ಮನೆ ಅಪರಾಧ ಮದುವೆಯಾಗುವುದಾಗಿ ನಂಬಿಸಿ ಮಹಿಳೆಗೆ ವಂಚನೆ: ಮುಖ್ಯಪೇದೆ ಬಂಧನ

ಮದುವೆಯಾಗುವುದಾಗಿ ನಂಬಿಸಿ ಮಹಿಳೆಗೆ ವಂಚನೆ: ಮುಖ್ಯಪೇದೆ ಬಂಧನ

0

ನಂಜನಗೂಡುಪೊಲೀಸ್‌ ಮುಖ್ಯ ಪೇದೆ ತನ್ನನ್ನು ಮದುವೆಯಾಗುವುದಾಗಿ ನಂಬಿಸಿ ನನ್ನ ಜೊತೆ ದೈಹಿಕ ಸಂಪರ್ಕ ಬೆಳೆಸಿ ವಂಚನೆ ಮಾಡಿದ್ದಾರೆ ಎಂದು ಮಹಿಳೆಯೊಬ್ಬರು ದೂರು ದಾಖಲಿಸಿದ್ದು, ಈ ಸಂಬಂಧ ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಠಾಣೆ ಮುಖ್ಯಪೇದೆ ಕೃಷ್ಣ ಅವರನ್ನು ಬಂಧಿಸಲಾಗಿದೆ.

ಘಟನೆ ವಿವರ:

ಈ ಹಿಂದೆ ಬನ್ನೂರು ಪೊಲೀಸ್‌ ಠಾಣೆಯಲ್ಲಿ ಕಾನ್ಸ್‌ಟೇಬಲ್‌ ಆಗಿದ್ದ ಕೃಷ್ಣ ಹಾಗೂ ತಲಕಾಡು ಮೂಲದ ಗೌರಮ್ಮ ನಡುವೆ ಪ್ರೇಮಾಂಕುರವಾಗಿತ್ತು. ಆಕೆ ತನ್ನ ಮೊದಲ ಪತಿಗೆ ವಿಚ್ಛೇದನ ನೀಡಿ, ಕೃಷ್ಣನ ಜೊತೆ ಮೈಸೂರಿನ ಗೋಕುಲಂ ನಗರದಲ್ಲಿ ಮನೆ ಮಾಡಿ ವಾಸವಾಗಿದ್ದರು ಎನ್ನಲಾಗಿದೆ.

ಒಂದೇ ಮನೆಯಲ್ಲಿ ನಾಲ್ಕೈದು ವರ್ಷ ವಾಸವಿದ್ದ ಕೃಷ್ಣ ಹಾಗೂ ಗೌರಮ್ಮ ನಡುವೆ ಭಿನ್ನಾಭಿಪ್ರಾಯ ಆರಂಭವಾಗಿದ್ದು, ಇತ್ತೀಚಿನ ದಿನಗಳಲ್ಲಿ ಆತ ಈಕೆಯಿಂದ ದೂರವಿದ್ದನು ಎನ್ನಲಾಗಿದೆ.

ಈ ಬಗ್ಗೆ ಅನುಮಾನಗೊಂಡ ಗೌರಮ್ಮ ಈತನ ಕುರಿತು ವಿಚಾರಿಸಿದಾಗ, ಕೃಷ್ಣನಿಗೆ ಮೊದಲೇ ಮದುವೆಯಾಗಿದ್ದು, ಈತ ಇದನ್ನು ತನ್ನಿಂದ ಮುಚ್ಚಿಟ್ಟಿದ್ದನು ಎಂಬುದು ಗೊತ್ತಾಗಿದೆ. ಇದರಿಂದ ಕುಪಿತಗೊಂಡ ಗೌರಮ್ಮ, ನಂಜನಗೂಡು ತಾಲೂಕಿನ ಬಳ್ಳೂರು ಹುಂಡಿಯ ಜಮಿನೀನಲ್ಲಿದ್ದ ಕೃಷ್ಣನನ್ನು ಹುಡುಕಿಕೊಂಡು ಹೋದ್ದಾರೆ. “ತನ್ನಿಂದ ದೂರವಾಗುತ್ತಿರುವ’ ಕುರಿತು ಪ್ರಶ್ನಿಸಿದಾಗ ಕೃಷ್ಣ ಹಾಗೂ ಅವರ ಪುತ್ರ ಕಿರಣ ಇಬ್ಬರೂ ಸೇರಿ ಆಕೆಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸುವ ಜೊತೆಗೆ ದೈಹಿಕವಾಗಿ ಹಲ್ಲೆ ನಡೆಸಿದರು ಎನ್ನಲಾಗಿದೆ.

ಆಕೆಯ ಕಿರುಚಾಟ ಕೇಳಿದ ಬಳ್ಳೂರು ಹುಂಡಿಯ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿದಾಗ, ಕೃಷ್ಣ ಹಾಗೂ ಕಿರಣ್‌ ಅಲ್ಲಿಂದ ಪರಾರಿಯಾಗಿದ್ದಾರೆ. ಗ್ರಾಮಸ್ಥರ ಸಹಾಯ ಪಡೆದು ಅಲ್ಲಿಂದ ಹುಲ್ಲಹಳ್ಳಿ ಠಾಣೆಗೆ ಆಗಮಿಸಿದ ಗೌರಮ್ಮ, ನಂಬಿಕೆ ದ್ರೋಹ ಹಾಗೂ ನಿಂದನೆ, ದೈಹಿಕ ಹಲ್ಲೆ ಕುರಿತು ಕೃಷ್ಣನ ಮೇಲೆ ದೂರು ದಾಖಲಿಸಿದ್ದಾರೆ.

ಈ ವಿಷಯವನ್ನು ಠಾಣಾಧಿಕಾರಿ ರಾಘವೇಂದ್ರ ಅವರು ಮೇಲಧಿಕಾರಿಗಳ ಗಮನಕ್ಕೆ ತಂದು, ಕೃಷ್ಣನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.