ಮನೆ ರಾಷ್ಟ್ರೀಯ ಜ್ಞಾನವಾಪಿ ಮಸೀದಿ ವಿವಾದ: ಯಾರ ಅರ್ಜಿ ವಿಚಾರಣೆ ಮೊದಲಿಗೆ? ಇಂದು ಕೋರ್ಟ್‌ ಆದೇಶ

ಜ್ಞಾನವಾಪಿ ಮಸೀದಿ ವಿವಾದ: ಯಾರ ಅರ್ಜಿ ವಿಚಾರಣೆ ಮೊದಲಿಗೆ? ಇಂದು ಕೋರ್ಟ್‌ ಆದೇಶ

0

ವಾರಾಣಸಿ (Varanasi)- ಜ್ಞಾನವಾಪಿ ಮಸೀದಿಗೆ ಸಂಬಂಧಿಸಿದಂತೆ ಹಿಂದೂಗಳು ಸಲ್ಲಿಸಿದ ಅರ್ಜಿಯನ್ನು ಮೊದಲು ವಿಚಾರಣೆ ನಡೆಸಬೇಕೇ ಅಥವಾ ಮುಸ್ಲಿಮರು ಸಲ್ಲಿಸಿರುವ ಅರ್ಜಿಯನ್ನು ಮೊದಲು ವಿಚಾರಣೆಗೆ ಒಳಪಡಿಸಬೇಕೇ ಎಂಬುದರ ಬಗ್ಗೆ ವಾರಾಣಸಿ ಜಿಲ್ಲಾ ಸೆಷನ್ಸ್ ನ್ಯಾಯಾಲಯವು ಇಂದು ಆದೇಶ ನೀಡಲಿದೆ.

‘ಜ್ಞಾನವಾಪಿ ಮಸೀದಿಯಲ್ಲಿ ದೇವತೆಗಳ ವಿಗ್ರಹಗಳಿವೆ. ಅವುಗಳ ಪೂಜೆಗೆ ಅವಕಾಶ ಕಲ್ಪಿಸಿ’ ಎಂದು ಹಿಂದೂ ಮಹಿಳೆಯರು ಸಲ್ಲಿಸಿರುವ ಸಿವಿಲ್ ಅರ್ಜಿಯು ನ್ಯಾಯಾಲಯದ ಮುಂದೆ ಇದೆ. ಮಸೀದಿಯಲ್ಲಿ ಹಲವು ದಶಕಗಳಿಂದ ನಮಾಜ್ ಮಾಡಲಾಗುತ್ತಿದೆ. 1991ರ ಪೂಜಾ ಸ್ಥಳಗಳ ಕಾಯ್ದೆಯ ಅನ್ವಯ ಮಸೀದಿಯ ಮೇಲೆ ಸಿವಿಲ್ ದಾವೆ ಹೂಡಲು ಸಾಧ್ಯವಿಲ್ಲ. ಹೀಗಾಗಿ ಹಿಂದೂಗಳ ಅರ್ಜಿಯನ್ನು ತಕ್ಷಣವೇ ವಜಾ ಮಾಡಬೇಕು ಎಂದು ಜ್ಞಾನವಾಪಿ ಮಸೀದಿ ನಿರ್ವಹಣೆಯ ಹೊಣೆ ಹೊತ್ತಿರುವ ಅಂಜುಮಾನ್ ಇಂತೆ ಝಾಮಿಯಾ ಸಮಿತಿಯು ಸಲ್ಲಿಸಿರುವ ಮತ್ತೊಂದು ಅರ್ಜಿಯು ಜಿಲ್ಲಾ ನ್ಯಾಯಾಲಯದ ಮುಂದೆ ಇದೆ.

ನ್ಯಾಯಾಲಯ ಕಮಿಷನ್ ಈಗಾಗಲೇ ವರದಿ ಸಲ್ಲಿಸಿದೆ. ನಮ್ಮ ಅರ್ಜಿಯನ್ನೇ ವಿಚಾರಣೆಗೆ ಎತ್ತಿಕೊಳ್ಳಿ ಎಂದು ಹಿಂದೂ ಮಹಿಳೆಯರ ಪರ ವಕೀಲರು ವಾದಿಸಿದರು. ‘ಹಿಂದೂಗಳು ಸಲ್ಲಿಸಿರುವ ಅರ್ಜಿ ವಿಚಾರಣೆಗೆ ಯೋಗ್ಯವಲ್ಲ’ ಎಂದು ಮಸೀದಿ ನಿರ್ವ ಹಣಾ ಸಮಿತಿ ವಾದ ಮಂಡಿಸಿತು. ವಾದ ಆಲಿಸಿದ ಜಿಲ್ಲಾ ನ್ಯಾಯಾಧೀಶರು, ‘ಯಾವ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಳ್ಳಬೇಕು ಎಂಬುದನ್ನು ಮಂಗಳವಾರ ಹೇಳುತ್ತೇವೆ’ ಎಂದು ಹೇಳಿದ್ದರು.

ಈ ಎರಡೂ ಅರ್ಜಿಗಳನ್ನು ಮೊದಲು ವಾರಾಣಸಿ ಜಿಲ್ಲಾ ಸಿವಿಲ್ ನ್ಯಾಯಾಲಯದಲ್ಲಿ ಸಲ್ಲಿಸಲಾಗಿತ್ತು. ಮಸೀದಿಯಲ್ಲಿ ವಿಡಿಯೋ ಸಮೀಕ್ಷೆ ನಡೆಸುವಂತೆ ಸಿವಿಲ್ ನ್ಯಾಯಾಲಯವು ಆದೇಶಿಸಿತ್ತು. ಇದಕ್ಕಾಗಿ ನ್ಯಾಯಾಲಯ ಕಮಿಷನ್ ಅನ್ನು ನೇಮಿಸಿತ್ತು. ಈ ಆದೇಶದ ವಿರುದ್ಧ ಮಸೀದಿ ಸಮಿತಿಯು ಅಲಹಾಬಾದ್‌ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ಅದು ತಿರಸ್ಕೃತವಾಗಿತ್ತು. ಆನಂತರ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು.

ಈ ಮಧ್ಯೆ, ನ್ಯಾಯಾಲಯವು ನೇಮಿಸಿದ್ದ ಕಮಿಷನ್‌ ಮಸೀದಿಯಲ್ಲಿ ಸಮೀಕ್ಷೆ ನಡೆಸಿತ್ತು. ಸಮೀಕ್ಷೆಯ ವಿವರಗಳು ಸೋರಿಕೆಯಾಗಿದ್ದವು. ಮಸೀದಿಯ ಕೊಳದಲ್ಲಿ ಶಿವಲಿಂಗ ಪತ್ತೆಯಾಗಿದೆ ಎಂದು ಹೇಳಲಾಗಿತ್ತು. ವರದಿ ಸಲ್ಲಿಕೆಯಾಗುವುದಕ್ಕೆ ಮುನ್ನವೇ ಸಿವಿಲ್ ನ್ಯಾಯಾಲಯವು, ಶಿವಲಿಂಗ ಪತ್ತೆಯಾಗಿದೆ ಎಂದು ಹೇಳಲಾದ ಸ್ಥಳದಲ್ಲಿ ನಿರ್ಬಂಧ ವಿಧಿಸಿತ್ತು.

ಮಸೀದಿ ನಿರ್ವಹಣಾ ಸಮಿತಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌, ವಾರಾಣಸಿ ಸಿವಿಲ್ ನ್ಯಾಯಾಲಯದಿಂದ ಜಿಲ್ಲಾ ನ್ಯಾಯಾಲಯಕ್ಕೆ ಅರ್ಜಿಯ ವಿಚಾರಣೆಯನ್ನು ವರ್ಗಾಯಿಸಿತ್ತು.

ನೂತನ ಅರ್ಜಿ: ಈ ಮಧ್ಯೆ ವಿಡಿಯೋ ಸಮೀಕ್ಷೆ ವೇಳೆ ಪತ್ತೆಯಾಗಿರುವ ಶಿವಲಿಂಗಕ್ಕೆ ಪ್ರತಿದಿನ ಪೂಜೆ ಸಲ್ಲಿಸಲು ಅನುಮತಿ ನೀಡಿ ಎಂದು ಕೋರಿ ಕಾಶಿ ವಿಶ್ವನಾಥ ದೇವಾಲಯದ ಪ್ರಧಾನ ಅರ್ಚಕ ಕುಲಪತಿ ತಿವಾರಿ ಅವರು ಸೋಮವಾರ ನೂತನ ಅರ್ಜಿಯನ್ನು ಸಲ್ಲಿಸಿದ್ದಾರೆ.

ಹಿಂದಿನ ಲೇಖನಪತ್ನಿಯ ಜೀವನಾಂಶ ಭರಿಸುವ ಬದಲು ಕಾರು ಖರೀದಿಸಲು ಹೊರಟಿದ್ದ ಪತಿಯ ಬ್ಯಾಂಕ್ ಖಾತೆ ಸ್ಥಗಿತಗೊಳಿಸಿದ ಕೋರ್ಟ್
ಮುಂದಿನ ಲೇಖನಹುಬ್ಬಳ್ಳಿಯಲ್ಲಿ ಸರಣಿ ಅಪಘಾತ: 8 ಮಂದಿ ಸಾವು