ಮನೆ ರಾಜ್ಯ ಫ.ಗು. ಹಳಕಟ್ಟಿ ಪರಿಶ್ರಮ, ಕೊಡುಗೆಯನ್ನು ಜಗತ್ತಿಗೆ ಮುಟ್ಟಿಸಬೇಕು: ಡಾ.ವಿಜಯಕುಮಾರಿ ಎಸ್. ಕರಿಕಲ್

ಫ.ಗು. ಹಳಕಟ್ಟಿ ಪರಿಶ್ರಮ, ಕೊಡುಗೆಯನ್ನು ಜಗತ್ತಿಗೆ ಮುಟ್ಟಿಸಬೇಕು: ಡಾ.ವಿಜಯಕುಮಾರಿ ಎಸ್. ಕರಿಕಲ್

0

ಮೈಸೂರು(Mysuru): ಫ.ಗು. ಹಳಕಟ್ಟಿ ಅವರ ಪರಿಶ್ರಮ ಮತ್ತು ಕೊಡುಗೆಯನ್ನು ಜಗತ್ತಿಗೆ ಮುಟ್ಟಿಸುವ ಕೆಲಸ ನಡೆಯಬೇಕು ಎಂದು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕಿ ಡಾ.ವಿಜಯಕುಮಾರಿ ಎಸ್. ಕರಿಕಲ್ ಹೇಳಿದರು.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ (ಡಾ.ಫ.ಗು. ಹಳಕಟ್ಟಿ ಜನ್ಮದಿನ)ಯಲ್ಲಿ ಮಾತನಾಡಿದ ಅವರು, ಅವರು ಮನೆ–ಆಸ್ತಿಯನ್ನು ಮಾರಿ ವಚನ ಸಾಹಿತ್ಯದ ಸಂರಕ್ಷಣೆ ತೊಡಗಿಸಿಕೊಂಡಿದ್ದರು ಎಂದು ಹೇಳಿದರು.

ವಚನ ಸಾಹಿತ್ಯ ಸಂರಕ್ಷಣೆಗೆ ಹಳಕಟ್ಟಿ ಅವರ ಕೊಡುಗೆ ದೊಡ್ಡದು. ಅವರು ಹಾಗೂ ವಚನ ಸಾಹಿತ್ಯ ಕುರಿತು ದೊಡ್ಡ ಮಟ್ಟದಲ್ಲಿ ಪ್ರಚಾರ ಸಿಗಬೇಕು. ಇದಕ್ಕೆ ಅಗತ್ಯವಿರುವ ಕ್ರಮವನ್ನು ಮತ್ತು ಅನುದಾನವನ್ನು ಸರ್ಕಾರ ಒದಗಿಸಬೇಕು. ಈ ನಿಟ್ಟಿನಲ್ಲಿ ಸರ್ಕಾರವು ಇದೇ ಮೊದಲ ಬಾರಿಗೆ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ ಎಂದರು.

ನಮ್ಮ ಭಾಗದಲ್ಲಿ ಬೈಬಲ್ ರೀತಿ ಏನು ಇಲ್ಲವೇ ಎಂದು ಚಿಂತಿಸಿ, ವಚನ ಸಾಹಿತ್ಯ ಶೋಧನೆಯಲ್ಲಿ ತೊಡಗಿಸಿಕೊಂಡಿದ್ದರು. ವಚನ ಸಾಹಿತ್ಯ ಕುರಿತು ಸಾಕಷ್ಟು ಸಂಶೋಧನೆ ನಡೆದಿದೆ. ಹಳಕಟ್ಟಿ ಅವರು ವಚನಕಾರರ ಅನೇಕ ಹಸ್ತಪ್ರತಿ ಸಂಗ್ರಹಿಸಿದರು. ಹಳ್ಳಿ ಹಳ್ಳಿಗೆ ಹೋಗಿ ಹಸ್ತಪ್ರತಿ ಸಂಗ್ರಹಿಸುತ್ತಾ, ಹಲವು ವಚನಕಾರರ ವಚನಗಳ ಪ್ರಕಟಣೆ ಕ್ರಮ ಕೈಗೊಂಡರು. ಮನೆ ಮಾರಿ, ಪ್ರಕಟಣೆಗೆ ಬೇಕಾದ ಸಲಕರಣೆಗಳನ್ನು ಖರೀದಿಸಿದ್ದರು. ವಚನಕಾರರ ವಚನಗಳ 46 ಕೃತಿಗಳನ್ನು ಪ್ರಕಟಿಸಿದ್ದಾರೆ ಎಂದು ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನ ಸ್ವಾಮಿ, ಸಹಾಯಕ ನಿರ್ದೇಶಕ ಡಾ.ಎಂ.ಡಿ. ಸುದರ್ಶನ್ ಪಾಲ್ಗೊಂಡಿದ್ದರು.

ಹಿಂದಿನ ಲೇಖನಹೆಣ್ಣು ಮಕ್ಕಳೊಂದಿಗೆ ಅಸಭ್ಯ ವರ್ತನೆ: ಕೆಲಸದಿಂದ ಶಿಕ್ಷಕ ವಜಾ
ಮುಂದಿನ ಲೇಖನಚಾಮರಾಜನಗರ : ಜಮೀನಿನಲ್ಲಿದ್ದ 14 ಅಡಿ ಉದ್ದದ ಹೆಬ್ಬಾವು ಸೆರೆ