ಶಿವಮೊಗ್ಗ: ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಪರಸ್ಪರ ಎದುರಾಳಿಗಳಾಗಿರುವ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಮತ್ತು ಬಂಡಾಯ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಅವರು ಇಂದಿಲ್ಲಿ ಆರೆಸ್ಸೆಸ್ ಕಾರ್ಯಕ್ರಮದಲ್ಲಿ ಭಾಗಿಯಾದರೂ ಪರಸ್ಪರ ಮುಖಾಮುಖಿಯಾಗಿ ಹಬ್ಬದ ಶುಭಾಶಯ ಕೂಡಾ ವಿನಿಮಯ ಮಾಡಿಕೊಳ್ಳಲಿಲ್ಲ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ
ಶರಾವತಿ ನಗರದ ಆದಿಚುಂಚನಗಿರಿ ಶಾಲೆ ಆವರಣದಲ್ಲಿ ಯುಗಾದಿ ಉತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಎಸ್.ಎನ್.ಚನ್ನಬಸಪ್ಪ ಅವರಿಬ್ಬರೂ ಗಣ ವೇಷಧಾರಿಗಳಾಗಿ ಭಾಗಿಯಾಗಿದ್ದರೆ, ಈಶ್ವರಪ್ಪ ಸಾಮಾನ್ಯ ಉಡುಗೆ ಜೊತೆ ಕೇವಲ ಟೋಪಿ ಮಾತ್ರ ಧರಿಸಿದ್ದರು.
ರಾಘವೇಂದ್ರ ಒಂದು ಬದಿಯಲ್ಲಿ ಕುಳಿತಿದ್ದರೆ, ಮತ್ತೊಂದು ಬದಿಯಲ್ಲಿ ಈಶ್ವರಪ್ಪ ಆಸೀನರಾಗಿದ್ದರು. ಯುಗಾದಿ ಉತ್ಸವ ಕಾರ್ಯಕ್ರಮದ ಬಳಿಕ ಆರ್‌ಎಸ್‌ಎಸ್ ಮುಖಂಡರು, ಕಾರ್ಯಕರ್ತರು ಶುಭಾಷಯ ವಿನಿಮಯ ಮಡಿಕೊಂಡು, ಬೇವು ಬೆಲ್ಲ ಹಂಚಿದರು. ಆದರೆ ರಾಘವೇಂದ್ರ ಮತ್ತು ಈಶ್ವರಪ್ಪ ಮುಖಾಮುಖಿ ಆಗದೇ ನಿರ್ಗಮಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಿ.ವೈ.ರಾಘವೇಂದ್ರ,
‘ ಸಂಸದ, ನಾಯಕನಾಗಿ ಅಲ್ಲ, ಸ್ವಯಂ ಸೇವಕನಾಗಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇನೆ. ಯುಗಾದಿ ಹೇಗೆ ಮರಳಿ ಬರುತ್ತದೆಯೋ ಹಾಗೆಯೆ ಮತ್ತೆ ಮೋದಿ ಪ್ರಧಾನಿ ಆಗಲಿದ್ದಾರೆ’ ಎಂದರು.
‘ಸ್ವಯಂ ಸೇವಕನಾಗಿ ಭಾಗಿ’
ಬಿಜೆಪಿ ಬಂಡಾಯ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಮಾತನಾಡಿ, ‘ರಾಷ್ಟ್ರೀಯ ಸ್ವಯಂಸೇವಕ ಸಂಘ ಜನ್ಮ ತಾಳಿದ್ದು ಯುಗಾದಿ ದಿನ. ಹಿಂದೂ ಸಮಾಜಕ್ಕೆ ಯುಗಾದಿ ವಿಶೇಷ ಹಬ್ಬ. ಎಲ್ಲ ಹಿಂದೂಗಳು ಒಂದಾಗಬೇಕು ಎಂಬ ಸ್ಪೂರ್ತಿ ಕೊಡುವ ಹಬ್ಬ ಯುಗಾದಿ. ಆದ್ದರಿಂದ ಈ ಕಾರ್ಯಕ್ರಮದಲ್ಲಿ ಸ್ವಯಂಸೇವಕನಾಗಿ ಪಾಲ್ಗೊಂಡಿದ್ದೇನೆ’ ಎಂದರು.