ಮನೆ ದೇವಸ್ಥಾನ ಗುಂಜಾ ನರಸಿಂಹ ದೇವಾಲಯ

ಗುಂಜಾ ನರಸಿಂಹ ದೇವಾಲಯ

0

ಮೈಸೂರಿನಿಂದ 30 ಕಿಲೋ ಮೀಟರ್ ದೂರದಲ್ಲಿರುವ ತಿರುಮಕೂಡಲು ನರಸೀಪುರ ಸಹ ಹರಿಹರರ ಕ್ಷೇತ್ರ. ಕಾವೇರಿ, ಕಪಿಲೆಯ ಸ್ಫಟಿಕ ಸರೋವರದಲ್ಲಿ ಸಂಗಮವಾಗುತ್ತವೆ. ಈ ಮೂರರ ಸಂಗಮ ಸ್ಥಳವಾದ್ದರಿಂದಲೇ ಇದಕ್ಕೆ ತ್ರಿಮಕೂಟ, ತಿರುಮ ಕೂಡಲು  ಎನ್ನುತ್ತಾರೆ, ನದಿಯ ದಡದಲ್ಲಿ ಗುಂಜಾ ನರಸಿಂಹ ನೆಲೆಸಿರುವುದರಿಂದ ಕ್ಷೇತ್ರಕ್ಕೆ ತಿರಮಕೂಡಲು ನರಸೀಪುರ ಎಂದು ಹೆಸರು ಬಂದಿದೆ ಎಂಬುದು ಹಿರಿಯರ ಅಭಿಪ್ರಾಯ.
ಕ್ಷೇತ್ರ ಪುರಾಣ:

ಈ ಮೊದಲು ಸ್ವಾಮಿ ಇದ್ದದ್ದು ಹುತ್ತದಲ್ಲಿ. ಅಗಸನೋರ್ವ ಮಂದಿರ ಕಟ್ಟಿಸಿದ ಪ್ರಸಂಗವಿದು. ಸ್ವಾಮಿಯು ಒಬ್ಬ ಅಗಸನ ಕನಸಿನಲ್ಲಿ ಬಂದು ತಾನು ಹುತ್ತದಲ್ಲಿರುವುದಾಗಿಯೂ ತನಗೆ ಮಂದಿರ ನಿರ್ಮಿಸಬೇಕೆಂದೂ ಹೇಳುತ್ತಾನೆ.

ಅಗಸನಿಗೆ ಆಶ್ಚರ್ಯವಾದರೂ “ನನಗೆ ಏನೂ ಗತಿ ಇಲ್ಲ. ಹೇಗೆ ದೇವಸ್ಥಾನ ಕಟ್ಟಿಸಲಿ?” ಎಂದು ಕೇಳುತ್ತಾನೆ. ಆಗ ಸ್ವಾಮಿ, “ನೀನು ಒಗೆಯುತ್ತಿರುವ ಕಲ್ಲಿನ ಕೆಳಗೆ ಕೊಪ್ಪರಿಗೆ ಹಣ ಸಿಗುತ್ತೆ. ಅದರಿಂದ ಮಂದಿರ ಕಟ್ಟಿಸು,” ಎನ್ನುತ್ತಾನೆ. ಅದರಂತೆ ಅಗಸನು ಮರುದಿನ ಕಲ್ಲು ತೆಗೆದು ನೋಡಿದಾಗ ಕೊಪ್ಪರಿಗೆ ಹಣ ಕಾಣುತ್ತದೆ. ಅಗಸನು ಈ ಹಣದಿಂದ ಗರ್ಭಗುಡಿ, ಸುಖನಾಸಿ ಎಂಬ ಎರಡಂಕಣ ಕಟ್ಟಿಸಿದ ಎಂದು ಶಾಸನಗಳು ಹೇಳುತ್ತವೆ. ಮಂದಿರದಿಂದ ಸಂತುಷ್ಟನಾದ ಭಗವಂತನು ಅಗಸನಿಗೆ, “ನಿನ್ನ ಭಕ್ತಿಗೆ ಮೆಚ್ಚಿದ್ದೇನೆ. ಏನು ವರ ಬೇಕು ಕೇಳು” ಎನ್ನುತ್ತಾನೆ. ಅದಕ್ಕೆ ಅಗಸನು, “ನಾನು ಪಾಪ ಮಾಡಿದ್ದೇನೆ. ನಾನು ಕಾಶಿಗೆ ಹೋಗಿ ಪುಣ್ಯ ಸ್ನಾನ ಮಾಡಿ ಬರಬೇಕೆಂದಿದ್ದೇನೆ. ಅದಕ್ಕೆ ಸಹಾಯ ಮಾಡು” ಎಂದು ಕೇಳುತ್ತಾನೆ. ಆಗ ಭಗವಂತನು, “ಕಾಶಿಗೆ ಹೋಗಬೇಕಾಗಿಲ್ಲ. ಕಾಶಿಗಿಂತ ಇದೇ ಒಂದು ಗುಲಗಂಜಿ ತೂಕ ಜಾಸ್ತಿ ಪುಣ್ಯ ಇರುವ ಸ್ಥಳ” ಎಂದು ಸಾರುತ್ತಾನೆ.

ಇಲ್ಲಿ ಒಂದು ವಿವರಣೆ ಅಗತ್ಯ. ಅಲ್ಲಿ ಗಂಗಾ, ಸರಸ್ವತಿ, ಯಮುನೆಯರ ಸಂಗಮವಾದರೆ ಇಲ್ಲಿ ಕಾವೇರಿ, ಕಪಿಲ, ಸ್ಫಟಿಕ ಸರೋವರಗಳು ಸಂಗಮವಾಗಿದೆ. ಅಲ್ಲಿ ಸರಸ್ವತಿ ಗುಪ್ತಗಾಮಿನಿಯಾದರೆ ಇಲ್ಲಿ ಸ್ಫಟಿಕ ಸರೋವರ ಅಂತರ್ಗಾಮಿನಿ. ಅಲ್ಲಿ ವಿಶ್ವೇಶ್ವರ. ಇಲ್ಲಿ ಅಗಸ್ತ್ಯೇಶ್ವರ. ಈ ಅಗಸ್ತ್ಯೇಶ್ವರನ ಶಿರದ ಮೇಲೆ ತೀರ್ಥ ಉದ್ಭವವಾಗಿದೆ. ಅಲ್ಲಿಂದಲೇ ತೆಗೆದು ಎಲ್ಲರಿಗೂ ತೀರ್ಥ ಕೊಡಲಾಗುತ್ತದೆ. ಅಲ್ಲಿ ವಟವೃಕ್ಷ. ಇಲ್ಲಿ ಬ್ರಹ್ಮ ಅಶ್ವತ್ಥ. ಹೊಳೆಯಿಂದ ಆಚೆ ಸಂಗಮದ ಬಳಿ ಬ್ರಹ್ಮ ಹಾಕಿದ ಅರಳೀಮರವಿದೆ. ಕಾಶಿ ಕ್ಷೇತ್ರಕ್ಕೂ ಇಲ್ಲಿಗೂ ಒಂದು ಗುಲಗಂಜಿ ತೂಕ ವ್ಯತ್ಯಾಸ. ಹೀಗಾಗಿ ಗುಂಜಾ ನರಸಿಂಹ ಎಂಬ ಹೆಸರು. ತೊಡೆಯ ಮೇಲೆ ಲಕ್ಷ್ಮೀದೇವಿ ಆಸೀನಳಾಗಿರುವುದರಿಂದ ಲಕ್ಷ್ಮೀನರಸಿಂಹ ಎಂದೂ ಕರೆಯುತ್ತಾರೆ.

ಪೂರ್ವದಲ್ಲಿ ಇದು ದಟ್ಟ ಅರಣ್ಯ ಪ್ರದೇಶ. ಅಗಸ್ತ್ಯ ಮಹರ್ಷಿಗಳು ಇಲ್ಲಿಗೆ ತಪಸ್ಸಿಗೆ ಬರುತ್ತಾರೆ. ಆಂಜನೇಯನನ್ನು ಪ್ರಾರ್ಥಿಸಿಕೊಂಡು “ಇಲ್ಲಿನ ವಾತಾವರಣ ಚೆನ್ನಾಗಿದೆ, ಇಲ್ಲಿ ಒಂದು ಲಿಂಗವನ್ನು ಪ್ರತಿಷ್ಠಾಪನೆ ಮಾಡಬೇಕು” ಎನ್ನುತ್ತಾರೆ. ಕಾಶಿಗೆ ಹೋಗಿ ಲಿಂಗ ತರಲು ಆಂಜನೇಯನಿಗೆ ಸೂಚಿಸುತ್ತಾರೆ. ಅವನು ಕಾಶಿ ಯಿಂದ ಲಿಂಗ ತರುವ ವೇಳೆಗೆ ಇಲ್ಲಿ ಮುಹೂರ್ತ ಮೀರುವ ಸಂದರ್ಭ. ಆಗ ಅಗಸ್ತ್ಯರು ಮರಳಿನಲ್ಲಿ ಒಂದು ಮೂರ್ತಿ ಮಾಡಿ ಆ ಶುಭ ಮುಹೂರ್ತದಲ್ಲಿ ಲಿಂಗ ಪ್ರತಿಷ್ಠಾಪನೆ ಮಾಡುತ್ತಾರೆ. ಆಗ ಆಂಜನೇಯ ಅಲ್ಲಿಗೆ ಬರುತ್ತಾನೆ. ತಾನು ತಂದ ಮೂರ್ತಿ ವ್ಯರ್ಥವಾಯಿತೆಂದು ಅವನು ತನ್ನ ಬಾಲದಿಂದ ಮರಳಿನ ಲಿಂಗಕ್ಕೆ ಹೊಡೆಯುತ್ತಾನೆ. ಆಗ ಅದು ಮೂರು ಭಾಗವಾಗುತ್ತದೆ. ಆಗ ಅಗಸ್ತ್ಯರು ಆಂಜನೇಯನನ್ನು ಸಮಾಧಾನ ಮಾಡುತ್ತಾರೆ, “ನೀನು ತಂದಿರುವ ಲಿಂಗವನ್ನು ಊರ ಬಾಗಿಲಿನಲ್ಲಿ ಪ್ರತಿಷ್ಠಾಪಿಸೋಣ. ಇದರಿಂದ ಇಲ್ಲಿಗೆ ಬರುವ ಭಕ್ತರು ಮೊದಲು ಹನುಮಂತೇಶ್ವರನ ದರ್ಶನ ಮಾಡಿ ಅನಂತರ ಇಲ್ಲಿಗೆ ಬಂದರೆ ಹೆಚ್ಚು ಫಲ ಸಿಗುತ್ತದೆ.” ಈ ರೀತಿ ಊರ ಬಾಗಿಲಿನಲ್ಲಿ ಅದನ್ನು ಪ್ರತಿಷ್ಠಾಪಿಸಿ ಅದಕ್ಕೆ ಹನುಮಂತೇಶ್ವರ ಎಂದು ಕರೆಯುತ್ತಾರೆ. ಅಗಸ್ತ್ಯರು ಪ್ರತಿಷ್ಠಾಪಿಸಿದ್ದರಿಂದ ಇಲ್ಲಿರುವ ಲಿಂಗಕ್ಕೆ ಅಗಸ್ತ್ಯೇಶ್ವರ ಎಂಬ ಹೆಸರು.

ಮೇಲುಕೋಟೆಯಲ್ಲಿ ವೈರಮುಡಿಯಾದ ಐದನೇ ದಿನಕ್ಕೆ ಇಲ್ಲಿ ರಥೋತ್ಸವ. ಶ್ರಾವಣ ಮಾಸದ ಎಲ್ಲ ಶನಿವಾರದಂದೂ ವಿಶೇಷ ಅಭಿಷೇಕ. ನರಸಿಂಹ ಜಯಂತಿ, ಪವಿತ್ರೋತ್ಸವ ಮುಖ್ಯವಾದವು. ಪ್ರತಿ ಮಂಗಳವಾರ ಅಭಿಷೇಕ ಉಂಟು.

ದರ್ಶನ ಸಮಯ : ಬೆಳಗ್ಗೆ ೮-೩೦ ರಿಂದ ಮಧ್ಯಾಹ್ನ ೧ ಗಂಟೆ ಮತ್ತು ಸಂಜೆ ೫-೩೦ ರಿಂದ ೮-೩೦ ರವರೆಗೆ. ವಿಶೇಷ ದಿನಗಳಂದು ದೇವಸ್ಥಾನ ಇನ್ನೂ ಹೆಚ್ಚು ಸಮಯ ತೆಗೆದಿರುತ್ತದೆ. ಮೈಸೂರಿನಿಂದ ೩೨ ಕಿ.ಮೀ. ಬಸ್ ಅಥವಾ ಖಾಸಗಿ ವಾಹನಗಳ ಮೂಲಕ ಇಲ್ಲಿಗೆ ತಲಪಬಹುದು.

ಹಿಂದಿನ ಲೇಖನಮತ್ತೊಬ್ಬರಿಗೆ ಕೇಡನ್ನು ಬಯಸದೆ ಉತ್ತಮ ವ್ಯಕ್ತಿಯಾಗಿ:  ಇಳೈ ಆಳ್ವಾರ್ ಸ್ವಾಮೀಜಿ
ಮುಂದಿನ ಲೇಖನವಿಳಂಬವನ್ನು ಕ್ಷಮಿಸಲು ವಕೀಲರ ನಿರ್ಲಕ್ಷ್ಯವೇ ಸಾಕು: ಕೇರಳ ಹೈಕೋರ್ಟ್