ಬೆಂಗಳೂರು: ಸರ್ಕಾರದ ತೀರ್ಮಾನವನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಲು ಎಲ್ಲರಿಗೂ ಹಕ್ಕಿದೆ. ಆದರೆ ಅಂತಿಮತೀರ್ಮಾನ ನ್ಯಾಯಾಲಯದ್ದೇ ಆಗಿರುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ಬೆಂಗಳೂರಿನಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.
ಡಿ ಕೆ ಶಿವಕುಮಾರ್ ವಿರುದ್ಧ ಸಿಬಿಐ ತನಿಖೆಗೆ ಅನುಮತಿ ವಾಪಸ್ ಪಡೆದಿರುವುದಕ್ಕೆ ಶಾಸಕ ಬಸವರಾಜ ಯತ್ನಾಳ್ ಅವರು ಉಚ್ಛನ್ಯಾಯಾಲಯದಲ್ಲಿ ದಾವೆ ಹೂಡಿರುವ ಬಗ್ಗೆ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡುತ್ತಾ ರಾಜ್ಯ ಸರ್ಕಾರ ಡಿಕೆಶಿವಕುಮಾರ್ ಅವರ ವಿರುದ್ಧ ತನಿಖೆಗೆ ನೀಡಿರುವ ಅನುಮತಿ ಕಾನೂನು ಬಾಹಿರವಾಗಿದ್ದು, ಆದೇಶವನ್ನು ವಾಪಸ್ಸು ಪಡೆದಿದೆ ಎಂದರು.
ನಿಗಮಮಂಡಳಿ ಅಧ್ಯಕ್ಷರ ಆಯ್ಕೆ ಅಂತಿಮಗೊಂಡಿಲ್ಲ:
ನಿಗಮಮಂಡಳಿಗಳ ಅಧ್ಯಕ್ಷ ಸ್ಥಾನದ ನೇಮಕಾತಿ ಬಗ್ಗೆ ಗೃಹ ಸಚಿವರು ಅಸಮಧಾನಗೊಂಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಅಧ್ಯಕ್ಷರ ನೇಮಕಾತಿಯಲ್ಲಿ ಯಾರ ಅಭಿಪ್ರಾಯವನ್ನು ಪಡೆಯಲಾಗಿಲ್ಲ. ಆಯ್ಕೆ ಪ್ರಕ್ರಿಯೆ ಇನ್ನೂ ಪ್ರಾಥಮಿಕ ಹಂತದಲ್ಲಿದೆ. ಆಯ್ಕೆ ಪಟ್ಟಿ ಇನ್ನೂ ಅಂತಿಮವಾಗಿಲ್ಲದಿರುವುದರಿಂದ ಈ ಬಗ್ಗೆ ಪ್ರತಿಕ್ರಿಯೆ ನೀಡುವುದು ಸರಿಯಲ್ಲ ಎಂದರು.
ಗುಣಮಟ್ಟದ ಹಾಲು ಪೂರೈಕೆಯಾಗುತ್ತಿದೆ:
ಶಾಲೆಗಳಿಗೆ ಗುಣಮಟ್ಟದ ಹಾಲಿನ ಪೂರೈಕೆಯಾಗುತ್ತಿಲ್ಲ ಎಂದು ಆರೋಪದ ಹಿನ್ನಲೆಯಲ್ಲಿ ಉತ್ತರಿಸುತ್ತಾ, ಸರ್ಕಾರ ಕೆಎಂಎಫ್ ನ ನಂದಿನಿ ಗುಣಮಟ್ಟದ ಹಾಲನ್ನು ಪೂರೈಸುತ್ತಿದೆ ಎಂದರು.
ತೆಲಂಗಾಣದಲ್ಲಿ ಕರ್ನಾಟಕದ ಸಾಧನೆ ಬಗ್ಗೆ ಮಾಡಿದ ಪ್ರಚಾರದ ಬಗ್ಗೆ ಕೇಂದ್ರ ಚುನಾವಣಾ ಆಯೋಗ ಆಕ್ಷೇಪಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದ ಸಾಧನೆಗಳ ಪ್ರಚಾರಕ್ಕೆ ಕೇಂದ್ರ ಚುನಾವಣಾ ಆಯೋಗ ಆಕ್ಷೇಪ ವ್ಯಕ್ತಪಡಿಸಿದ್ದು, ಪ್ರಚಾರವನ್ನು ಕೈಬಿಡಲಾಗಿದೆ ಎಂದರು.