ಮನೆ ಸ್ಥಳೀಯ ಸಿಲಿಂಡರ್ ಬದಲಾವಣೆ ವೇಳೆ ಗ್ಯಾಸ್ ಸೋರಿಕೆ: ಹುಣಸೂರಿನಲ್ಲಿ ಬೆಂಕಿ ಅವಘಡ

ಸಿಲಿಂಡರ್ ಬದಲಾವಣೆ ವೇಳೆ ಗ್ಯಾಸ್ ಸೋರಿಕೆ: ಹುಣಸೂರಿನಲ್ಲಿ ಬೆಂಕಿ ಅವಘಡ

0

ಮೈಸೂರು: ಸಿಲಿಂಡರ್ ಬದಲಾಯಿಸುವ ಸಂದರ್ಭ ಎಚ್ಚರಿಕೆ ತೀರಾ ಅಗತ್ಯವಾಗಿದ್ದು, ಕೇವಲ ಕ್ಷಣದ ನಿರ್ಲಕ್ಷ್ಯವೂ ಭಾರೀ ಅಪಾಯಕ್ಕೆ ಕಾರಣವಾಗಬಹುದು ಎಂಬುದನ್ನು ಮೈಸೂರಿನ ಒಂದು ಘಟನೆ ಮತ್ತೆ ಸಾಬೀತುಪಡಿಸಿದೆ. ಮೈಸೂರಿನ ಹುಣಸೂರು ತಾಲೂಕಿನ ಕಲ್ಕುಣಿಕೆಯಲ್ಲಿ ಶುಕ್ರವಾರ ಸಂಜೆ ಸಂಭವಿಸಿದ ಗ್ಯಾಸ್ ಸೋರಿಕೆ ಹಾಗೂ ಬೆಂಕಿ ಅವಘಡದಲ್ಲಿ ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಘಟನೆ ಹುಣಸೂರು ನಗರದ ಕುರ್ಜನ್ ಬೀದಿಯಲ್ಲಿ ನಡೆದಿದ್ದು, ನಿಂಗರಾಜು ಎಂಬುವವರ ಮನೆಯಲ್ಲಿ ಸಿಲಿಂಡರ್ ಬದಲಾವಣೆ ನಡೆಯುತ್ತಿದ್ದಾಗ ಘಟನೆ ಸಂಭವಿಸಿದೆ. ಮನೆಯಲ್ಲಿದ್ದ ಸಿಲಿಂಡರ್ ಖಾಲಿಯಾದ ಹಿನ್ನೆಲೆಯಲ್ಲಿ ಹೊಸ ಸಿಲಿಂಡರ್ ಅಳವಡಿಸುತ್ತಿರುವ ಸಂದರ್ಭದಲ್ಲಿ ಅನಾಹುತ ಉಂಟಾಗಿದೆ. ಸಿಲಿಂಡರ್ ಅನ್ನು ಸರಿಯಾಗಿ ಅಳವಡಿಸದ ಕಾರಣದಿಂದಾಗಿ ಗ್ಯಾಸ್ ಸೋರಿಕೆ ಹಾಗು ಬೆಂಕಿಯಿಂದಾಗಿ ಮನೆಯೊಳಗಿದ್ದವರು ಗಾಯಗೊಂಡಿದ್ದಾರೆ.

ಘಟನೆಯಲ್ಲಿ ನಿಂಗರಾಜು ಅವರ ಪತ್ನಿ ಜ್ಯೋತಿ ಹಾಗೂ ಪಕ್ಕದ ಮನೆಯವರು ರಾಣಿಯಮ್ಮ, ಶೀಲ ಮತ್ತು ನಾಗಮ್ಮ ಸೇರಿ ಐವರಿಗೆ ಗಂಭೀರವಾದ ಸುಟ್ಟ ಗಾಯಗಳಾಗಿವೆ. ಈ ಪೈಕಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ. ಗಾಯಾಳುಗಳನ್ನು ತಕ್ಷಣವೇ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯಕೀಯ ಸಿಬ್ಬಂದಿ ಅವರ ಚಿಕಿತ್ಸೆ ನೀಡುತ್ತಿರುವುದಾಗಿ ತಿಳಿದು ಬಂದಿದೆ.

ಘಟನೆಯ ಸಂದರ್ಭ ಬಲವಾದ ಸ್ಫೋಟದ ಶಬ್ದ ಕೇಳಿಬಂದಿದ್ದು, ಪಕ್ಕದ ಮನೆಯ ನಿವಾಸಿಗಳು ಆತುರದಿಂದ ರಕ್ಷಣೆಗೆ ಧಾವಿಸಿದ್ದಾರೆ. ಆದರೆ ಉರಿಯುತ್ತಿರುವ ಬೆಂಕಿಯ ತೀವ್ರತೆಗೆ ಪಕ್ಕದ ಮನೆಯವರ ಬಟ್ಟೆಗೆ ಬೆಂಕಿ ಹೊತ್ತಿಕೊಂಡಿದೆ. ಇದರಿಂದಾಗಿ ಅವರು ಸಹ ಗಾಯಗೊಂಡಿದ್ದಾರೆ.

ಸ್ಥಳೀಯರು ತಕ್ಷಣವೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಧಾವಿಸಿದ ಸಿಬ್ಬಂದಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆಯ ಬಳಿಕ ಹುಣಸೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.