ಮನೆ ಅಪರಾಧ ಪ್ರವೀಣ್ ನೆಟ್ಟಾರು ಹಂತಕರ ಪತ್ತೆಗೆ ಐದು ತಂಡ‌ ರಚನೆ

ಪ್ರವೀಣ್ ನೆಟ್ಟಾರು ಹಂತಕರ ಪತ್ತೆಗೆ ಐದು ತಂಡ‌ ರಚನೆ

0

ಸುಳ್ಯ(Sullya): ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಾರೋಪಿಗಳ ಪತ್ತೆಗೆ ಐದು ವಿಶೇಷ ತಂಡಗಳನ್ನು ರಚಿಸಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೃಷಿಕೇಷ್ ಸೋನಾವಣೆ ತಿಳಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಅವರು, ಆರೋಪಿಗಳ ಬೆನ್ನು ಹತ್ತಿ ಕೇರಳ, ಮಡಿಕೇರಿ, ಹಾಸನಕ್ಕೆ ಪೊಲೀಸರು ಮೂರು ತಂಡಗಳು ತೆರಳಿವೆ ಎಂದು ತಿಳಿಸಿದ್ದಾರೆ.

ಕೊಲೆ ಆರೋಪಿಗಳಿಗಾಗಿ ಕೇರಳ ಗಡಿ ಪ್ರದೇಶ ಹಾಗೂ ಪುತ್ತೂರಿನ ಸುತ್ತಮುತ್ತ ನಾಕಾಬಂದಿ ಹಾಕಿ ವಾಹನಗಳನ್ನು ತಲಾಶ್ ಮಾಡಲಾಗುತ್ತಿದೆ.

ಮಂಗಳವಾರ ರಾತ್ರಿ 9 ಗಂಟೆ ಸುಮಾರಿಗೆ ಕೊಲೆ ನಡೆದಿದ್ದು, ಬೈಕ್ ನಲ್ಲಿ ಬಂದ ತಂಡ ತಲವಾರಿನಿಂದ ಪ್ರವೀಣ್ ಅವರ ತಲೆಗೆ ಹೊಡೆದು ಪರಾರಿ ಆಗಿದೆ. ಗಂಭೀರ ಗಾಯಗೊಂಡ ಅವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಬೆಳ್ಳಾರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರವೀಣ್ ಅವರು ಬೆಳ್ಳಾರೆಯಲ್ಲಿ ಅಕ್ಷಯ ಕೋಳಿ ಅಂಗಡಿಯನ್ನು ನಡೆಸುತ್ತಿದ್ದರು. ಬಜರಂಗದಳವೂ ಸೇರಿದಂತೆ ಸಂಘ ಪರಿವಾರದ ಹಿಂದೂ ಸಂಘಟನೆಗಳಲ್ಲಿ ಸಕ್ರಿಯವಾಗಿದ್ದರು.

ನಿ಼ಷೇಧಾಜ್ಞೆ ಜಾರಿ: ಪ್ರವೀಣ್ ಹತ್ಯೆ ಪ್ರಕರಣದಿಂದಾಗಿ ದಕ್ಷಿಣ ಕನ್ನಡ‌ ಜಿಲ್ಲೆಯ ಸುಳ್ಯ ಹಾಗೂ ಪುತ್ತೂರುಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ತಡೆಯಲು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಅವರು ಪುತ್ತೂರು ಉಪವಿಭಾಗದ ವ್ಯಾಪ್ತಿಯಲ್ಲಿ ಸಿಆರ್‌ಪಿಸಿ ಸೆಕ್ಷನ್ 144 ಅಡಿ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ ಹೊರಡಿಸಿದ್ದಾರೆ.

ಪುತ್ತೂರಿನಲ್ಲಿ ಕಲ್ಲು ತೂರಾಟ: ಬಸ್  ಸಂಚಾರ ಸ್ಥಗಿತ:

ಸರ್ಕಾರಿ ಬಸ್ ಒಂದಕ್ಕೆ ಪುತ್ತೂರಿನ ಬೊಳುವಾರು ಬಳಿ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಇದರಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯ ಈ ಮೂರು ತಾಲ್ಲೂಕುಗಳಲ್ಲಿ ಬಸ್ ಸಂಚಾರ ಸ್ಥಗಿತಗೊಂಡಿದೆ.

ಖಾಸಗಿ ಶಾಲಾ ಕಾಲೇಜಿಗೆ ರಜೆ: ಬಸ್ ಸೌಕರ್ಯ ಇಲ್ಲದೇ ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ ಕಚೇರಿಗಳಿಗೆ ತೆರಳುವವರು ಸಮಸ್ಯೆ ಎದುರಿಸಿತ್ತಿದ್ದಾರೆ. ಪುತ್ತೂರಿನ ವಿವೇಕಾನಂದ‌ ಕಾಲೇಜು ಸೇರಿದಂತೆ ಕೆಲವು ಖಾಸಗಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಸರ್ಕಾರಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿಲ್ಲ.

ಹಿಂದಿನ ಲೇಖನನವದೆಹಲಿ: ಇಂದು ಇಡಿ ವಿಚಾರಣೆಗೆ ಸೋನಿಯಾ ಗಾಂಧಿ ಹಾಜರು
ಮುಂದಿನ ಲೇಖನಆ. 3ರಂದು ಕೇವಲ 1 ರೂ. ಗೆ OnePlus 10T ಸ್ಮಾರ್ಟ್ ಫೋನ್ ನಿಮ್ಮದಾಗಿಸಿಕೊಳ್ಳುವ ಅವಕಾಶ