈದಿಗಳನ್ನು ತುಂಬಿಕೊಂಡಿವೆ. ಬೀದರ್ ಜಿಲ್ಲೆ ಹುಮನಾಬಾದ್ ಕಾರಾಗೃಹದಲ್ಲಿ ಶೇ. 233ರಷ್ಟು ಕೈದಿಗಳಿದ್ದಾರೆ. ಇದಲ್ಲದೆ ರಾಮನಗರ, ಕೋಲಾರ, ಕೊಪ್ಪಳ ಹಾಗೂ ಗದಗ ಜಿಲ್ಲೆಯ ಜೈಲೂಗಳೂ ತುಂಬಿ ತುಳುಕುತ್ತಿವೆ. ಈ ವಿಚಾರ ತುಂಬಾನೇ ಅಪಾಯಕಾರಿ ಎನ್ನುತ್ತಾರೆ ಪೊಲೀಸರು. ಜೈಲುಗಳಲ್ಲಿ ಕೈದಿಗಳ ನೂಕು ನುಗ್ಗಲು ಉಂಟಾದರೆ ಅದನ್ನು ನಿಭಾಯಿಸಲು ಸಿಬ್ಬಂದಿಗೆ ಕಷ್ಟವಾಗುತ್ತದೆ. ಜೊತೆಗೆ ಅಹಿತಕರ ಸನ್ನಿವೇಶಗಳು ಎದುರಾದಾಗ ಅದರ ನಿರ್ವಹಣೆಯೂ ಸವಾಲಾಗುತ್ತದೆ ಎಂಬ ಆತಂಕ ವ್ಯಕ್ತವಾಗಿದೆ.

ಹಿಂದಿನ ಲೇಖನ‘ದಿ ಕೇರಳ ಸ್ಟೋರಿ’ ನಿಷೇಧ V/S ಟ್ಯಾಕ್ಸ್‌ ಫ್ರೀ: ಪರ – ವಿರೋಧ ವಾದವೇನು?
ಮುಂದಿನ ಲೇಖನಇಂದಿನ ನಿಮ್ಮ ರಾಶಿ ಫಲ