ಕೋಲ್ಕತ್ತಾ : ಬಿಜೆಪಿ ನಾಯಕ ಸುವೇಂದು ಅಧಿಕಾರಿಯ ಆಪ್ತ ಸಹಾಯಕ ಚಂದ್ರನಾಥ ರಥ ಅವರನ್ನು ಮೇ 6ರ ರಾತ್ರಿ ಪಶ್ಚಿಮ ಬಂಗಾಳದ ಮಧ್ಯಮಗ್ರಾಮದಲ್ಲಿ ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ. ಆರೋಪಿಗಳು ಸಿನಿಮಾ ಶೈಲಿಯಲ್ಲಿ ಸಂಚು ರೂಪಿಸಿ ಕೃತ್ಯ ಎಸಗಿದ್ದಾರೆ. ಹತ್ಯೆಗೆ ಫೇಕ್ ನಂಬರ್ ಪ್ಲೇಟ್ ಹೊಂದಿದ್ದ ಕಾರು ಬಳಸಿರುವ ಆರೋಪಿಗಳು, ಕಾರಿನ ಚಾಸಿಸ್ ನಂಬರ್ ಸಹ ಬದಲಿಸಿದ್ದಾರೆ.
ಮೊದಲು ಕಾರಿನಲ್ಲಿ ಬಂದ ದುಷ್ಕರ್ಮಿಗಳ ತಂಡ ಚಂದ್ರನಾಥ ರಥ ಅವರ ಕಾರನ್ನು ಮಧ್ಯಮಗ್ರಾಮದ ಡೋಲ್ತಾಲಾ ಬಳಿ ಹಿಂಬಾಲಿಸಿ, ಅಡ್ಡಗಟ್ಟಿದೆ. ಈ ಸಮಯದಲ್ಲಿ ಬೈಕ್ನಲ್ಲಿ ಬಂದ ದುಷ್ಕರ್ಮಿಗಳು ಕಾರಿನ ಮೇಲೆ 4 ಬಾರಿ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ. ಕೃತ್ಯ ಎಸಗಿದ ಬಳಿಕ ನಕಲಿ ನಂಬರ್ ಪ್ಲೇಟ್ ಹೊಂದಿದ್ದ ಕಾರಿನಲ್ಲಿದ್ದವರು, ಕಾರನ್ನು ಅಲ್ಲೇ ಬಿಟ್ಟು ಬೈಕ್ನಲ್ಲಿ ಪರಾರಿಯಾಗಿದ್ದಾರೆ.
ಚಂದ್ರನಾಥ ರಥ ಅವರ ಎದೆಯ ಭಾಗಕ್ಕೆ ಎರಡು ಗುಂಡುಗಳು ತಗುಲಿವೆ. ಅವು ಹೃದಯಕ್ಕೆ ಹಾನಿ ಮಾಡಿವೆ. ಒಂದು ಗುಂಡು ಹೊಟ್ಟೆಯ ಭಾಗಕ್ಕೆ ಹೊಕ್ಕಿದೆ. ಅವರನ್ನು ಬದುಕಿಸಲು ಯಾವುದೇ ಅವಕಾಶ ಇರಲಿಲ್ಲ ಎಂದು ವೈದ್ಯರು ಹೇಳಿದ್ದಾರೆ. ದಾಳಿಯ ಸಮಯದಲ್ಲಿ ಅತ್ಯಾಧುನಿಕ ಬಂದೂಕುಗಳನ್ನು ಬಳಸಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ದಾಳಿಕೋರರು ಗ್ಲಾಕ್ 47 ಎಕ್ಸ್ ಪಿಸ್ತೂಲ್ಗಳನ್ನು ಬಳಸಿರಬಹುದು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಾಮಾನ್ಯ ಅಪರಾಧಿಗಳು ಈ ರೀತಿಯ ಆಯುಧವನ್ನು ಬಳಸುವುದಿಲ್ಲ. ವೃತ್ತಿಪರ ಶೂಟರ್ಗಳು ಭಾಗಿಯಾಗಿದ್ದಾರೆಯೇ ಎಂದು ನಾವು ಪರಿಶೀಲಿಸುತ್ತಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಚಂದ್ರನಾಥ ಅವರ ಕಾರು ನನ್ನ ಕಾರನ್ನು ದಾಟುತ್ತಿದ್ದಂತೆ, ಅದು ಇದ್ದಕ್ಕಿದ್ದಂತೆ ಮಧ್ಯದಲ್ಲಿ ನಿಂತಿತು. ಈ ವೇಳೆ ಬೈಕ್ನಲ್ಲಿ ಬಂದ ವ್ಯಕ್ತಿಯೊಬ್ಬ ಕಾರಿನ ಎಡಭಾಗದಲ್ಲಿ ಗುಂಡು ಹಾರಿಸಲು ಪ್ರಾರಂಭಿಸಿದ. ನನಗೆ 2 ಸುತ್ತು ಗುಂಡು ಹಾರಿಸಿದ ಶಬ್ದ ಕೇಳಿಸಿತು.
ಕೃತ್ಯದ ಬಳಿಕ ಅಲ್ಲಿಂದ ಆತ ಪರಾರಿಯಾದ. ದಾಳಿಕೋರ ವೃತ್ತಿಪರನಂತೆ ಕಾಣುತ್ತಿದ್ದ. ಬೈಕ್ಗೆ ನಂಬರ್ ಪ್ಲೇಟ್ಗಳು ಇರಲಿಲ್ಲ. ಈ ಘಟನೆ ರಾತ್ರಿ 10:30 ರಿಂದ ರಾತ್ರಿ 11 ಗಂಟೆಯ ನಡುವೆ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ ಆರಂಭಿಕ ತನಿಖೆಯ ಪ್ರಕಾರ, ನಾಲ್ಕು ಬೈಕ್ಗಳು ಮತ್ತು ಒಂದು ಕಾರನ್ನು ಕೊಲೆ ಮಾಡಲು ದುಷ್ಕರ್ಮಿಗಳು ಬಳಸಿದ್ದಾರೆ. ರಥ ಅವರ ಕಾರಿಗೆ ಅಡ್ಡಲಾಗಿ ಬಂದ ಅನುಮಾನಾಸ್ಪದ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.
ಕಾರಿನ ನಂಬರ್ ಪ್ಲೇಟ್ ನಕಲಿ ಎಂದು ಗೊತ್ತಾಗಿದೆ. ಅಲ್ಲದೇ ಕಾರಿನ ಚಾಸಿಸ್ ಸಂಖ್ಯೆಯನ್ನು ತಿರುಚಿರುವ ಶಂಕೆ ಇದೆ ಎಂದು ಬಂಗಾಳದ ಪೊಲೀಸ್ ಮಹಾನಿರ್ದೇಶಕ ಸಿದ್ಧ್ ನಾಥ್ ಗುಪ್ತಾ ಹೇಳಿದರು. ಅಪರಾಧ ನಡೆದ ಸ್ಥಳದಿಂದ ಖಾಲಿ ಕಾರ್ಟ್ರಿಡ್ಜ್ಗಳು ಮತ್ತು ಸಜೀವ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ದಾಳಿಯ ಹಿಂದಿನ ಉದ್ದೇಶ ಸ್ಪಷ್ಟವಾಗಿಲ್ಲ ಎಂದು ಅವರು ತಿಳಿಸಿದ್ದಾರೆ.
















