ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಹಾಗೂ ರಜೌರಿಯಲ್ಲಿ ಭಾರತೀಯ ಸೇನಾಪಡೆ ಎನ್ ಕೌಂಟರ್ ನಡೆಸಿದ್ದು, ಇಬ್ಬರು ಭಯೋತ್ಪಾದಕರನ್ನು ಹತ್ಯೆ ಮಾಡಿದೆ ಎಂದು ಶನಿವಾರ ತಿಳಿದುಬಂದಿದೆ.
ಬಾರಾಮುಲ್ಲಾದ ಕರ್ಹಾಮಾ ಕುಂಜರ್ ಎಂಬ ಪ್ರದೇಶದಲ್ಲಿ ಉಗ್ರರು ಅಡಗಿ ಕುಳಿತಿರುವ ಕುರಿತು ಖಚಿತ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಸೇನಾಪಡೆಗಳು ಕಾರ್ಯಾಚರಣೆ ಆರಂಭಿಸಿದ್ದವು.
ಈ ವೇಳೆ ಭದ್ರತಾ ಪಡೆ, ಭಯೋತ್ಪಾದಕರ ನಡುವೆ ಗುಂಡಿನ ಕಾಳಗ ನಡೆದಿದ್ದು, ಸ್ಥಳವನ್ನು ಸುತ್ತುವರೆದ ಯೋಧರು, ಎನ್ಕೌಂಟರ್ ನಡೆಸಿ ಓರ್ವ ಉಗ್ರನನ್ನು ಹತ್ಯೆ ಮಾಡಿದ್ದಾರೆ.
ಹತ್ಯೆಗೀಡಾದ ಭಯೋತ್ಪಾದಕನನ್ನು ಕುಲ್ಗಾಮ್ ನಿವಾಸಿ ಅಬಿದ್ ವಾನಿ ಎಂದು ಗುರುತಿಸಲಾಗಿದ್ದು, ನಿಷೇಧಿತ ಭಯೋತ್ಪಾದಕ ಸಂಘಟನೆ ಎಲ್’ಇಟಿಯೊಂದಿಗೆ ಈತ ಸಂಪರ್ಕ ಹೊಂದಿದ್ದನೆಂದು ವರದಿಗಳು ತಿಳಿಸಿವೆ.
ಹತ್ಯೆಯಾದ ಉಗ್ರನಿಂದ 1 ಎಕೆ 47 ರೈಫಲ್ ವಶಪಡಿಸಿಕೊಳ್ಳಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಮಾಹಿತಿ ನೀಡಿದ್ದಾರೆ.
ಸ್ಥಳದಲ್ಲಿ ಮತ್ತಷ್ಟು ಉಗ್ರರು ಅಡಗಿಕುಳಿತಿರುವ ಶಂಕೆಗಳು ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಸೇನಾಪಡೆ ಕಾರ್ಯಾಚರಣೆಯನ್ನು ಮುಂದುವರೆಸಿದೆ ಎಂದು ವರದಿಗಳು ತಿಳಿಸಿವೆ.
ಇನ್ನು ರಜೌರಿಯಲ್ಲಿ ಎನ್ಕೌಂಟರ್ ನಡೆಸಿರುವ ಭಾರತೀಯ ಸೇನಾಪಡೆಗಳು, ಇನ್ನೋರ್ವ ಉಗ್ರನನ್ನು ಹತ್ಯೆ ಮಾಡಿದೆ. ಮತ್ತೋರ್ವ ಉಗ್ರನಿಗೆ ಗಾಯವಾಗಿರುವ ಸಾಧ್ಯತೆಗಳಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಹತ್ಯೆಯಾದ ಉಗ್ರರಿಂದ 1 ಎಕೆ 56, 56 ಸುತ್ತುಗಳ ಎಕೆ, 1×9 ಎಂಎಂ ಪಿಸ್ತೂಲ್ ವಿತ್ ಮ್ಯಾಗ್, 3 ಗ್ರೆನೇಡ್ ಮತ್ತು 1 ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸೇನಾಪಡೆ ಮಾಹಿತಿ ನೀಡಿದೆ.
ಸ್ಥಳದಲ್ಲಿ ಕಾರ್ಯಾಚರಣೆ ಮುಂದುವರೆದಿದೆ ಎಂದು ತಿಳಿದುಬಂದಿದೆ.