ಮನೆ ಕಾನೂನು ವಿವಾಹದ ಸುಳ್ಳು ಭರವಸೆ: ಪುರುಷರ ವಿರುದ್ಧ ಕಾನೂನು ದುರುಪಯೋಗವಾಗದಂತೆ ನೋಡಿಕೊಳ್ಳಬೇಕು ಎಂದ ಮದ್ರಾಸ್ ಹೈಕೋರ್ಟ್

ವಿವಾಹದ ಸುಳ್ಳು ಭರವಸೆ: ಪುರುಷರ ವಿರುದ್ಧ ಕಾನೂನು ದುರುಪಯೋಗವಾಗದಂತೆ ನೋಡಿಕೊಳ್ಳಬೇಕು ಎಂದ ಮದ್ರಾಸ್ ಹೈಕೋರ್ಟ್

0

ಮದುವೆಯಾಗುವುದಾಗಿ ಭರವಸೆ ನೀಡಿ ಅತ್ಯಾಚಾರ ಎಸಗಲಾಗಿದೆ ಎಂಬ ಪ್ರಕರಣಗಳಲ್ಲಿ ಅಮಾಯಕ ಪುರುಷರು ಬಲಿಯಾಗದಂತೆ ನೋಡಿಕೊಳ್ಳುವುದು ನ್ಯಾಯಾಲಯಗಳ ಕರ್ತವ್ಯ ಎಂದು ಮದ್ರಾಸ್ ಹೈಕೋರ್ಟ್ ಹೇಳಿದೆ.

Join Our Whatsapp Group

ಮದುವೆಯಾಗುವ ಸುಳ್ಳು ಭರವಸೆ ಮೇಲೆ ದೈಹಿಕ ಸಂಬಂಧ ಬೆಳೆಸುವ ಪ್ರಕರಣಗಳ ವಿಚಾರಣೆ ನಡೆಸುವಾಗ, ನ್ಯಾಯಾಲಯಗಳು ಮಹಿಳೆಯರ ರಕ್ಷಣೆಗೆ ದುಪ್ಪಟ್ಟು ಬದ್ಧವಾಗಿರಬೇಕಾದರೂ ಮುಗ್ಧ ಪುರುಷರು ಮಹಿಳೆಯರಿಂದ ಬಲಿಯಾಗದಂತೆ ನೋಡಿಕೊಳ್ಳಬೇಕು ಎಂದು ಅದು ವಿವರಿಸಿದೆ.

ಐಪಿಸಿ ಸೆಕ್ಷನ್ 375 (ಅತ್ಯಾಚಾರ), 376 (ಅತ್ಯಾಚಾರಕ್ಕೆ ಶಿಕ್ಷೆ), 90 (ಭಯ ಅಥವಾ ತಪ್ಪು ಕಲ್ಪನೆಯ ಅಡಿಯಲ್ಲಿ ನೀಡಿದ ಸಮ್ಮತಿ) ಅಡಿಯಲ್ಲಿ ಆರೋಪ ಹೊತ್ತಿದ್ದ ತಮಿಳುನಾಡಿನ ರಾಹುಲ್ ಗಾಂಧಿ (ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರಲ್ಲ) ಎಂಬಾತನಿಗೆ ವಿಧಿಸಿದ್ದ ಶಿಕ್ಷೆಯನ್ನು ಜೂನ್ 21ರಂದು ರದ್ದುಗೊಳಿಸಿದ ನ್ಯಾಯಮೂರ್ತಿ ಎಂ. ದಂಡಪಾಣಿ ಅವರು ಈ ವಿಚಾರ ತಿಳಿಸಿದರು.

ವಿವಾಹದ ಸುಳ್ಳು ಭರವಸೆ ನೀಡಿ ರಾಹುಲ್‌ ಅವರು ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂಬ ಸಂತ್ರಸ್ತೆಯ ಸಾಕ್ಷ್ಯ ನಿಜವಲ್ಲ ಎಂದು ನ್ಯಾಯಾಲಯ ಹೇಳಿದೆ.

ಭಾರತದಲ್ಲಿ ಮಹಿಳೆಯರ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿರುವಾಗ, ಸಾಕ್ಷ್ಯಗಳನ್ನು ವಿಶ್ಲೇಷಿಸುವ ಸಂದರ್ಭಗಳಲ್ಲಿ ಜೊಳ್ಳನ್ನು ಬೇರ್ಪಡಿಸುವುದು ನ್ಯಾಯಾಲಯಗಳ ಕರ್ತವ್ಯ ಎಂದು ಅದು ನುಡಿದಿದೆ.

ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ಸಂಪರ್ಕಕ್ಕೆ ಒತ್ತಾಯಿಸಲಾಗಿತ್ತು ಎಂಬುದು ರಾಹುಲ್‌ ಅವರ ವಿರುದ್ಧದ ಪ್ರಕರಣವಾಗಿತ್ತು.  ಆದರೆ ಘಟನೆ ನಡೆಯುವ ಹೊತ್ತಿಗೆ ರಾಹುಲ್‌ ಅದಾಗಲೇ ಮದುವೆಯಾಗಿದ್ದರು ಮತ್ತು ಸಂತ್ರಸ್ತೆಗೆ ಆ ಬಗ್ಗೆ ತಿಳಿದಿತ್ತು. ಆದ್ದರಿಂದ ಮದುವೆಯ ಬಗ್ಗೆ ಆಕೆಯಲ್ಲಿ ತಪ್ಪು ಕಲ್ಪನೆ  ಮೂಡಿಸಲಾಗಿತ್ತು ಎಂದು ಹೇಳಲು ಸಾಧ್ಯವಿಲ್ಲ ಎಂಬುದಾಗಿ ಅದು ವಿವರಿಸಿದೆ.

ಅಲ್ಲದೆ, ತಾನು ಮದುವೆಯಾಗುತ್ತೇನೆ ಎನ್ನುವ ತಪ್ಪು ಕಲ್ಪನೆಯಿಂದ ಮಾತ್ರವೇ ಸಂತ್ರಸ್ತೆಯು ತನ್ನೊಂದಿಗೆ ಸಹಕರಿಸಿದ್ದಾಳೆ ಎಂದು ಅರ್ಜಿದಾರರಿಗೆ ಗೊತ್ತಿತ್ತು ಎನ್ನಲು ಯಾವುದೇ ಸಾಕ್ಷ್ಯ ಇಲ್ಲ ಎನ್ನುವುದನ್ನು ನ್ಯಾಯಾಲಯ ಗಮನಿಸಿತು.

ಹೀಗಾಗಿ ರಾಹುಲ್‌ ಅವರ ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯ ಸಂತ್ರಸ್ತೆ ಲೈಂಗಿಕ ಕ್ರಿಯೆಗೆ ಸಮ್ಮತಿಸಿರುವುದರಿಂದ ಈ ಕಾಯಿದೆ ಐಪಿಸಿಯ ಸೆಕ್ಷನ್ 375ರ ವ್ಯಾಪ್ತಿಗೆ ಬರುತ್ತದೆ ಎನ್ನಲಾಗದು ಎಂದು ತಿಳಿಸಿತು.

ಹಿಂದಿನ ಲೇಖನಬಸ್-ಬೈಕ್ ಢಿಕ್ಕಿ; ನಡ ಗ್ರಾಮದ ಗ್ರಾಮ ಕರಣಿಕರ ಕಚೇರಿ ಸಹಾಯಕ ಸಾವು
ಮುಂದಿನ ಲೇಖನಜನರ ಸಮಸ್ಯೆ ಕೇಳೋದು ಬಿಟ್ಟು ಸಚಿವರ ಮೂಲಕ ಡಿಸಿಎಂ ವಿಚಾರ ಎತ್ತಿಸಿದ್ದೇ ಸಿದ್ದರಾಮಯ್ಯ: ಬಿ ವೈ ವಿಜಯೇಂದ್ರ