ಮನೆ ಕಾನೂನು ಕಾರ್ಯದರ್ಶಿಯಾಗಿ ಪಳನಿಸ್ವಾಮಿ ಅಭಾದಿತ; ಮದ್ರಾಸ್ ಹೈಕೋರ್ಟ್ ಆದೇಶ ಎತ್ತಿಹಿಡಿದ ಸುಪ್ರೀಂ

ಕಾರ್ಯದರ್ಶಿಯಾಗಿ ಪಳನಿಸ್ವಾಮಿ ಅಭಾದಿತ; ಮದ್ರಾಸ್ ಹೈಕೋರ್ಟ್ ಆದೇಶ ಎತ್ತಿಹಿಡಿದ ಸುಪ್ರೀಂ

0

ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ) ಹಂಗಾಮಿ ಪ್ರಧಾನ ಕಾರ್ಯದರ್ಶಿಯಾಗಿ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರ ಆಯ್ಕೆ ರದ್ದತಿಯನ್ನು ಬದಿಗೆ ಸರಿಸಿದ್ದ ಮದ್ರಾಸ್ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ಗುರುವಾರ ಎತ್ತಿ ಹಿಡಿದಿದೆ.

 [ತಿರು ಕೆ ಪಳನಿಸ್ವಾಮಿ ಮತ್ತು ಎಂ ಷಣ್ಮುಗಂ ಮತ್ತಿತರರ ನಡುವಣ ಪ್ರಕರಣ].

 ಪರಿಣಾಮ, ಪಳನಿಸ್ವಾಮಿ ಅವರು ಹಂಗಾಮಿ ಪ್ರಧಾನ ಕಾರ್ಯದರ್ಶಿಯಾಗಿ ಮುಂದುವರೆಯಲು ಇದ್ದ ಅಡ್ಡಿ ನಿವಾರಣೆಯಾದಂತಾಗಿದೆ.

“ಹೈಕೋರ್ಟ್ ವಿಭಾಗೀಯ ಪೀಠ 2.9.22ರಲ್ಲಿ ನೀಡಿದ್ದ ಆದೇಶವನ್ನು ಎತ್ತಿಹಿಡಿದಿದ್ದು ಈ ಹಿಂದೆ ನಾವು ನೀಡಿದ್ದ ಮಧ್ಯಂತರ ಆದೇಶವನ್ನು ಶಾಶ್ವತಗೊಳಿಸಿದ್ದೇವೆ. ಏಕಸದಸ್ಯ ಪೀಠ ವಿಚಾರಣೆ ನಡೆಸುತ್ತಿದ್ದ ಪಕ್ಷದ ಮುಂದಿನ ನಿರ್ಣಯಗಳ ವಿಚಾರದ ಕುರಿತು ನಾವು ವ್ಯವಹರಿಸಿಲ್ಲ. ಕಾನೂನು ಪ್ರಕಾರ ಈ ನಿರ್ಣಯಗಳ ಬಗ್ಗೆ ತೀರ್ಮಾನ ಕೈಗೊಳ್ಳಲು ಮುಕ್ತವಾಗಿ ಬಿಟ್ಟಿದ್ದೇವೆ. ಪಕ್ಷಕಾರರನ್ನಾಗಿಸುವಂತೆ ಕೇಳಿದ ಅರ್ಜಿಗಳಿಗೆ ಅನುಮತಿ ನೀಡುವ ಅಗತ್ಯ ನಮಗೆ ಕಾಣುತ್ತಿಲ್ಲ” ಎಂದು ನ್ಯಾಯಮೂರ್ತಿಗಳಾದ ದಿನೇಶ್ ಮಾಹೇಶ್ವರಿ ಮತ್ತು ಸಂಜಯ್ ಕುಮಾರ್ ಅವರಿದ್ದ ಪೀಠ ಹೇಳಿದೆ.

ಎಐಎಡಿಎಂಕೆ ಬೈಲಾಗಳಿಗೆ ತಿದ್ದುಪಡಿ ಮಾಡುವುದನ್ನು ನಿರ್ಬಂಧಿಸಿದ್ದ ಮದ್ರಾಸ್ ಹೈಕೋರ್ಟ್ ಆದೇಶಕ್ಕೆ ತಡೆ ನೀಡಿ ತಾನು ಹೊರಡಿಸಿದ್ದ ಮಧ್ಯಂತರ ಆದೇಶವನ್ನು ಶಾಶ್ವತಗೊಳಿಸಲಾಗುವುದು ಎಂದು ಕೂಡ ನ್ಯಾಯಾಲಯ ಹೇಳಿದೆ. ಕಳೆದ ತಿಂಗಳು ಸುಪ್ರೀಂ ಕೋರ್ಟ್ ಪ್ರಕರಣದ ತೀರ್ಪನ್ನು ಕಾಯ್ದಿರಿಸಿತ್ತು.

ಪಕ್ಷದ ಸಾಮಾನ್ಯ ಸಮಿತಿ ಸಭೆಯಲ್ಲಿ ತಮ್ಮನ್ನು ಉಚ್ಚಾಟಿಸಿ ಪಳನಿ ಸ್ವಾಮಿ ಅವರನ್ನು ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸಿದ್ದ ನಿರ್ಣಯ ಎತ್ತಿಹಿಡಿದಿದ್ದ ಮದ್ರಾಸ್ ಹೈಕೋರ್ಟ್ ವಿಭಾಗೀಯ ಪೀಠದ ತೀರ್ಪನ್ನು ಒ ಪನ್ನೀರಸೆಲ್ವಂ ಬಣ ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಿತ್ತು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎಐಎಡಿಎಂಕೆ ಅನುಭವಿಸಿದ ಸೋಲಿನ ನಂತರ ಪಕ್ಷದ ಪದಾಧಿಕಾರಿಗಳ ಒಂದು ಗುಂಪು ಏಕ ನಾಯಕತ್ವ ಹೊಂದುವ ಸಲುವಾಗಿ ಪಕ್ಷದ ನಿಯಮಾವಳಿಗಳಿಗೆ ತಿದ್ದುಪಡಿ ಮಾಡಲು ಹೊರಟಿತ್ತು.

ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ನಿಧನಾನಂತರ ಎಐಎಡಿಎಂಕೆಯು ದ್ವಿ ನಾಯಕತ್ವ ರಚನೆಯನ್ನು ಹೊಂದಿತ್ತು. ಪಳನಿಸ್ವಾಮಿ ಅವರು ಪಕ್ಷದ ಜಂಟಿ ಸಂಚಾಲಕರಾಗಿದ್ದರೆ, ತಮಿಳುನಾಡು ಮಾಜಿ ಮುಖ್ಯಮಂತ್ರಿ ಒ ಪನ್ನೀರಸೆಲ್ವಂ ಅವರು ಸಂಚಾಲಕರಾಗಿದ್ದರು. ಆದರೆ, ಈ ಹುದ್ದೆಗಳಿಗೆ ತಿಲಾಂಜಲಿ ನೀಡಿ ಈ ಹಿಂದಿನ ಪ್ರಧಾನ ಕಾರ್ಯದರ್ಶಿ ಹುದ್ದೆಯ ರಚನೆಗೆ ಮರಳಲು ಸಾಮಾನ್ಯ ಸಮಿತಿಯ ಸಭೆಯಲ್ಲಿ ಚರ್ಚಿಸಲಾಗಿತ್ತು.

ಆದರೆ, ಬೈಲಾ ತಿದ್ದುಪಡಿಯನ್ನು ನಿರಾಕರಿಸಿದ್ದ ಹೈಕೋರ್ಟ್ನ ಆದೇಶವು ಆ ಮೂಲಕ ಪನ್ನೀರಸೆಲ್ವಂ ಅವರಿಗೆ ವಿಟೋ ಅಧಿಕಾರವನ್ನು ಮರಳಿ ನೀಡಿತ್ತು. ಇದು ಪಕ್ಷದೊಳಗೆ ಬೇಗುದಿಗೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಪಳನಿಸ್ವಾಮಿ ಅವರು ಸುಪ್ರೀಂ ಕೋರ್ಟ್ನಲ್ಲಿ ಮನವಿ ಸಲ್ಲಿಸಿದ್ದರು. ಇದೀಗ ಎಐಎಡಿಎಂಕೆ ಬೈಲಾಗಳಿಗೆ ತಿದ್ದುಪಡಿ ಮಾಡುವುದನ್ನು ನಿರ್ಬಂಧಿಸಿದ್ದ ಮದ್ರಾಸ್ ಹೈಕೋರ್ಟ್ ಆದೇಶಕ್ಕೆ ತಡೆ ನೀಡಿ ತಾನು ಹೊರಡಿಸಿದ್ದ ಮಧ್ಯಂತರ ಆದೇಶವನ್ನು ಶಾಶ್ವತಗೊಳಿಸಲಾಗುವುದು ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ. ಆ ಮೂಲಕ ಬೈಲಾ ತಿದ್ದುಪಡಿಯ ಅವಕಾಶವನ್ನು ಮರಳಿಸಿದೆ.

ಹಿಂದಿನ ಲೇಖನಪಕ್ಷವನ್ನು ಗೆಲ್ಲಿಸಲು ಕಾರ್ಯಕರ್ತರು ಶ್ರಮಿಸಿ: ಪ್ರತಾಪ್ ಸಿಂಹ
ಮುಂದಿನ ಲೇಖನಭಾರತದ ಸಮಾಜ ಬದಲಾಗಿದೆ; ಲೈಂಗಿಕ ಅಪರಾಧಗಳಲ್ಲಿ ತಪ್ಪಾಗಿ ಸಿಲುಕಿಸುವುದು ಹೆಚ್ಚಿದೆ: ಅಲಾಹಾಬಾದ್ ಹೈಕೋರ್ಟ್