ಬೆಂಗಳೂರು: ರಾಜಧಾನಿ ಬೆಂಗಳೂರು ಮೂಲದ ಇಬ್ಬರು ಸಾಹಸ ಪರ್ವತಾರೋಹಿಗಳು 46 ದಿನಗಳ ಸವಾಲಿನ ಸಾಹಸ ಯಾತ್ರೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ, ವಿಶ್ವದ ಅತಿ ಎತ್ತರದ ಶಿಖರ ಮೌಂಟ್ ಎವರೆಸ್ಟ್ ಏರಿ ಐತಿಹಾಸಿಕ ಸಾಧನೆ ಮಾಡಿದ್ದಾರೆ.ಉದ್ಯಮಿ ಸಂತೋಷ್ ದೇವರಾಜಪ್ಪ (40) ಹಾಗೂ ನೇತ್ರ ತಜ್ಞೆ ಡಾ. ಚಿನ್ಮಯೀ ತ್ರಿಶೂಲಮೂರ್ತಿ (45) ಮೇ 21ರಂದು ಮೌಂಟ್ ಎವರೆಸ್ಟ್ ಶಿಖರ ತಲುಪುವಲ್ಲಿ ಯಶಸ್ವಿಯಾಗಿದ್ದಾರೆ.
ಕರ್ನಾಟಕ ಮೌಂಟಿನಿಯರಿಂಗ್ ಅಸೋಸಿಯೇಷನ್ (KMA) ಸ್ಥಾಪನೆಯ 60ನೇ ವರ್ಷದ ಅಂಗವಾಗಿ ಈ ವಿಶೇಷ ಪರ್ವತಾರೋಹಣ ಯಾತ್ರೆ ಆಯೋಜಿಸಲಾಗಿತ್ತು.8,848.86 ಮೀಟರ್ (29,031 ಅಡಿ) ಎತ್ತರ ಹೊಂದಿರುವ ಮೌಂಟ್ ಎವರೆಸ್ಟ್ ಶಿಖರವನ್ನು ನೇಪಾಳದ ದಕ್ಷಿಣ-ಪೂರ್ವ ಭಾಗದ ‘ಸೌತ್ ಕೋಲ್’ ಮಾರ್ಗದ ಮೂಲಕ ಮಧ್ಯಾಹ್ನ 12.10ರ ಸುಮಾರಿಗೆ ಇಬ್ಬರೂ ತಲುಪಿದ್ದಾರೆ ಎಂದು ಸಂಘದ ಮೂಲಗಳು ಮಾಹಿತಿ ನೀಡಿವೆ.
ಪರ್ವತಾರೋಹಿಗಳು ಏಪ್ರಿಲ್ 4ರಂದು ಬೆಂಗಳೂರಿನಿಂದ ಪ್ರಯಾಣ ಆರಂಭಿಸಿ ಕಠ್ಮಂಡುವಿಗೆ ತೆರಳಿದ್ದರು. ಎವರೆಸ್ಟ್ ಏರಿಕೆಗೆ ಮುನ್ನ ಅಗತ್ಯ ದೈಹಿಕ ಸಾಮರ್ಥ್ಯ ಮತ್ತು ಎತ್ತರದ ಪ್ರದೇಶಕ್ಕೆ ಹೊಂದಿಕೊಳ್ಳುವ ತರಬೇತಿಯ ಭಾಗವಾಗಿ ಏಪ್ರಿಲ್ 22ರಂದು 20,070 ಅಡಿ ಎತ್ತರದ ಲೋಬುಚೆ ಈಸ್ಟ್ ಶಿಖರವನ್ನೂ ಯಶಸ್ವಿಯಾಗಿ ಏರಿದ್ದರು.
ಈ ಸಾಹಸ ಯಾತ್ರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾರ್ಚ್ 9ರಂದು ವಿಧಾನಸೌಧದಲ್ಲಿ ಅಧಿಕೃತ ಚಾಲನೆ ನೀಡಿದ್ದರು. ಬಳಿಕ ಮಾರ್ಚ್ 22ರಂದು ಬೆಂಗಳೂರಿನ ಯುವನಿಕಾದಲ್ಲಿ ಸಾಹಸಾಸಕ್ತರು, ಸ್ನೇಹಿತರು ಮತ್ತು ಹಿತೈಷಿಗಳ ಸಮ್ಮುಖದಲ್ಲಿ ವಿಶೇಷ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು.
46 ದಿನಗಳ ಕಾಲ ನಡೆದ ಈ ಕಠಿಣ ಯಾತ್ರೆಯಲ್ಲಿ ತೀವ್ರ ಹವಾಮಾನ, ಕಡಿಮೆ ಆಮ್ಲಜನಕದ ಮಟ್ಟ, ಎತ್ತರ ಪ್ರದೇಶದ ಸವಾಲುಗಳು ಹಾಗೂ ದುರ್ಗಮ ಭೂಪ್ರದೇಶವನ್ನು ಎದುರಿಸಿ ಇಬ್ಬರೂ ಯಶಸ್ವಿಯಾಗಿ ಎವರೆಸ್ಟ್ ಶಿಖರ ತಲುಪಿದ್ದಾರೆ.
ಕರ್ನಾಟಕ ಮೌಂಟಿನಿಯರಿಂಗ್ ಅಸೋಸಿಯೇಷನ್ನ ಎಸ್. ಶ್ರೀವತ್ಸ ಮಾತನಾಡಿ, “KMAಗೆ 60 ವರ್ಷ ಪೂರೈಸಿದ ಸಂದರ್ಭದಲ್ಲಿ ಈ ಸಾಧನೆ ಮತ್ತಷ್ಟು ವಿಶೇಷವಾಗಿದೆ. ಕಳೆದ ಹಲವು ವರ್ಷಗಳಿಂದ ಸಂಘವು 20 ಸಾವಿರಕ್ಕೂ ಹೆಚ್ಚು ಸದಸ್ಯರಲ್ಲಿ ಪರ್ವತಾರೋಹಣ ಹಾಗೂ ಸಾಹಸ ಕ್ರೀಡೆಗಳ ಬಗ್ಗೆ ಆಸಕ್ತಿ ಮೂಡಿಸುವ ಕಾರ್ಯ ಮಾಡುತ್ತಿದೆ” ಎಂದು ಹೇಳಿದರು.ಇದೇ ವೇಳೆ, ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ತರಬೇತಿ ಮತ್ತು ಸಾಹಸ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಿರುವ ಸರ್ಕಾರಕ್ಕೂ ಅವರು ಧನ್ಯವಾದ ತಿಳಿಸಿದ್ದಾರೆ.


















