ಮೈಸೂರು(Mysore): ಜಾಗತಿಕ ಮಟ್ಟದಲ್ಲಿ ಉನ್ನತ ಶಿಕ್ಷಣ ಕ್ಷೇತ್ರದಲ್ಲಿರುವ ವಿಶ್ವವಿದ್ಯಾಲಯಗಳ ಮೌಲ್ಯಮಾಪನ ನಡೆಸಿ, ಗುಣಮಟ್ಟವನ್ನು ಶ್ರೇಣೀಕರಿಸುವ ಸ್ವತಂತ್ರ ಸಂಸ್ಥೆಯಾದ ‘ಕ್ವಕ್ ಕ್ವಾರೆಲಿ ಸೈಮಂಡ್ಸ್ (ಕ್ಯು.ಎಸ್.) ಇತ್ತೀಚೆಗೆ ಪ್ರಕಟಿಸಿರುವ ‘ವಿಶ್ವ ವಿಶ್ವವಿದ್ಯಾಲಯ ರ್ಯಾಂಕಿಂಗ್’ನಲ್ಲಿ ಮೈಸೂರು ವಿಶ್ವವಿದ್ಯಾಲಯವು 110ನೇ ಸ್ಥಾನ ಪಡೆದಿದೆ’.
ಈ ಬಗ್ಗೆ ಪ್ರಕಟಣೆ ನೀಡಿರುವ ಪ್ರಭಾರ ಕುಲಪತಿ ಪ್ರೊ.ಎಚ್.ರಾಜಶೇಖರ್, ‘ಆರು ಪ್ರಮುಖ ಅಂಶಗಳನ್ನಾಧರಿಸಿ ಕ್ಯೂ.ಎಸ್. ಸಂಸ್ಥೆಯು ಪ್ರತಿ ವರ್ಷವೂ ಜಾಗತಿಕವಾಗಿ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ರ್ಯಾಂಕಿಂಗ್ ನೀಡುತ್ತದೆ.
ಶೈಕ್ಷಣಿಕ ಸಹವರ್ತಿಗಳ ವಿಮರ್ಶೆ, ಅಧ್ಯಾಪಕ–ವಿದ್ಯಾರ್ಥಿ ಅನುಪಾತ, ಸಂಶೋಧನಾ ಉಲ್ಲೇಖ, ಉದ್ಯೋಗದಾತರು ಹೊಂದಿರುವ ಅಭಿಪ್ರಾಯ, ವಿದೇಶಿ ವಿದ್ಯಾರ್ಥಿಗಳ ಅನುಪಾತ ಹಾಗೂ ವಿದೇಶಿ ಅಧ್ಯಾಪಕರ ಅನುಪಾತ ಅಂಶಗಳನ್ನು ಪರಿಗಣಿಸಲಾಗಿದೆ.
ಮೈಸೂರು ವಿ.ವಿ.ಯು ಬೋಧನೆ, ಸಂಶೋಧನೆ ಹಾಗೂ ಉದ್ಯೋಗ ಸೃಷ್ಟಿಯ ಆಯಾಮಗಳಲ್ಲಿ ಉತ್ತಮ ಸಾಧನೆ ಮಾಡಿ ಶ್ರೇಣಿಯನ್ನು ಪಡೆದಿದೆ ಎಂದಿದ್ದಾರೆ.
ಕಾಯಂ ಅಧ್ಯಾಪಕರ ಕೊರತೆ ಹಾಗೂ ಇನ್ನಿತರ ಮಿತಿಗಳ ನಡುವೆಯೂ ವಿ.ವಿಯು 110ನೇ ಸ್ಥಾನ ಗಳಿಸಿರುವುದು ಅಭಿಮಾನದ ಸಂಗತಿಯಾಗಿದೆ ಎಂದು ತಿಳಿಸಿದ್ದಾರೆ.