ಮನೆ ಸಾಹಿತ್ಯ ಗುರು ಪೂರ್ಣಿಮೆಯ ಶುಭಾಶಯಗಳು

ಗುರು ಪೂರ್ಣಿಮೆಯ ಶುಭಾಶಯಗಳು

0

ಇಂದು ದೇಶದೆಲ್ಲೆಡೆ ಗುರುಪೂರ್ಣಿಮೆಯನ್ನು ಆಚರಿಸಲಾಗುತ್ತಿದೆ. ಭಾರತೀಯ ಸಾಂಸ್ಕೃತಿಯಲ್ಲಿ ಗುರುವಿಗೆ ಮಹತ್ವದ ಸ್ಥಾನವನ್ನು ನೀಡಲಾಗಿದೆ.

ಮನುಷ್ಯನನ್ನು ‘ಮನುಷ್ಯ’ನನ್ನಾಗಿಸುವಂಥ ತತ್ತ್ವವೇ ಗುರುತತ್ತ್ವ. ನಮ್ಮ ಜೀವನದ ದಾರಿ ಹೇಗಿರಬೇಕು, ಹೇಗಿದ್ದರೆ ನಮ್ಮ ಜೀವನ ಸುಂದರವೂ, ಸಾರ್ಥಕವೂ ಆಗಿರಬಲ್ಲದು ಎಂಬ ‘ಶಿಕ್ಷಣ’ವನ್ನು ಕೊಡುವವನೇ ಗುರು. ನಮ್ಮ ಸಂಸ್ಕೃತಿಯಲ್ಲಿ ಹೀಗಾಗಿಯೇ ಗುರುತತ್ತ್ವವನ್ನು ತುಂಬ ಆದರಿಸಲಾಗಿದೆ.

ಗುರು ಪೂರ್ಣಿಮೆ ಎನ್ನುವುದು ಗುರುಗಳ ಸ್ಮರಣೆಗೆ ಹಾಗೂ ಅವರ ಆಶೀರ್ವಾದ ಪಡೆಯಲು ಇರುವ ಒಂದು ಸುಸಂದರ್ಭ ಎನ್ನಬಹುದು. ಗುರುವಿನ ಆಶೀರ್ವಾದ ಅಥವಾ ಹಾರೈಕೆಯು ಇದ್ದರೆ ವ್ಯಕ್ತಿ ಜೀವನದಲ್ಲಿ ಅತ್ಯಂತ ಉತ್ತಮ ಸ್ಥಾನವನ್ನು ಪಡೆದುಕೊಳ್ಳುತ್ತಾನೆ ಎನ್ನಲಾಗುವುದು. ಗುರು ಎನ್ನುವ ಎರಡು ಪದಗಳೇ ಅತ್ಯುತ್ತಮ ಅರ್ಥವನ್ನು ನೀಡುತ್ತವೆ.

ಗು ಮತ್ತು ರು ಎನ್ನುವ ಮೂಲ ಪದಗಳನ್ನು ಹೊಂದಿದೆ. ಸಂಸ್ಕೃತ ಭಾಷೆಯಲ್ಲಿ “ಗು” ಅಂದರೆ ಅಂಧಕಾರ ಅಥವಾ ಅಜ್ಞಾನ. “ರು” ಅಂದರೆ ಕಳೆಯುವ ಅಥವಾ ದೂರ ಮಾಡುವ ಎಂದರ್ಥ. ಅದಕ್ಕೆ ಗುರು ಅಂದರೆ ಅಂಧಕಾರ ಅಥವಾ ಅಜ್ಞಾನವನ್ನು ದೂರ ಮಾಡುವವರು ಎಂದರ್ಥ. ಬಹುತೇಕ ಜನರು ಗುರುವನ್ನು ತಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಪರಿಗಣಿಸುತ್ತಾರೆ. ನಮ್ಮ ಬುದ್ಧಿಯಲ್ಲಿ ಇದ್ದ ಕತ್ತಲು ಅಥವಾ ಅಜ್ಞಾನವನ್ನು ಓಡಿಸಿ, ಜ್ಞಾನ ಎನ್ನುವ ಬೆಳಕನ್ನು ನೀಡುವವನೇ ಗುರು. ಅಂತಹ ಗುರುವಿಗೆ ಗುಲಾಮನಾದರೆ ಸಾಕಷ್ಟು ವಿದ್ಯೆ ಮತ್ತು ಜ್ಞಾನ ದೊರೆಯುವುದು. ಜೀವನದಲ್ಲಿ ಉತ್ತಮ ಸ್ಥಾನವನ್ನು ಪಡೆದುಕೊಳ್ಳಲು ಸಾಧ್ಯವಾಗುವುದು ಎಂದು ಹೇಳಲಾಗುತ್ತದೆ.

ಗುರುವಿಗೆ ಸಂಬಂಧಿಸಿ ಶ‍್ಲೋಕ ಹೀಗಿದೆ:

ಗುರುರ್ಬ್ರಹ್ಮಾ ಗುರುರ್ವಿಷ್ಣುಃ ಗುರುರ್ದೇವೋ ಮಹೇಶ್ವರಃ ಗುರುಸ್ಸಾಕ್ಷಾತ್ ಪರಂ ಬ್ರಹ್ಮ ತಸ್ಮೈ ಶ್ರೀಗುರವೇ ನಮಃ

ಇದರ ತಾತ್ಪರ್ಯ:

‘ಗುರುವೇ ಬ್ರಹ್ಮ, ಗುರುವೇ ವಿಷ್ಣು, ಗುರುವೇ ಮಹೇಶ್ವರ; ಮಾತ್ರವಲ್ಲ, ಗುರುವೇ ಸಾಕ್ಷಾತ್‌ ಪರಬ್ರಹ್ಮವಸ್ತುವೂ ಹೌದು. ಗುರುವಿಗೆ ನಮನಗಳು.

’ಭಾಗವತದಲ್ಲಿ ಗುರುವಿನ ಪ್ರಸ್ತಾಪ ಬರುತ್ತದೆ. ಅಲ್ಲಿ ಇಪ್ಪತ್ತನಾಲ್ಕು ಗುರುಗಳ ಒಕ್ಕಣೆ ಇದೆ: ಭೂಮಿ, ಗಾಳಿ, ಆಕಾಶ, ನೀರು, ಬೆಂಕಿ, ಚಂದ್ರ, ಸೂರ್ಯ, ಪಾರಿವಾಳ, ಹೆಬ್ಬಾವು, ಸಮುದ್ರ, ದುಂಬಿ, ಜೇನುನೊಣ, ಆನೆ, ಜೇನನ್ನು ಸಂಗ್ರಹಿಸುವವನು, ಜಿಂಕೆ, ಮೀನು, ವೇಶ್ಯೆ, ಕುರರಪಕ್ಷಿ, ಮಗು, ಕನ್ಯೆ, ಬಾಣವನ್ನು ತಯಾರಿಸುವವನು, ಹಾವು, ಜೇಡರಹುಳು, ಭೃಂಗ – ಇವರೆಲ್ಲರೂ ಗುರುಗಳೇ.

ಈ ಇಪ್ಪತ್ತನಾಲ್ಕು ‘ಗುರು’ಗಳನ್ನು ಗಮನಿಸಬೇಕು. ಇವು ಪ್ರಕೃತಿಯ ಎಲ್ಲ ವಿವರಗಳಿಗೂ ಸಂಕೇತವಾಗಿವೆ. ಎಂದರೆ ಸೃಷ್ಟಿಯ ಒಂದೊಂದು ವಿವರವೂ ನಮಗೆ ಗುರುವಾಗಬಲ್ಲದು; ಎಲ್ಲರಿಂದಲೂ ಎಲ್ಲವುಗಳಿಂದಲೂ ಕಲಿಯುವಂಥದ್ದು ಇದ್ದೇ ಇರುತ್ತದೆ. ಸೃಷ್ಟಿ–ಸ್ಥಿತಿ–ಸಂಹಾರಗಳನ್ನು ನಡೆಸುವವರು ಬ್ರಹ್ಮ–ವಿಷ್ಣು–ಮಹೇಶ್ವರರು. ಗುರುವೇ ನಮ್ಮ ಪಾಲಿಗೆ ಸೃಷ್ಟಿಕರ್ತ, ಸ್ಥಿತಿಕಾರಕ, ಲಯಕಾರಕ; ಮಾತ್ರವಲ್ಲ, ಸಾಕ್ಷತ್‌ ಪರಬ್ರಹ್ಮವೂ ಗುರುವೇ ಎನ್ನುತ್ತಿದೆ ಶ್ಲೋಕ.

ಎಂದರೆ ನಮಗೆ ಜನ್ಮ ಕೊಡುವವನೂ, ನಮ್ಮನ್ನು ಕಾಪಾಡುವವನೂ, ಕೊನೆಗೆ ನಾಶಮಾಡಬಲ್ಲವನೂ ಗುರುವೇ ಆಗಿದ್ದಾನೆ; ಅಷ್ಟೇಕೆ, ಲೋಕೋತ್ತರ ತತ್ತ್ವವೂ, ನಮ್ಮ ಆನಂದಸ್ವರೂಪವೂ ಗುರುವೇ ಆಗಿದ್ದಾನೆ ಎಂಬುದು ಇದರ ತಾತ್ಪರ್ಯ‍