ಮನೆ ರಾಷ್ಟ್ರೀಯ ಶೋಪಿಯಾನ್‌ನಲ್ಲಿ ಎನ್‌ಕೌಂಟರ್: ಉಗ್ರ ಕಮಾಂಡರ್ ಹತ, ಇಬ್ಬರು ಭಯೋತ್ಪಾದಕರು ಸೆರೆ!

ಶೋಪಿಯಾನ್‌ನಲ್ಲಿ ಎನ್‌ಕೌಂಟರ್: ಉಗ್ರ ಕಮಾಂಡರ್ ಹತ, ಇಬ್ಬರು ಭಯೋತ್ಪಾದಕರು ಸೆರೆ!

0

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಶುಕ್ರೂ ಕೆಲ್ಲರ್ ಅರಣ್ಯ ಪ್ರದೇಶದಲ್ಲಿ ಮಂಗಳವಾರ ನಡೆದ ಭದ್ರತಾ ಪಡೆಗಳ ದಿಟ್ಟ ಕಾರ್ಯಾಚರಣೆಯಲ್ಲಿ ಒಬ್ಬ ಉಗ್ರ ಕಮಾಂಡರ್ ಹತನಾಗಿರುವ ಘಟನೆ ಭದ್ರತಾ ಪರಿಸ್ಥಿತಿಗೆ ಮಹತ್ವದ ಬೆಳವಣಿಗೆ ತಂದಿದೆ. ಇನ್ನೂ ಇಬ್ಬರು ಉಗ್ರರನ್ನು ಜೀವಂತವಾಗಿ ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.

ಘಟನೆ ನಡೆದದ್ದು ಭಯೋತ್ಪಾದಕ ಚಟುವಟಿಕೆಗಳಿಗೆ ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಹತ್ತಿರ. ಭಾರತೀಯ ಸೇನೆ ಮತ್ತು ಕಾಶ್ಮೀರ ಪೊಲೀಸರ ಸಂಯುಕ್ತ ತಂಡವು ಭಯೋತ್ಪಾದಕರ ಜಾಡು ಪತ್ತೆಹಚ್ಚಿ, ಸ್ಥಳವನ್ನು ಸುತ್ತುವರಿದ ಬಳಿಕ ಗುಂಡಿನ ಚಕಮಕಿ ಆರಂಭವಾಗಿದೆ. ಈ ಎನ್‌ಕೌಂಟರ್‌ನಲ್ಲಿ ಉನ್ನತ ಮಟ್ಟದ ಉಗ್ರ ಕಮಾಂಡರ್‌ ಆದಿಲ್ ಹುಸೇನ್ ಥೋಕರ್ ಹತನಾಗಿರುವ ಬಗ್ಗೆ ಭದ್ರತಾ ಇಲಾಖೆ ವರದಿ ನೀಡಿದೆ.

ಕಾರ್ಯಾಚರಣೆ ನಡೆಸಲು ಮೂಲ ಕಾರಣವಾಗಿದ್ದು, ಪಹಲ್ಗಾಮ್‌ನಲ್ಲಿ ಏಪ್ರಿಲ್ 22ರಂದು ನಡೆದ ಭಯೋತ್ಪಾದಕ ದಾಳಿಗೆ ಸಂಬಂಧಿಸಿದ ಮಹತ್ವದ ಸುಳಿವು. ಈ ದಾಳಿಯಲ್ಲಿ ಪ್ರಮುಖ ಪಾತ್ರವಹಿಸಿದ ಮೂವರು ಪಾಕಿಸ್ತಾನಿ ಉಗ್ರರು ಶಂಕಿತರು ಎಂಬ ಮಾಹಿತಿ ಭದ್ರತಾ ಪಡೆಗಳಿಗೆ ಲಭಿಸಿದ ಹಿನ್ನೆಲೆಯಲ್ಲಿ ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ. ಶಂಕಿತ ಉಗ್ರರು ಆದಿಲ್ ಹುಸೇನ್ ಥೋಕರ್, ಅಲಿ ಭಾಯ್ ಹಾಗೂ ಹಾಶಿಮ್ ಮೂಸಾ ಎನ್ನಲಾಗಿದ್ದು, ಇವರನ್ನು ಹಿಡಿಯಲು ಪೋಸ್ಟರ್‌ಗಳ ಮೂಲಕ ಸಾರ್ವಜನಿಕರ ಸಹಾಯವನ್ನೂ ಕೇಳಲಾಗಿತ್ತು.

ಕಾರ್ಯಾಚರಣೆಯ ಸಂದರ್ಭ ಉಗ್ರರು ತೀವ್ರ ಪ್ರತಿರೋಧ ನೀಡಿದ್ದು, ಕೆಲ ಕಾಲ ಭಾರೀ ಗುಂಡಿನ ಚಕಮಕಿ ನಡೆದಿದೆ. ಈ ವೇಳೆ ಉಗ್ರ ಕಮಾಂಡರ್ ಹತನಾಗಿದ್ದಾನೆ. ಉಳಿದ ಇಬ್ಬರನ್ನು ಭದ್ರತಾ ಪಡೆಗಳು ಜೀವಂತವಾಗಿ ಹಿಡಿದುಕೊಳ್ಳಲು ಯಶಸ್ವಿಯಾದವು. ಅವರಿಂದ ಭದ್ರತಾ ಪಡೆಗಳು ಹೆಚ್ಚಿನ ಮಾಹಿತಿ ಸಂಗ್ರಹಿಸುವ ಕೆಲಸವನ್ನು ಮುಂದುವರಿಸುತ್ತಿವೆ. ಪ್ರಸ್ತುತ ಸ್ಥಳದಲ್ಲಿ ಕಾರ್ಡನ್ ಮತ್ತು ಶೋಧ ಕಾರ್ಯಾಚರಣೆ ನಡೀತಿದ್ದು, ಪರಿಸರದಲ್ಲಿ ಇನ್ನೂ ಭಯೋತ್ಪಾದಕರ ಉಪಸ್ಥಿತಿ ಇರುವ ಸಾಧ್ಯತೆಯ ಹಿನ್ನೆಲೆಯಲ್ಲಿ ಹೆಚ್ಚಿನ ಎಚ್ಚರತೆ ವಹಿಸಲಾಗಿದೆ. ಶೋಪಿಯಾನ್‌ ಜಿಲ್ಲೆಯಲ್ಲಿ ಭಯೋತ್ಪಾದಕ ಚಟುವಟಿಕೆಗಳ ತೀವ್ರತೆಯನ್ನು ನಿಯಂತ್ರಿಸಲು ಭದ್ರತಾ ಪಡೆಗಳು ನಿರಂತರ ಕಾರ್ಯಾಚರಣೆಗಳನ್ನು ನಡೆಸುತ್ತಿವೆ.

ಈ ಘಟನೆ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಗೆ ಭಾರತ ನೀಡಿದ ಮತ್ತೊಂದು ಖಡಕ್ ಸಂದೇಶವೆಂದು ಭದ್ರತಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಉಗ್ರರ ಮೇಲೆ ನಿರಂತರ ಒತ್ತಡ, ಶೂನ್ಯ-ಸಹಿಷ್ಣುತೆ ನೀತಿಯ ಅನುಷ್ಠಾನ ಹಾಗೂ ಉಗ್ರರ ನೆಲೆಗಳ ವಿರುದ್ಧ ನಡೆಯುತ್ತಿರುವ ನಿರಂತರ ಶೋಧ ಕಾರ್ಯಾಚರಣೆಗಳು ಕಾಶ್ಮೀರದಲ್ಲಿ ಶಾಂತಿ ಸ್ಥಾಪಿಸಲು ಮಹತ್ವದ ಪಾತ್ರ ವಹಿಸುತ್ತಿವೆ.

ಶ್ರೀನಗರದ ಹಿರಿಯ ಪೊಲೀಸ್ ಅಧಿಕಾರಿ “ಈ ಎನ್‌ಕೌಂಟರ್‌ನಿಂದ ಪಹಲ್ಗಾಮ್ ದಾಳಿಗೆ ಸಂಬಂಧಿಸಿದ ತನಿಖೆಗೆ ಸ್ಪಷ್ಟತೆ ಬರುತ್ತಿದ್ದು, ಭಯೋತ್ಪಾದಕರ ಜಾಲವನ್ನು ಬುಡಮೇಲೆ ಕಿತ್ತುಹಾಕುವಲ್ಲಿ ಇದು ಪ್ರಮುಖ ಹಂತವಾಗಲಿದೆ” ಎಂದಿದ್ದಾರೆ.