ಚಿತ್ರದುರ್ಗ(Chitradurga): ಲೈಂಗಿಕ ಕಿರುಕುಳ ಆರೋಪದಲ್ಲಿ ಬಂಧಿತರಾಗಿರುವ ಮುರುಘಾ ಮಠದ ಶಿವಮೂರ್ತಿ ಮುರುಘಾಶ್ರೀ ಕುರಿತು ಮಾಜಿ ಸಚಿವೆ ರಾಣಿ ಸತೀಶ್ ಹಾಗೂ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಮಹಡಿ ಶಿವಮೂರ್ತಿ ನಡುವೆ ನಡೆದ ಫೋನ್ ಸಂಭಾಷಣೆಯ ಆಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸುಮಾರು 12 ನಿಮಿಷದ ಮಾತುಕತೆಯಲ್ಲಿ ಹಲವು ವಿಚಾರಗಳು ಚರ್ಚೆಗೆ ಬಂದಿವೆ. ಶಿವಮೂರ್ತಿ ಮುರುಘಾ ಶರಣರ ವಿರುದ್ಧದ ಆಕ್ರೋಶ, ಯಡಿಯೂರಪ್ಪ ಸೇರಿದಂತೆ ಇತರ ರಾಜಕಾರಣಿಗಳು ಮಠದಲ್ಲಿಟ್ಟ ಹಣದ ಬಗ್ಗೆಯೂ ಪ್ರಸ್ತಾಪವಾಗಿದೆ.
ಮುರುಘಾಶ್ರೀ ಪ್ರಕರಣ ಅಸಹ್ಯ ಮೂಡಿಸಿದೆ. ಜೈಲಿನಲ್ಲಿದ್ದರೂ ಮಠ ಇನ್ನೂ ಅವರ ಹಿಡಿತದಲ್ಲಿದೆ. ಭಯ, ಲಜ್ಜೆ ಇಲ್ಲದ ವರ್ತನೆ ಇದು. ವೀರಶೈವರಿಂದ ಮಠ ಕೈತಪ್ಪುವ ಆತಂಕ ಎದುರಾಗಿದೆ. ವೀರಶೈವ ಲಿಂಗಾಯತ ಮಹಾಸಭಾ ಈ ಸಂಬಂಧ ಧ್ವನಿ ಎತ್ತಬೇಕು.ಮಠಕ್ಕೆ ಸರ್ಕಾರ ಆಡಳಿತಾಧಿಕಾರಿ ನೇಮಕ ಮಾಡಬೇಕಿದೆ ಎಂದು ರಾಣಿ ಸತೀಶ್ ಅಭಿಪ್ರಾಯಪಟ್ಟಿದ್ದಾರೆ.
ಈ ಆಡಿಯೊ ಸಂಭಾಷಣೆಯು ರಾಣಿ ಸತೀಶ್ ಹಾಗೂ ತಮ್ಮ ನಡುವೆ ನಡೆದಿರುವುದೇ ಆಗಿದೆ ಎಂದು ಮಹಡಿ ಶಿವಮೂರ್ತಿ ಖಚಿತಪಡಿಸಿದ್ದಾರೆ.