ದಕ್ಷಿಣ ಭಾರತದ ಹಿರಿಯ ಚಲನಚಿತ್ರ ನಿರ್ಮಾಪಕ ಆರ್.ಬಿ. ಚೌಧರಿ ಇನ್ನಿಲ್ಲ! ಮಂಗಳವಾರ ರಾಜಸ್ಥಾನದ ಜೂಂತಾ ಗ್ರಾಮದ ಬಳಿ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ಅವರು ಸಾವನ್ನಪ್ಪಿದ್ದಾರೆ. ಅವರಿಗೆ 76 ವರ್ಷ ವಯಸ್ಸಾಗಿತ್ತು ಎನ್ನಲಾಗಿದೆ. ಈ ಆಘಾತಕಾರಿ ಸುದ್ದಿ ಚಲನಚಿತ್ರೋದ್ಯಮದಾದ್ಯಂತ, ಅದರಲ್ಲೂ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ದುಃಖದ ವಾತಾವರಣ ಸೃಷ್ಟಿಸಿದೆ. ಈ ಚಿತ್ರರಂಗದಲ್ಲಿ ಅವರ ಪ್ರಭಾವ ದೊಡ್ಡ ಮಟ್ಟದಲ್ಲಿತ್ತು. ದಶಕಗಳ ಕಥೆ ಹೇಳುವಿಕೆಯನ್ನು ರೂಪಿಸಿತ್ತು. ಚೌಧರಿ ಅವರ ಪಾರ್ಥಿವ ಶರೀರವನ್ನು ಚೆನ್ನೈಗೆ ತರುವ ನಿರೀಕ್ಷೆಯಿದೆ ಎನ್ನಬಹುದು.
ಅಲ್ಲೇ ಅಂತಿಮ ವಿಧಿ-ವಿಧಾನಗಳು ನೆರವೇರಲಿವೆ. ಪೊಲೀಸ್ ಅಧಿಕಾರಿಗಳ ಪ್ರಕಾರ, ರಾಷ್ಟ್ರೀಯ ಹೆದ್ದಾರಿಯಲ್ಲಿ ದನಗಳು ಇದ್ದಕ್ಕಿದ್ದಂತೆ ರಸ್ತೆ ದಾಟಿದಾಗ ಈ ಅಪಘಾತ ಸಂಭವಿಸಿದೆ. “ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಯ ಗೋಡೆಗೆ ಡಿಕ್ಕಿ ಹೊಡೆದಿದೆ. ಅಪಘಾತ ಭೀರಕವಾಗಿದ್ದು, ಆರ್.ಬಿ. ಚೌಧರಿ ಸ್ಥಳದಲ್ಲೇ ಸಾವನ್ನಪ್ಪಿದರು” ಎಂದು ಸಹಾಯಕ ಸಬ್-ಇನ್ಸ್ಪೆಕ್ಟರ್ ಮನೋಹರ್ ಲಾಲ್ ಖೋಜಾ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಕಾರು ಚಾಲಕನಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಲಾಗಿದೆ.
ರತನ್ಲಾಲ್ ಭಾಗ್ಚಂದ್ ಚೌಧರಿಯಾಗಿ ಹುಟ್ಟಿದ ಆರ್.ಬಿ. ಚೌಧರಿ, ಕೇವಲ ನಿರ್ಮಾಪಕರಾಗಿರಲಿಲ್ಲ, ತಮಿಳು ಚಿತ್ರರಂಗದ ಕೆಲ ಅತ್ಯಂತ ನಿರ್ಣಾಯಕ ಚಲನಚಿತ್ರಗಳ ಹಿಂದಿನ ಶಕ್ತಿಯಾಗಿ ಗುರುತಿಸಿಕೊಂಡಿದ್ದರು. ಉಕ್ಕು, ಆಭರಣ ಮತ್ತು ರಫ್ತುಗಳಂತಹ ವ್ಯವಹಾರ ಕ್ಷೇತ್ರಗಳಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಅವರು 1980ರ ದಶಕದ ಉತ್ತರಾರ್ಧದಲ್ಲಿ ಮಲಯಾಳಂ ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿದರು. ತಮಿಳು ಚಿತ್ರ ಪುದು ವಸಂತಂ (1990) ಮೂಲಕ ಪ್ರಗತಿ ಕಂಡರು. ಈ ಸಿನಿಮಾ ವಿಮರ್ಶಾತ್ಮಕ ಮೆಚ್ಚುಗೆ ಮತ್ತು ರಾಜ್ಯ ಪ್ರಶಸ್ತಿಯನ್ನು ಗಳಿಸಿತು. ಆಗ ಅವರು ತಮ್ಮ ಸಿನಿಮಾ ಬ್ಯಾನರ್ ‘ಸೂಪರ್ ಗುಡ್ ಫಿಲ್ಮ್ಸ್’ ಅನ್ನು ಸ್ಥಾಪಿಸಿದರು. ಇದು ವಾಣಿಜ್ಯಿಕವಾಗಿ ಯಶಸ್ವಿ ಮತ್ತು ಭಾವನಾತ್ಮಕವಾಗಿ ತೊಡಗಿಸಿಕೊಳ್ಳುವಂತಹ ಅನೇಕ ಸಿನಿಮಾಗಳನ್ನು ಪ್ರೇಕ್ಷಕರ ಮಡಿಲಿಗೆ ಹಾಕಿತು.
ಇವರು ಸುಮಾರು 4 ದಶಕಗಳ ವೃತ್ತಿಜೀವನದಲ್ಲಿ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಹಲವು ಸಿನಿಮಾಗಳನ್ನು ಅವರು ನಿರ್ಮಿಸಿದರು. ಕೌಟುಂಬಿಕ ಪ್ರೇಕ್ಷಕರನ್ನು ಸಂಪರ್ಕಿಸುವ ಕಥೆಗಳನ್ನು ಬೆಂಬಲಿಸುವಲ್ಲಿ ಮತ್ತು ಹೊಸ ಪ್ರತಿಭೆಗಳನ್ನು ಪರಿಚಯಿಸುವಲ್ಲಿ ಹೆಸರುವಾಸಿಯಾಗಿದ್ದರು. ಬರೋಬ್ಬರಿ 44 ನಿರ್ದೇಶಕರನ್ನು ಲಾಂಚ್ ಮಾಡಿದ್ದಾರೆ. ಅವರಲ್ಲಿ ಹಲವರು ಉದ್ಯಮದಲ್ಲಿ ಪ್ರಮುಖರಾಗಿ ಗುರುತಿಸಿಕೊಂಡಿದ್ದಾರೆ ಎನ್ನಬಹುದು.















