ದಾವಣಗೆರೆ : ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಿಂದ ಜನರ ಆರ್ಥಿಕಾಭಿವೃದ್ದಿಯಾಗುತ್ತಿದ್ದು ಯೋಜನೆಗಳ ಅನುಷ್ಟಾನಕ್ಕೆ ಅಪಸ್ವರವೆತ್ತಿದವರು ರಾಜ್ಯಕ್ಕೆ ಬಂದು ಗ್ಯಾರಂಟಿ ಯೋಜನೆಗಳ ಅಧ್ಯಯನ ಮಾಡುವಂತಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ತಿಳಿಸಿದರು.
ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್ ಹಾಗೂ ಇತರ ಇಲಾಖೆಗಳ ಸಹಯೋಗದಲ್ಲಿ ಹಮ್ಮಿಕೊಳ್ಳಲಾದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಕಚೇರಿಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಚಿವರು ತಿಳಿಸಿದಂತೆ, ಪ್ರತಿ ಕುಟುಂಬಕ್ಕೆ ತಿಂಗಳಿಗೆ ಸರಾಸರಿ ₹4,000 ರಿಂದ ₹6,000 ವರೆಗೆ ಈ ಯೋಜನೆಗಳಿಂದ ಲಾಭವಾಗುತ್ತಿದೆ.
ಪಂಚ ಗ್ಯಾರಂಟಿ ನೇರವಾಗಿ ಜನರಿಗೆ ತಲುಪುವುದರಿಂದ ಇನ್ನೂ ಪಾರದರ್ಶಕವಾಗಿ ಯೋಜನೆಗಳನ್ನು ಅನುಷ್ಟಾನ ಮಾಡಿ ಜನರಿಗೆ ತಲುಪಿಸುವ ಕೆಲಸವನ್ನು ಸಮಿತಿಯಿಂದ ಮಾಡಬೇಕಾಗಿದೆ. ಆರ್ಥಿಕ ಸೌಲಭ್ಯ ನೀಡುವ ಗೃಹಲಕ್ಷ್ಮಿ, ಯುವನಿಧಿ ಯೋಜನೆಗಳನ್ನು ಪ್ರತಿ ತಿಂಗಳು 1 ರಿಂದ 5 ನೇ ತಾರೀಖಿನೊಳಗೆ ತಲುಪಿಸುವಂತೆ ಮಾಡಬೇಕೆಂದರು.
ಶಕ್ತಿ ಯೋಜನೆಯಡಿ ದಾವಣಗೆರೆ ಕೆಎಸ್‍ಆರ್ ಟಿಸಿಗೆ ರೂ.213.48 ಕೋಟಿ, ಅನ್ನಭಾಗ್ಯ ಯೋಜನೆಯಡಿ 3.44 ಲಕ್ಷ ಕಾರ್ಡ್‍ದಾರರು ಹಾಗೂ 12.42 ಲಕ್ಷ ಫಲಾನುಭವಿಗಳಿಗೆ ರೂ.346 ಕೋಟಿ, ಗೃಹಜ್ಯೋತಿ ಯೋಜನೆಯಡಿ 5.03 ಲಕ್ಷ ಆರ್.ಆರ್.ಸಂಖ್ಯೆ ಹೊಂದಿದ ಕುಟುಂಬಗಳಿಗೆ ರೂ.409 ಕೋಟಿ ವಿದ್ಯುತ್ ಸಬ್ಸಿಡಿ, ಗೃಹಲಕ್ಷ್ಮಿಯಡಿ 3.6 ಲಕ್ಷ ಯಜಮಾನಿಯರಿಗೆ ರೂ.1255 ಕೋಟಿ ಮತ್ತು ಯುವನಿಧಿಯಡಿ 9094 ವಿದ್ಯಾರ್ಥಿಗಳಿಗೆ ರೂ.13 ಕೋಟಿ ನಿರುದ್ಯೋಗ ಭತ್ಯೆ ನೀಡಲಾಗಿದೆ ಎಂದರು.
“ಈ ಯೋಜನೆಗಳು ರಾಜ್ಯದ ಆರ್ಥಿಕ ಸ್ಥಿತಿಗೆ ಹೊರೆ ಆಗುತ್ತವೆ ಎಂದು ಹೇಳಿದವರು ಈಗ ಬಂದು ಅಧ್ಯಯನ ಮಾಡುತ್ತಿದ್ದಾರೆ. ಈ ಯೋಜನೆಗಳು ಜನರ ಬದುಕಿನಲ್ಲಿ ನಿಜವಾದ ಬದಲಾವಣೆ ತರುತ್ತಿವೆ” ಎಂದು ಸಚಿವರು ಹೇಳಿದರು.
ಅನ್ನಭಾಗ್ಯ ಯೋಜನೆಯಡಿ ಕಾರ್ಡ್‍ದಾರರಿಗೆ ರೂ.11821 ಕೋಟಿ, ಗೃಹಜ್ಯೋತಿಯಡಿ 1.63 ಕೋಟಿ ಕುಟುಂಬಗಳಿಗೆ ರೂ.14950 ಕೋಟಿ, ಗೃಹಲಕ್ಷ್ಮಿಯಡಿ 1.22 ಕೋಟಿ ಯಜಮಾನಿಯರಿಗೆ ರೂ.42552 ಕೋಟಿ ಮತ್ತು ಯುವನಿಧಿಯಡಿ 2.74 ಲಕ್ಷ ನಿರುದ್ಯೋಗಿ ಪದವೀಧರರು ಮತ್ತು ಡಿಪ್ಲೊಮಾ ಪಾಸಾದ ನಿರುದ್ಯೋಗಿಗಳಿಗೆ ರೂ.326.95 ಕೋಟಿ ನಿರುದ್ಯೋಗ ಭತ್ಯೆ ನೀಡಲಾಗಿದ್ದು ಪಂಚ ಗ್ಯಾರಂಟಿ ಯೋಜನೆಗಳು ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೆ ರೂ.82000 ಕೋಟಿಯಷ್ಟು ವೆಚ್ಚ ಮಾಡಲಾಗಿದೆ. ಇದರಿಂದ ಮಹಿಳೆಯರ ಆದಾಯ ಹೆಚ್ಚಳವಾಗಿ ಕೊಡು, ಕೊಳ್ಳುವಿಕೆ ಸಾಮಥ್ಯ ಹೆಚ್ಚಿದೆ. ಯಾವುದೇ ಕಾರಣಕ್ಕೂ ಈ ಯೋಜನೆಗಳು ನಿಲ್ಲುವುದಿಲ್ಲ ಎಂದರು.
ಹಿಂದೆ ಗುಜರಾತ್ ಮಾದರಿ ಎಂದು ಹೇಳಲಾಗುತ್ತಿತ್ತು, ಆದರೆ ಈಗ ಕರ್ನಾಟಕ ಮಾದರಿ ಎಂದು ಹೇಳುವಂತಾಗಿದ್ದು ಅನೇಕ ರಾಜ್ಯಗಳು ನಮ್ಮ ಪಂಚ ಗ್ಯಾರಂಟಿಗಳನ್ನು ಅನುಕರಣೆ ಮಾಡುವ ನಿಟ್ಟಿನಲ್ಲಿ ಸಾಗಿವೆ. ಪಂಚ ಗ್ಯಾರಂಟಿ ಯೋಜನೆಗಳು ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಿದೆ. ಶಕ್ತಿ ಯೋಜನೆಯಡಿ ರಾಜ್ಯದಲ್ಲಿ 450 ಕೋಟಿಯಷ್ಟು ಮಹಿಳೆಯರು ಎಲ್ಲಾ ಜಿಲ್ಲೆಗಳಿಂದ ಪ್ರಯಾಣಿಸಿದ್ದು ಇದಕ್ಕಾಗಿ ರೂ.11188 ಕೋಟಿ ವೆಚ್ಚ ಭರಿಸಲಾಗಿದೆ.