ಮನೆ ರಾಜಕೀಯ ಅಸಾಂವಿಧಾನಿಕ ಒತ್ತಡಗಳಿಂದ ಸರ್ಕಾರ ನಿಯಂತ್ರಣ: ಎಚ್.ವಿಶ್ವನಾಥ್

ಅಸಾಂವಿಧಾನಿಕ ಒತ್ತಡಗಳಿಂದ ಸರ್ಕಾರ ನಿಯಂತ್ರಣ: ಎಚ್.ವಿಶ್ವನಾಥ್

0

ಮೈಸೂರು: ಅಸಾಂವಿಧಾನಿಕ ಒತ್ತಡಗಳು ಸರ್ಕಾರವನ್ನು ನಿಯಂತ್ರಣ ಮಾಡುತ್ತಿವೆ ಎಂದು  ವಿಧಾನ ಪರಿಷತ್ತು ಸದಸ್ಯ ಅಡಗೂರು ಎಚ್.ವಿಶ್ವನಾಥ್ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದರ ಅವರು, ರಾಷ್ಟ್ರಭಕ್ತನಂತೆ ಉದ್ದುದ್ದ ಬರೆಯುವ ಚಕ್ರವರ್ತಿ ಸೂಲಿಬೆಲೆ, ಪಠ್ಯಪುಸ್ತಕ ಕುಲಗೆಡಿಸಿದ ಚಕ್ರತೀರ್ಥ, ಶತಾವದಾನಿ ಗಣೇಶ್, ಪ್ರಮೋದ್ ಮುತಾಲಿಕ್ ಮುಂತಾದವರು ಸರ್ಕಾರವನ್ನು ನಿಯಂತ್ರಿಸುತ್ತಿದ್ದಾರೆ. ಸಂವಿಧಾನವನ್ನು ಗೇಲಿ ಮಾಡಿದರೂ ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬೆಂಗಳೂರಿನ ಜೈನ್ ಕಾಲೇಜಿನಲ್ಲಿ ಕಿರುನಾಟಕ ಪ್ರದರ್ಶನ ಮಾಡಲಾಗಿದೆ. ಅದರಲ್ಲಿ ಜಾತೀಯತೆ, ಅಸ್ಪೃಶ್ಯತೆ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ವ್ಯವಸ್ಥೆ ಬಗ್ಗೆ ಏನೋ ಹೇಳಲು ಹೋಗಿ ತಿರುಚಿದ್ದಾರೆ.  ಅದರ ವಿಡಿಯೋ ನೋಡಿದ್ದೇನೆ. ದಲಿತ ಹುಡುಗ ಮೇಲ್ವರ್ಗದ ಹುಡುಗಿಯನ್ನು ಮುಟ್ಟುವಾಗ ಟಚ್ ಮಿ ನಾಟ್ ಅಂತ ಹಾಡು ಹಾಕಿದ್ದಾರೆ.  ಡಾ. ಬಿ.ಆರ್.ಅಂಬೇಡ್ಕರ್ ಅವರನ್ನು ಬಿಯರ್ ಅಂಬೇಡ್ಕರ್ ಎಂದು ಸಂಭೋದಿಸಲಾಗಿದೆ. ಪ್ರೇಕ್ಷಕರ ಸಾಲಿನಲ್ಲಿದ್ದ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಕೇಕೆ ಹಾಕಿ ನಕ್ಕಿದ್ದಾರೆ. ಇದು ರಾಷ್ಟ್ರೀಯ ಅವಮಾನ ಎಂದರು.

ಸಾಮಾಜಿಕ ಜಾಲತಾಣಗಳಲ್ಲಿ ನಾಟಕಕ್ಕೆ ವಿರೋಧ ವ್ಯಕ್ತವಾಗಿದೆ. ಸರ್ಕಾರ ಜೈನ್ ವಿಶ್ವವಿದ್ಯಾಲಯದ ಮಾನ್ಯತೆ ರದ್ದುಪಡಿಸಬೇಕಿತ್ತು. ಸರ್ಕಾರ ಯಾರದ್ದೋ ಒತ್ತಡಕ್ಕೆ ಮಣಿದು ವಿದ್ಯಾರ್ಥಿಗಳ ಮೇಲೆ ಕ್ರಮ ಕೈಗೊಂಡಿದೆ.  ಉನ್ನತ ಶಿಕ್ಷಣ ಸಚಿವರು, ಸಮಾಜ ಕಲ್ಯಾಣ ಸಚಿವರು, ರಾಜ್ಯಪಾಲರು ದನಿ ಎತ್ತಿಲ್ಲ. ಕಾಲೇಜು ಆಡಳಿತ ಮಂಡಳಿ ಕನಿಷ್ಠ ಕ್ಷಮೆ ಕೇಳಿಲ್ಲ. ಸಂಸದರು, ಶಾಸಕರು ಸೊಲ್ಲೆತ್ತಿಲ್ಲ. ವಿರೋಧ ಪಕ್ಷಗಳೂ ಖಂಡಿಸಿಲ್ಲ ಎಂದು ಆಕ್ರೋಶ ಹೊರಹಾಕಿದರು.

ನಿಮ್ಮನ್ನು ನೋಡಿದರೆ ದೇವರೇ ಓಡಿಹೋಗುತ್ತಾರೆ:

ಗೃಹ ಮಂತ್ರಿಗಳು ಭಾರತ ಮಾತೆಯ ದೇವಾಲಯ ಉದ್ಘಾಟಿಸಿದ್ದಾರೆ. ಭಾರತ ಮಾತೆ ಭಾರತೀಯರ ಹೃದಯ ಮಂದಿರಗಳಲ್ಲಿ ರಾರಾಜಿಸುತ್ತಿದ್ದಾಳೆ. ಭಾರತ ಮಾತೆ ಪೂಜಿಸುವುದನ್ನು ನಿಮ್ಮಿಂದ ಕಲಿಯಬೇಕಿಲ್ಲ. ನಿಮ್ಮನ್ನು ನೋಡಿ ದೇವರುಗಳೇ ಹೆದರಿಕೊಂಡು ಓಡಿಹೋಗುತ್ತಾರೆ  ಎಲ್ಲ ಕಡೆ ಭಾರತ ಮಾತೆ ದೇವಾಲಯ ಕಟ್ಟುತ್ತಾರಂತೆ. ಸಂವಿಧಾನಕ್ಕೆ ಅಪಮಾನ ಮಾಡಿ ಭಾರತ ಮಾತೆ ಪೂಜೆ ಮಾಡುವುದನ್ನು ಹೇಳಿಕೊಡುತ್ತಿದ್ದೀರಿ ಎಂದು ಹರಿಹಾಯ್ದರು.

ಹಿಂದಿನ ಲೇಖನಕೊಟ್ಟ ಸಾಲ ವಾಪಸ್ ಕೇಳಿದ್ದಕ್ಕೆ ಉದ್ಯಮಿಯ ಹತ್ಯೆ
ಮುಂದಿನ ಲೇಖನನಾಟಕದಲ್ಲಿ ಅಂಬೇಡ್ಕರ್’ಗೆ ಅವಮಾನ: ಜೈನ್ ವಿವಿಯ 7 ವಿದ್ಯಾರ್ಥಿಗಳು ವಶಕ್ಕೆ