ಗಾಂಧಿನಗರ : ಗುಜರಾತ್ ಸಿಎಂ ಭೂಪೇಂದ್ರ ಪಟೇಲ್ ತಮ್ಮ ಸಂಪುಟ ಪುನಾರಚನೆ ಮಾಡಿದ್ದಾರೆ. ಮಾಧ್ಯಮಗಳಿಗೆ ಬಂದ ಮಾಹಿತಿ ಪ್ರಕಾರ 26 ಮಂತ್ರಿಗಳಿರುವ ಕ್ಯಾಬಿನೆಟ್ ಅನ್ನು ಸಿಎಂ ಹೊಂದಿರಲಿದ್ದಾರೆ.
ಹಲವು ಹಾಲಿ ಮಂತ್ರಿಗಳನ್ನು ಕೈಬಿಡಲಾಗಿದೆ. ಹಲವು ಹೊಸಬರಿಗೆ ಮಣೆಹಾಕಲಾಗಿದೆ. ಮೊದಲ ಬಾರಿಗೆ ಮಂತ್ರಿ ಸ್ಥಾನ ಪಡೆದವರಲ್ಲಿ ಗಮನ ಸೆಳೆಯುತ್ತಿರುವವರು ಕ್ರಿಕೆಟಿಗ ರವೀಂದ್ರ ಜಡೇಜಾ ಅವರ ಪತ್ನಿ ರಿವಾಬ ಜಡೇಜಾ.
ಹೊಸ ಸಂಪುಟ ಸದಸ್ಯರ ಪ್ರಮಾಣ ವಚನ ಸಮಾರಂಭ ಇಂದು ಶುಕ್ರವಾರವೇ ನಡೆಯಲಿದೆ. ಗುಜರಾತ್ ರಾಜ್ಯಪಾಲ ಆಚಾರ್ಯ ದೇವವ್ರತ್ ಅವರನ್ನು ಸಿಎಂ ಭೂಪೇಂದ್ರ ಪಟೇಲ್ ಭೇಟಿಯಾಗಿ ಪ್ರಮಾಣ ವಚನ ಸಮಾರಂಭಕ್ಕೆ ಅನುಮತಿ ಪಡೆದಿದ್ದಾರೆ. ಶುಕ್ರವಾರ ಸಂಜೆ ನಡೆಯುವ ಸಮಾರಂಭದಲ್ಲಿ ಎಲ್ಲಾ ಮಂತ್ರಿಗಳು ರಾಜ್ಯಪಾಲರಿಂದ ಪ್ರಮಾಣ ಬೋಧನೆ ಪಡೆಯಲಿದ್ದಾರೆ.
ವರದಿಗಳ ಪ್ರಕಾರ ಒಟ್ಟು 26 ಮಂದಿಗೆ ಭೂಪೇಂದ್ರ ಪಟೇಲ್ ಅವರ ಸಂಪುಟಕ್ಕೆ ಸೇರಲಿದ್ದಾರೆ. ಇದರಲ್ಲಿ ಟೀಮ್ ಇಂಡಿಯಾ ಕ್ರಿಕೆಟಿಗ ರವೀಂದ್ರ ಜಡೇಜಾ ಅವರ ಪತ್ನಿ ರಿವಾಬಾ ಜಡೇಜಾ ಕೂಡ ಸೇರಿದ್ದಾರೆ. ಅಲ್ಪೇಶ್ ಠಾಕೂರ್ ಅವರಿಗೂ ಮಂತ್ರಿಯಾಗುವ ಯೋಗ ಸಿಕ್ಕಿದೆ. 40 ವರ್ಷದ ಹರ್ಷ್ ಸಾಂಘ್ವಿ ಅವರು ಉಪಮುಖ್ಯಮಂತ್ರಿಯಾಗಿದ್ದಾರೆ. ಗುಜರಾತ್ ರಾಜ್ಯದ ಇತಿಹಾಸದಲ್ಲೇ ಅತ್ಯಂತ ಕಿರಿಯ ವಯಸ್ಸಿನ ಡಿಸಿಎಂ ಎನ್ನುವ ದಾಖಲೆ ಮತ್ತು ಗೌರವ ಹರ್ಷ್ ಸಾಂಘ್ವಿ ಅವರದ್ದಾಗಿದೆ.
ಗುಜರಾತ್ನ ಹೊಸ ಕ್ಯಾಬಿನೆಟ್ಗೆ ಸೇರ್ಪಡೆಯಾಗಿರುವ 20ಕ್ಕೂ ಹೆಚ್ಚು ಸಚಿವರಲ್ಲಿ ಮೂವರು ಮಹಿಳೆಯರಿದ್ದಾರೆ. ಮನೀಶಾ ವಕೀಲ್, ರಿವಾಬಾ ಜಡೇಜಾ ಮತ್ತು ದರ್ಶನಾ ವಘೇಲಾ ಅವರು ಆ ಮೂವರು ಸಚಿವೆಯರು. ಈ ಪೈಕಿ ಮನೀಶಾ ವಕೀಲ್ ಅವರು ಈ ಹಿಂದೆ ಸಚಿವೆಯಾಗಿ ಕೆಲಸ ಮಾಡಿದ ಅನುಭವಿಯಾಗಿದ್ದಾರೆ.














