ಮನೆ ರಾಜ್ಯ ನಿಷ್ಪಕ್ಷಪಾತ ತನಿಖೆ ನಡೆಸಲು ಸರ್ಕಾರ ಬದ್ಧ: ಮುಖ್ಯಮಂತ್ರಿ ಬೊಮ್ಮಾಯಿ

ನಿಷ್ಪಕ್ಷಪಾತ ತನಿಖೆ ನಡೆಸಲು ಸರ್ಕಾರ ಬದ್ಧ: ಮುಖ್ಯಮಂತ್ರಿ ಬೊಮ್ಮಾಯಿ

0

ಬೆಂಗಳೂರು (Bengaluru): ನಿಷ್ಪಕ್ಷಪಾತವಾದ ಹಾಗೂ ನಿರ್ದಾಕ್ಷಿಣ್ಯವಾದ ತನಿಖೆಯನ್ನು ಮಾಡುವ ಮೂಲಕ ಇಡೀ ವ್ಯವಸ್ಥೆಯನ್ನು ಸ್ವಚ್ಛಗೊಳಿಸಲು ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಪಿಎಸ್ಐ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಎಡಿಜಿಪಿ ಅಮೃತ್ ಪೌಲ್ ಮತ್ತು ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರದ ಹಿಂದಿನ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಅವರನ್ನು ಸೋಮವಾರ ಬಂಧಿಸಿರುವ ಬಗ್ಗೆ ಅವರು ಪ್ರತಿಕ್ರಿಯಿಸಿದರು.

ಅಮೃತ್ ಪೌಲ್ ಬಂಧನದಿಂದ ರಾಜ್ಯ ಸರ್ಕಾರಕ್ಕೆ ಯಾವುದೇ ಮುಜುಗರ ಆಗಿಲ್ಲ. ತಪ್ಪಿತಸ್ಥರನ್ನು ಬಂಧಿಸುವುದಾಗಿ ಹೇಳಿದ್ದೆ. ಆ ಕೆಲಸವನ್ನು ಸರ್ಕಾರ ಮಾಡಿದೆ. ನಮ್ಮ ಸರ್ಕಾರ ಬೇರೆ ಯಾವುದೇ ಸರ್ಕಾರ ಇದ್ದರೂ ಈ ಕೆಲಸ ಮಾಡುತ್ತಿರಲಿಲ್ಲ ಎಂದು ಹೇಳಿದರು.

ಯಾವುದೇ ತನಿಖೆ ಇದ್ರೂ ಕಾನೂನಿನ ಪ್ರಕಾರವೇ‌ ನಡೆಯುತ್ತೆ. ಈ‌ ಮಾತನ್ನು ನಾನು ಆಗಲೇ ಹೇಳ್ತಿದ್ದೆ. ಯಾರ ಬಗ್ಗೆಯೂ ಮುಲಾಜಿಲ್ಲ. ಯಾವ ಹಂತದಲ್ಲಿ ಸಾಕ್ಷಿ ಆಧಾರ ಇಟ್ಕೊಂಡು ಕ್ರಮ ತಗೋಬೇಕೋ ಆ ಕೆಲಸವನ್ನು ತನಿಖಾಧಿಕಾರಿಗಳು ಮಾಡ್ತಿದ್ದಾರೆ. ವಿಶೇಷವಾಗಿ ಕರ್ನಾಟಕದಲ್ಲಿ ಈ ಕ್ರಮ ಆಗ್ತಿದೆ ಎಂದು ಬೊಮ್ಮಾಯಿ ತಿಳಿಸಿದರು.

ಪಿಎಸ್‌ಐ ನೇಮಕಾತಿ ಹಗರಣದ ತನಿಖೆ ನಡೆಸಲು ಸಿಐಡಿಯವರಿಗೆ ಮುಕ್ತವಾದ ಅವಕಾಶವನ್ನು ನೀಡಲಾಗಿದೆ. ಸಾಕ್ಷ್ಯ ಆಧಾರಗಳ ಮೇಲೆ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಎಷ್ಟೇ ದೊಡ್ಡ ಅಧಿಕಾರಿಗಳಾಗಿದ್ದರೂ ನಮ್ಮ ಸರ್ಕಾರ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತದೆ. ಹಿಂದಿನ ಸರ್ಕಾರಗಳ ಅವಧಿಯಲ್ಲಿ ಹಗರಣದ ಕೂಗು ಕೇಳಿಬಂದಿದ್ದರೂ, ಯಾವುದೇ ತನಿಖೆ ನಡೆದಿರಲಿಲ್ಲ ಎಂದರು.

ಹಿಂದಿನ ಲೇಖನಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಪಂದ್ಯ: ಗೆಲುವಿಗೆ 378 ರನ್‌ಗಳ ಸವಾಲಿನ ಗುರಿ ನೀಡಿದ ಭಾರತ
ಮುಂದಿನ ಲೇಖನಅರಗ ಜ್ಞಾನೇಂದ್ರರನ್ನು ಸಂಪುಟದಿಂದ ಕಿತ್ತು ಹಾಕಿ: ಸಿದ್ದರಾಮಯ್ಯ