ಬಳ್ಳಾರಿ : ಅಂತಾರಾಷ್ಟ್ರೀಯ ಮಟ್ಡದಲ್ಲಿ ಖ್ಯಾತಿ ಪಡೆದಿರುವ ಬಳ್ಳಾರಿ ಜೀನ್ಸ್ ಉದ್ಯಮಕ್ಕೆ ಮತ್ತಷ್ಟು ಉತ್ತೇಜನ ಕೊಡಲು ಸರ್ಕಾರ ಮುಂದಾಗಿದೆ. ಈ ಮೂಲಕ ಬಳ್ಳಾರಿಯಲ್ಲಿ ಜೀನ್ಸ್ ಪಾರ್ಕ್ ನಿರ್ಮಾಣ ಕಾರ್ಯ ಶುರುವಾಗಿದೆ. ಬಳ್ಳಾರಿ ನಗರಕ್ಕೆ ಹೊಂದಿಕೊಂಡಿರುವ ಸಂಜೀವರಾಯನ ಕೋಟೆ ಬಳಿ ಜೀನ್ಸ್ ಪಾರ್ಕ್ ಸ್ಥಾಪಿಸುವ ಕಾರ್ಯ ವೇಗ ಪಡೆದಿದೆ. ಇದಕ್ಕೆ ಪೂರಕವಾಗಿ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದ್ದು, ಕಾರ್ಯಾದೇಶ ಕೂಡ ಸಿಕ್ಕಿದೆ. ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಗೆ 154 ಎಕರೆ ಜಮೀನು ಸ್ವಾಧೀನಗೊಂಡಿದ್ದು, ಜಮೀನು ನೀಡಿದ ರೈತರಿಗೆ ಎಕರೆಗೆ 40 ಲಕ್ಷ ರೂ.ನಂತೆ ಪರಿಹಾರ ಹಣ ಕೂಡ ಪಾವತಿ ಮಾಡಿದೆ.
ಜೀನ್ಸ್ ಪಾರ್ಕ್‌ನಲ್ಲಿ 500ಕ್ಕೂ ಹೆಚ್ಚು ಘಟಕಗಳಿಗೆ ನೆಲೆ ಒದಗಿಸಲು ಕೆಐಎಡಿಬಿ ಯೋಜನೆ ರೂಪಿಸಿದೆ. ಬಳ್ಳಾರಿ ಜಿಲ್ಲೆಯಲ್ಲಿ 500ಕ್ಕೂ ಹೆಚ್ಚು ಜೀನ್ಸ್ ಉದ್ದಿಮೆದಾರರು ಇದ್ದಾರೆ. ಪಾರ್ಕ್ ವ್ಯಾಪ್ತಿಯಲ್ಲಿ ಉದ್ಯಮ ಆರಂಭಿಸಲು ಬಯಸಿದರೆ, ಅವರಿಗೆ ನಿವೇಶನ ಒದಗಿಸಲಾಗುತ್ತದೆ. ಎಲ್ಲಾ ಮೂಲಸೌಲಭ್ಯಗಳು ಒಳಗೊಂಡ ಸುವ್ಯವಸ್ಥಿತ ಜೀನ್ಸ್ ಪಾರ್ಕ್‌ನಲ್ಲಿ ಕಡಿಮೆ ದರದಲ್ಲಿ ನಿವೇಶನ ಹಂಚಿಕೆ ಆಗಬೇಕು.
ಈ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೂಚಿಸಿದ್ದು, ಅದಕ್ಕೆ ತಕ್ಕಂತೆ ಸರ್ಕಾರ ನಡೆದುಕೊಳ್ಳುತ್ತಿದೆ ಎಂದು ಮೂಲಗಳು ತಿಳಿಸಿವೆ. ಜೀನ್ಸ್ ಉದ್ಯಮದಲ್ಲಿ ಸ್ಟಿಚ್ಚಿಂಗ್, ವಾಷಿಂಗ್, ಮಾರಾಟ ಸೇರಿ ಹಲವು ಹಂತಗಳಿವೆ. ಇವುಗಳನ್ನೆಲ್ಲ ಒಂದೇ ಸೂರಿನಡಿ ತರುವ ಯೋಜನೆಯಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಾರುಕಟ್ಟೆ ಸೌಲಭ್ಯ, ಅನಾರೋಗ್ಯಕರ ದರ ಪೈಪೋಟಿ ತಪ್ಪಿಸುವ ಪ್ರಸ್ತಾವಗಳು ಯೋಜನೆಯಲ್ಲಿ ಉಲ್ಲೇಖವಾಗಿದೆ ಎನ್ನಲಾಗಿದೆ.

ಈಗಾಗಲೇ ಎಲ್ಲ ಸಿದ್ಧತೆಗಳೂ ಆಗಿದ್ದು, ಕೆಲವೇ ದಿನಗಳಲ್ಲಿ ಕೆಲಸವೂ ಆರಂಭವಾಗಲಿದೆ. ಅಡಿಗಲ್ಲು ಕಾರ್ಯಕ್ರಮಕ್ಕೆ ಸರ್ಕಾರವು ರಾಹುಲ್ ಗಾಂಧಿ ಅವರನ್ನೇ ಕರೆಸುವ ಪ್ರಯತ್ನ ನಡೆಸಿದೆ. ಒಂದರಿಂದ ಒಂದೂವರೆ ವರ್ಷದಲ್ಲಿ ಕಾಮಗಾರಿ ಪೂರ್ಣವಾಗುವ ನಿರೀಕ್ಷೆ ಇದೆ. ಜೀನ್ಸ್ ಪಾರ್ಕ್ ನಿರ್ಮಾಣಕ್ಕೆ ಭೂಸ್ವಾಧೀನ ಪೂರ್ಣಗೊಂಡಿದೆ. ಪರಿಸರ ಅನುಮೋದನೆ ಪ್ರಾಥಮಿಕ ಹಂತದ ಒಪ್ಪಿಗೆ ಜಾಗೂ ಕಾರ್ಯಾದೇಶ ಸಿಕ್ಕಿದೆ. ಶೀಘ್ರವೇ ಕೆಲಸ ಆರಂಭವಾಗಲಿದೆ ಎನ್ನಲಾಗಿದೆ.
ಬಳ್ಳಾರಿ ಜಿಲ್ಲೆಯಲ್ಲಿರುವ ಜೀನ್ಸ್ ಡೈಯಿಂಗ್ ಘಟಕಗಳು ಪ್ರತ್ಯೇಕ ಕಲುಷಿತ ನೀರು ಸಂಸ್ಕರಣ ಘಟಕಗಳನ್ನು (ಇಟಿಪಿ) ಮತ್ತು ಸಾಮಾನ್ಯ ಸಂಸ್ಕರಣಾ ಘಟಕಗಳನ್ನು (ಸಿಇಟಿಪಿ) ಮಾಡಿಕೊಂಡಿಲ್ಲ. ಕಲುಷಿತ ನೀರನ್ನ ಪರಿಸರಕ್ಕೆ ಬಿಟ್ಟಿವೆ. ಪರಿಣಾಮವಾಗಿ ಮಾಲಿನ್ಯ ಹೆಚ್ಚಿದೆ. ‘ಹೊಸ ಜೀನ್ಸ್ ಪಾರ್ಕ್‌ನಲ್ಲಿ ಕೆಐಎಡಿಬಿಯಿಂದ ಸಂಸ್ಕರಣಾ ಘಟಕ ನಿರ್ಮಿಸಲಾಗುವುದು. ಹೀಗಾಗಿ ಪ್ರತ್ಯೇಕ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಿಕೊಳ್ಳುವ ಅಗತ್ಯ ಇರುವುದಿಲ್ಲ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಬಳ್ಳಾರಿಯಲ್ಲಿ ಭಾರತ್ ಜೋಡೊ ಯಾತ್ರೆ ಕೈಗೊಂಡಿದ್ದ ವೇಳೆ ಬಳ್ಳಾರಿಯಲ್ಲಿ ಜೀನ್ಸ್ ಪಾರ್ಕ್ ಆರಂಭಿಸೋದಾಗಿ ಮಾತು ಕೊಟ್ಟಿದ್ರು. ಜಗತ್ತಿನಲ್ಲಿ ಬಳಕೆ ಆಗುವ ಜೀನ್ಸ್ ಮೇಲೆ ಮೇಡ್ ಇನ್ ಬಳ್ಳಾರಿ ಎಂದು ಬರೆದಿರುವಂತೆ ಮಾಡುತ್ತೇವೆ ಎಂದು ಹೇಳಿದ್ರು. ಅದಾದ ಬಳಿಕ 2024ರ ರಾಜ್ಯ ಬಜೆಟ್‌ನಲ್ಲೂ ಈ ಬಗ್ಗೆ ಉಲ್ಲೇಖಿಸಲಾಗಿತ್ತು. ಲೋಕಸಭಾ ಚುನಾವಣೆ ಹೊತ್ತಲ್ಲೂ ರಾಹುಲ್ ಗಾಂಧಿ ಮತ್ತೊಮ್ಮೆ ಜೀನ್ಸ್ ಪಾರ್ಕ್‌ನ ಭರವಸೆ ನೀಡಿದ್ದರು. ಆದ್ರೆ ಇದೀಗ ಆ ಕಾರ್ಯಕ್ಕೆ ವೇಗ ಸಿಕ್ಕಿದೆ.















