ಬೆಂಗಳೂರು (Bengaluru)- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾದ ಶಾಸಕರಾದ ಜಿ.ಟಿ.ದೇವೇಗೌಡ ಅವರು ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮಳೆ ಸಂಬಂಧಿತ ಕಾಮಗಾರಿಗಳನ್ನು ಕೈಗೊಳ್ಳಲು ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿದರು.
ಇಂದು ಬೆಂಗಳೂರಿನ ಆರ್.ಟಿ. ನಗರದಲ್ಲಿರುವ ಮುಖ್ಯಮಂತ್ರಿ ನಿವಾಸಕ್ಕೆ ಭೇಟಿ ನೀಡಿ ಅವರನ್ನು ಭೇಟಿಯಾಗಿ ಮನವಿ ಪತ್ರ ಸಲ್ಲಿಸಿದರು.
ಕಳೆದ ವರ್ಷ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಿನಲ್ಲಿ ಸುರಿದ ಭಾರೀ ಮಳೆಯಿಂದಾಗಿ ನನ್ನ ಮತ ಕ್ಷೇತ್ರ ಚಾಮುಂಡೇಶ್ವರಿ ವ್ಯಾಪ್ತಿಯ ಜನವಸತಿ ಪ್ರದೇಶಗಳಾದ ಬೋಗಾದಿ 2ನೇ ಹಂತ, ಸಿ.ಎಫ್. ಟಿ. ಆರ್. ಐ ಬಡಾವಣೆ, ಆನಂದನಗರ ಆಶ್ರಯ ಬಡಾವಣೆ, ಆನಂದ ಬಡಾವಣೆ, ಪ್ರೀತಿ ಬಡಾವಣೆ, ರಾಮಕೃಷ್ಣನಗರ, ದಟ್ಟಗಳ್ಳಿ, ಶಾರದಾದೇವಿ ನಗರ ಹಾಗೂ ಇನ್ನಿತರ ಜನವಸತಿ ಪ್ರದೇಶಗಳು ಜಲಾವೃತಗೊಂಡು ಗೃಹೋಪಯೋಗಿ ವಸ್ತುಗಳು, ದವಸ-ಧಾನ್ಯಗಳು ನೀರುಪಾಲಾಗಿ ಅಪಾರ ಪ್ರಮಾಣದ ನಷ್ಟವಾಗಿತ್ತು. ಆಗ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲು 138 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡುವಂತೆ ಕೋರಿ ಜಿಲ್ಲಾ ಉಸ್ತುವಾರಿ ಸಚಿವರು ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಆದರೆ ಈ ವರ್ಷ ಮೇ ತಿಂಗಳಿನಲ್ಲಿ ಮತ್ತೆ ಸುರಿದ ಮಳೆಯಿಂದಾಗಿ ಹಿನಕಲ್ ಕೆರೆ, ಬೋಗಾದಿ ಕೆರೆ ಹಾಗೂ ಲಿಂಗಾಬುದಿ ಕೆರೆಗಳು ಸುಮಾರು 20 ವರ್ಷಗಳ ನಂತರ ಕೊಡಿ ಒಡೆದ ಪರಿಣಾಮ ಜನವಸತಿ ಪ್ರದೇಶಗಳು ಮತ್ತೊಮ್ಮೆ ಜಲಾವೃತಗೊಂಡು ಸಾರ್ವಜನಿಕರು ತಿರುಗಾಡುವ ಸೇತುವೆಗಳು, ರಸ್ತೆಗಳು, ಚರಂಡಿಗಳು ಹಾಳಾಗಿದೆ. ಮುಂಬರುವ ದಿನಗಳಲ್ಲಿ ಇದು ಪುನರಾವರ್ತನೆಯಾಗದಂತೆ ತಡೆಯಲು ನಗರಪಾಲಿಕೆ ಆಯುಕ್ತರು ಈ ಸಂಬಂಧ ವಿವರವಾದ ಮಾಹಿತಿಗಳೊಂದಿಗೆ ಕಾಮಗಾರಿಗಳಿಗೆ 27.50 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.
ಸದರಿ ಕಾಮಗಾರಿಗಳನ್ನು ತುರ್ತಾಗಿ ಕೈಗೊಳ್ಳಬೇಕಾಗಿದ್ದು, ಅನುದಾನವನ್ನು ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಬೊಮ್ಮಾಯಿ ಅವರಲ್ಲಿ ಮನವಿ ಮಾಡಿದರು. ಶಾಸಕರ ಮನವಿಗೆ ಮುಖ್ಯಮಂತ್ರಿ ಬೊಮ್ಮಾಯಿ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು ಆದಷ್ಟು ಬೇಗ ಅನುದಾನ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದರು.