ಸೋಷಿಯಲ್ ಮೀಡಿಯಾ ಪ್ಲ್ಯಾಟ್ಫಾರ್ಮ್ಗಳಲ್ಲೀಗ ಐಶ್ವರ್ಯಾ ರೈ ಬಚ್ಚನ್ ಅವರ ಅದ್ಭುತ ನೋಟದ್ದೇ ಸದ್ದು. ‘ಕಾನ್ ಕ್ವೀನ್’ ಎಂದೇ ಕರೆಸಿಕೊಳ್ಳುವ ಮಾಜಿ ವಿಶ್ವಸುಂದರಿ ಫೈನಲಿ ವಿಶ್ವ ಪ್ರತಿಷ್ಠಿತ ಚಲನಚಿತ್ರೋತ್ಸವದಲ್ಲಿ ತಮ್ಮ ಅತಿಲೋಕ ಸೌಂದರ್ಯ ಪ್ರದರ್ಶಿಸಿ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಈ ನೋಟಕ್ಕಾಗಿ ಅಭಿಮಾನಿಗಳು ಬಹಳ ಕಾತರರಾಗಿದ್ದರು. ಭಾರತೀಯ ಚಿತ್ರರಂಗದ ದಿಗ್ಗಜ ನಟಿ, ಬಾಲಿವುಡ್ ದಿವಾ ಐಶ್ವರ್ಯಾ ರೈ ಶುಕ್ರವಾರ ಸಂಜೆ ಪ್ರತಿಷ್ಠಿತ ಜಾಗತಿಕ ಚಲನಚಿತ್ರೋತ್ಸವದ ರೆಡ್ ಕಾರ್ಪೆಟ್ ಮೇಲೆ ತಮ್ಮ ಅದ್ಭುತ ಉಪಸ್ಥಿತಿಯನ್ನು ಅಚ್ಚೊತ್ತಿದರು. ಅವರ ಲುಕ್ ನಿಜಕ್ಕೂ ಸ್ಟನ್ನಿಂಗ್ ಆಗಿತ್ತು. ಕಾದದ್ದಕ್ಕೂ ಸಾರ್ಥಕವಾಯ್ತು ಎಂಬ ಅಭಿಪ್ರಾಯಗಳು ಆನ್ಲೈನ್ನಲ್ಲಿ ವ್ಯಕ್ತವಾಗಿವೆ. ಚಲನಚಿತ್ರೋತ್ಸವದ ಕೊನೆಯ ಹಂತದಲ್ಲಿ ಐಶ್ವರ್ಯಾ ಅವರ ಉಪಸ್ಥಿತಿ ಕಾರ್ಯಕ್ರಮದ ಮೆರುಗು ಹೆಚ್ಚಿಸಿತ್ತು. ಚಲನಚಿತ್ರೋತ್ಸವದಲ್ಲಿ ಲೋರಿಯಲ್ ಬ್ರ್ಯಾಂಡ್ ಪ್ರತಿನಿಧಿಸಿದ ಚೆಲುವೆ, ಅಮಿತ್ ಅಗರ್ವಾಲ್ ಅವರ ಕಸ್ಟಮ್ ಸ್ಕಲ್ಪ್ಚರಲ್ ಗೌನ್ ಧರಿಸಿದ್ದರು. ಚಲನೆಯಲ್ಲಿ ಬೆಳಕು ಎಂಬ ಕಲ್ಪನೆಯೊಂದಿಗೆ ಈ ವಸ್ತ್ರವನ್ನು ವಿನ್ಯಾಸಗೊಳಿಸಲಾಗಿತ್ತು ಎನ್ನಲಾಗುತ್ತಿದೆ.
ಈ ವಿನ್ಯಾಸ ಬೆಳಕನ್ನು ಕೇವಲ ಪ್ರಕಾಶವಾಗಿ ಮಾತ್ರವಲ್ಲದೇ ಶಕ್ತಿ, ಚಲನೆ ಮತ್ತು ಬಲವನ್ನೂ ಪರಿಶೋಧಿಸುತ್ತದೆ. ಈ ಗೌನ್ ತಯಾರಿಗೆ 1,500 ಗಂಟೆಗಳಿಗೂ ಹೆಚ್ಚು ಕಾಲ ಸಮಯ ಹಿಡಿದಿದೆ. ಸಂಪೂರ್ಣ ಕೈಯಿಂದಲೇ ತಯಾರಿಸಲಾಗಿದೆ. ಗೌನ್‌ನಾದ್ಯಂತ ಸಾವಿರಾರು ಕ್ರಿಸ್ಟಲ್ನಂತಹ ಹರಳುಗಳನ್ನು ಕಾಣಬಹುದು. ಇದು ದೇಹದಾದ್ಯಂತ ಚಲಿಸುವ ಪ್ರಕಾಶಮಾನ ಮಾರ್ಗಗಳಂತೆ ತೋರಿದೆ. ಚಲನೆ ಮತ್ತು ಬೆಳಕಿನೊಂದಿಗೆ ಕ್ರಿಯಾತ್ಮಕವಾಗಿ ಸಂವಹನ ನಡೆಸಲು ವಿನ್ಯಾಸಗೊಳಿಸಲಾದ ಈ ಕಸೂತಿಯು, ಧರಿಸುವವರು ಚಲಿಸುವಾಗ ನಿರಂತರವಾಗಿ ಹೊಳೆಯುತ್ತದೆ ಮತ್ತು ರೂಪಾಂತರಗೊಳ್ಳುತ್ತದೆ. ಇದು ಉಡುಪಿಗೆ ಬಹುತೇಕ ಚಲನಶೀಲ ಗುಣವನ್ನು ನೀಡುತ್ತದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಭುಜಗಳ ಬಳಿಯ ರೆಕ್ಕೆಯಂತಹ ಡಿನೈನ್, ಔಟ್ಫಿಟ್ ಅನ್ನು ಮತ್ತಷ್ಟು ಅಂದಗೊಳಿಸಿದೆ. ನೀಲಿ ಬಣ್ಣದಲ್ಲಿ ತಯಾರಿಸಲಾದ ಉಡುಗೆ ಅಪ್ಸರೆ ಐಶ್ವರ್ಯಾ ಮೆರುಗನ್ನು ಹೆಚ್ಚಿಸಿತ್ತು. ಫ್ರೆಂಚ್ ರಿವೇರಿಯಾದಲ್ಲಿ ಗ್ಲೋಬಲ್ ಲೆವೆಲ್ನ ಕ್ಯಾಮರಾಮ್ಯಾನ್ಗಳಿಗೆ ಐಶ್ವರ್ಯಾ ಸಂತೋಷದಿಂದ ಪೋಸ್ ನೀಡಿದ್ರು. ಎಲ್ಲರ ಹೃದಯ ತುಂಬಿ ಬಂತು. ನಟಿಯ ಒಂದೊಂದು ನೋಟವೂ ಕ್ಯಾಮರಾದಲ್ಲಿ ಸೆರೆಯಾಗಿದೆ. ಐಶ್ವರ್ಯಾ ಐಶ್ವರ್ಯಾ ಎಂದು ಕೂಗಿರುವ ವಿಡಿಯೋಗಳು ವೈರಲ್ ಆಗಿದ್ದು, ತಾರೆಯ ಜನಪ್ರಿಯತೆಯನ್ನು ಸಾಬೀತುಪಡಿಸಿವೆ ಎನ್ನಲಾಗುತ್ತಿದೆ.
















