ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ ತಾಲ್ಲೂಕಿನ ಎರುಗುಂಡಿ ಫಾಲ್ಸ್ ಬಳಿ ಅಪಾಯದ ಘಟನೆಯೊಂದು ನಡೆದಿದೆ. ನೀರಿನ ಪ್ರಮಾಣ ಏರಿಕೆಯಾಗಿರುವ ಈ ಫಾಲ್ಸ್ ಬಳಿ ಸುರಕ್ಷತೆ ಬಗ್ಗೆ ಎಚ್ಚರಿಕೆಯ ಸೂಚನೆಗಳನ್ನು ಕಡೆಗಣಿಸಿ ಫಾಲ್ಸ್ ಮೇಲಕ್ಕೆ ಹತ್ತಿದ್ದ ಐವರು ಯುವಕರು, ಏಕಾಏಕಿ ನೀರು ನುಗ್ಗಿದ ಪರಿಣಾಮ ಬಂಡೆಗಳ ನಡುವೆ ಸಿಲುಕಿದ ಘಟನೆ ವರದಿಯಾಗಿದೆ.
ಘಟನೆಯ ವಿವರಗಳ ಪ್ರಕಾರ, ಪುತ್ತಿಗೆ ಗ್ರಾಮದ ಎರುಗುಂಡಿ ಫಾಲ್ಸ್‌ನಲ್ಲಿ ಪ್ರವಾಸಕ್ಕೆ ಬಂದಿರುವ ಐವರು ಯುವಕರು ತುಂಬಿ ಹರಿಯುತ್ತಿರುವ ಫಾಲ್ಸ್‌ನ ಮೇಲೆ ಹತ್ತಿದ ಸಂದರ್ಭ, ಅಕಸ್ಮಾತಾಗಿ ನೀರಿನ ಪ್ರಮಾಣ ಹೆಚ್ಚಾಗಿ ಬಂಡೆಗಳ ನಡುವೆ ಸಿಕ್ಕಿಹಾಕಿಕೊಂಡಿದ್ದರು. ಅವರಲ್ಲಿ ಕೆಲವರು ನೀರಿನಲ್ಲಿ ಕೊಚ್ಚಿ ಹೋಗುವಂತ ಸ್ಥಿತಿ ಉಂಟಾದಾಗ, ಸ್ಥಳೀಯರು ತಕ್ಷಣ ಕಾರ್ಯಪ್ರವೃತ್ತರಾಗಿದ್ದು, ಹಗ್ಗ ಬಳಸಿ ಐವರನ್ನೂ ಸುರಕ್ಷಿತವಾಗಿ ರಕ್ಷಣೆ ಮಾಡಿದ್ದಾರೆ.
ಈ ಸಂದರ್ಭ ಸ್ಥಳೀಯರ ಸಮಯಪ್ರಜ್ಞೆ ಹಾಗೂ ಧೈರ್ಯದಿಂದ ಬಹುಮೌಲ್ಯವಾದ ಐದು ಜೀವಗಳನ್ನು ಉಳಿಸಲಾಗಿದೆ.
ಘಟನೆಯ ವೇಳೆ ಪ್ರವಾಸಿಗರು ಸ್ಥಳೀಯರ ಎಚ್ಚರಿಕೆಗಳನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. “ಫಾಲ್ಸ್ ತುಂಬಿ ಹರಿಯುತ್ತಿರುವುದರಿಂದ ಹೋಗಬೇಡಿ” ಎಂದು ಸತತವಾಗಿ ಎಚ್ಚರಿಕೆ ನೀಡಿದರೂ, ಪ್ರವಾಸಿಗರು ತಮ್ಮ ಆಸೆ ತಣಿಸಿಕೊಳ್ಳಲು ನಿರ್ಧಾರ ತೆಗೆದುಕೊಂಡು ಮೇಲೆ ಹತ್ತಿದ್ದರು. ಆದರೆ ಈ ನಿರ್ಲಕ್ಷ್ಯ ಅವರ ಜೀವಕ್ಕೆ ಬೆದರಿಕೆಯಾದರೂ, ಸ್ಥಳೀಯರ ಸಮಯೋಚಿತ ಕ್ರಮದಿಂದ ದೊಡ್ಡ ಅಪಾಯ ತಪ್ಪಿದೆ.
ದಕ್ಷಿಣ ಕನ್ನಡ ಸೇರಿದಂತೆ ರಾಜ್ಯದ ಹಲವೆಡೆ ಈಗಾಗಲೇ ಮುಂಗಾರು ಮಳೆ ತೀವ್ರವಾಗಿದ್ದು, ನದಿಗಳು, ಜಲಪಾತಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿವೆ. ಇದೇ ಕಾರಣಕ್ಕೆ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಿಗೆ ಐದು ದಿನಗಳ ರೆಡ್ ಅಲರ್ಟ್ ಘೋಷಿಸಲಾಗಿದೆ. ಹೀಗಾಗಿ ಪ್ರವಾಸಿಗರು ತಾತ್ಸಾರ ಬಿಟ್ಟು, ಸುರಕ್ಷತೆಯ ಬಗ್ಗೆ ಹೆಚ್ಚಿನ ಎಚ್ಚರತೆ ವಹಿಸಬೇಕಿದೆ.















